Advertisement

ಮೂವರ ಬಳಿ ಸಿಕ್ಕಿದ್ದು 93 ಲ್ಯಾಪ್‌ಟಾಪ್‌!

11:50 AM Sep 19, 2017 | Team Udayavani |

ಬೆಂಗಳೂರು: ಸಾಫ್ಟ್ವೇರ್‌ ಎಂಜಿನಿಯರ್‌ಗಳನ್ನೇ ಟಾರ್ಗೆಟ್‌ ಮಾಡಿಕೊಂಡು ಅವರ ಮನೆಗಳಿಗೆ ನುಗ್ಗಿ ಲ್ಯಾಪ್‌ಟಾಪ್‌ ಕಳವು ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರು ಸೇರಿದಂತೆ ಮೂವರು ಆರೋಪಿಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Advertisement

ತಮಿಳುನಾಡು ಮೂಲದ ರಮೇಶ್‌ (27) ಮಣಿಕಂಠ (29) ಹಾಗೂ ಮಲ್ಲೇಶ್ವರ ನಿವಾಸಿ ರಾಧಾಕೃಷ್ಣ (28) ಬಂಧಿತರು. ಈ ಮೂವರಿಂದ 34 ಲಕ್ಷ ರೂ.ಮೌಲ್ಯದ 93 ಲ್ಯಾಪ್‌ಟಾಪ್‌ಗ್ಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೂವರು ಆರೋಪಿಗಳನ್ನು ಎರಡು ಠಾಣೆಗಳಲ್ಲಿ ದಾಖಲಾಗಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಈ ಪೈಕಿ ರಮೇಶ್‌ ಮತ್ತು ಮಣಿಕಂಠನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದು, ರಾಧಾಕೃಷ್ಣನನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ರಮೇಶ್‌ ಲ್ಯಾಪ್‌ಟಾಪ್‌ ಕಳವು ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು, ಸಾಫ್ಟ್ವೇರ್‌ ಎಂಜಿನಿಯರ್‌ಗಳು ನೆಲೆಸಿರುವ ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ ಕೃತ್ಯವೆಸಗುತ್ತಿದ್ದ ಎಂದು ಅವರು ತಿಳಿಸಿದರು.

ಮಣಿಕಂಠ ಬಿಇ ಪದವೀಧರ: ತಮಿಳುನಾಡಿನ ಅಣ್ಣಾ ವಿವಿಯಲ್ಲಿ ಬಿಇ ಕಂಪ್ಯೂಟರ್‌ ಸೈನ್ಸ್‌ ಪದವಿ ಪಡೆದಿರುವ ಆರೋಪಿ ಮಣಿಕಂಠ, ತನ್ನ ಸ್ನೇಹಿತ ರಮೇಶ್‌ ತಂದು ಕೊಡುವ ಲ್ಯಾಪ್‌ಟಾಪ್‌ಗ್ಳನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದ. ಚೆನ್ನೈನ ಭನವಗಿರಿ ಬಡಾವಣೆಯ ತನ್ನ ಮನೆಯಲ್ಲೇ ಕಂಪ್ಯೂಟರ್‌ ಸೇಲ್ಸ್‌ ಮತ್ತು ಸರ್ವೀಸ್‌ ಸೆಂಟರ್‌ ತೆರೆದುಕೊಂಡಿದ್ದ ಮಣಿಕಂಠ, ತನ್ನ ಬಳಿ ಬರುವ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ ಠಾಣೆ: ಸಾಫ್ಟ್ವೇರ್‌ ಎಂಜಿನಿಯರ್‌ಗಳು ನೆಲೆಸಿರುವ ಪಿಜಿಗಳನ್ನೇ ಗುರಿಯಾಗಿಸಿಕೊಂಡು ಲ್ಯಾಪ್‌ಟಾಪ್‌ಗ್ಳನ್ನು ಕಳವು ಮಾಡುತ್ತಿದ್ದ ಮಲ್ಲೇಶ್ವರಂ ನಿವಾಸಿ ರಾಧಾಕೃಷ್ಣನನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಮೂಕನಂತೆ ನಟಿಸಿ ಮನೆಗೆ ನುಗ್ಗುತ್ತಿದ್ದ: ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ, ಮೈಕೋ ಲೇಔಟ್‌, ಕೋರಮಂಗಲ ಬ್ಯಾಟರಾಯನಪುರ ಎಚ್‌ಎಸ್‌ಆರ್‌ ಲೇಔಟ್‌ ವ್ಯಾಪ್ತಿಯಲ್ಲಿ ಐಟಿ ಉದ್ಯೋಗಿಗಳು ಹೆಚ್ಚು ನೆಲೆಸಿರುವ ಪ್ರದೇಶಗಳಲ್ಲಿಯೇ ಸಂಚು ರೂಪಿಸುತ್ತಿದ್ದ. ಈ ಪ್ರದೇಶಗಳಲ್ಲಿ ಕೈಯಲ್ಲಿ ಕರಪತ್ರ ಹಿಡಿದುಕೊಂಡು ಮೂಕನಂತೆ ನಟಿಸುತ್ತ ಭಿಕ್ಷಾಟನೆ ನೆಪದಲ್ಲಿ ಮನೆ ಮನೆ ಸುತ್ತುತ್ತಿದ್ದ.

ಬಾಗಿಲು ತೆರೆದಿರುವ ಮನೆಗಳು ಕಂಡು ಬಂದರೆ ಕೂಡಲೇ ಮನೆಗೆ ನುಗ್ಗುತ್ತಿದ್ದ ರಮೇಶ್‌, ಕುಟುಂಬಸ್ಥರನ್ನು ಯಾಮಾರಿಸಿ ಕ್ಷಣಾರ್ಧದಲ್ಲಿ ಲ್ಯಾಪ್‌ಟಾಪ್‌, ಮೊಬೈಲ್‌ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ. ಕಳೆದ 2 ವರ್ಷದಿಂದ ನಗರದ ವಿವಿಧೆಡೆ ಇದೇ ಕೃತ್ಯವೆಸುಗುತ್ತಿದ್ದಾನೆ. ಇದನ್ನು ಮತ್ತೂಬ್ಬ ಆರೋಪಿ ಮಣಿಕಂಠನಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಅವರು ತಿಳಿಸಿದರು.

ಶೇ.75ರಷ್ಟು ಮಂದಿ ಕಳ್ಳರು: ರಮೇಶ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಶಂಕರಪುರ ಗ್ರಾಮದ ನಿವಾಸಿಯಾಗಿದ್ದು, ಅದೇ ಗ್ರಾಮದ ಕೆಲವರ ಜತೆ ತಂಡ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದ. ಈ ಗ್ರಾಮದಲ್ಲಿ ಶೇ.75ರಷ್ಟು ಮಂದಿ ಕಳ್ಳತನವನ್ನೆ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಆರೋಪಿ ರಮೇಶ್‌ ಬಂಧನವಾಗುತ್ತಿದ್ದಂತೆ ಗ್ರಾಮದಲ್ಲಿನ ಬಹುತೇಕ ಮಂದಿ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಡಿಸಿಪಿ ಡಾ ಬೋರಲಿಂಗಯ್ಯ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next