Advertisement

ಮೂರು ಮುಲ್ಲಾ ಕತೆಗಳು

12:33 PM Mar 23, 2019 | |

ಕಳ್ಳರು ನುಗ್ಗಿದ್ದು ! 
ಮುಲ್ಲಾ ತನ್ನ ಹೆಂಡತಿಯೊಂದಿಗೆ ಎಲ್ಲೋ ಪರವೂರಿಗೆ ಹೋಗಿ ಹಿಂತಿರುಗುವ ಹೊತ್ತಿಗೆ ಮನೆಯಲ್ಲಿ ಕಳ್ಳತನವಾಗಿತ್ತು. ಕಳ್ಳರು ಮನೆಯ ಬಹುತೇಕ ಎಲ್ಲವನ್ನೂ ಹೊತ್ತೂಯ್ದಿದ್ದರು. ಮುಲ್ಲಾನ ಹೆಂಡತಿ ಬಾಗಿಲಲ್ಲೇ ಕುಸಿದು ಗೊಳ್ಳೋ ಎಂದು ಗೋಳಾಡತೊಡಗಿದಳು. “”ಇದೆಲ್ಲಾ ನಿಮ್ಮದೇ ತಪ್ಪು. ಹೊರಟ ಮೇಲೆ ಬೀಗ ಸರಿಯಾಗಿ ಹಾಕಿದ್ದೇವಾ ಇಲ್ಲವಾ ಅಂತ ನೋಡಬಾರದಿತ್ತ?” ಎಂದು ಅಳು ಅಳುತ್ತಲೇ ಗಂಡನಿಗೆ ದಬಾಯಿಸಿದಳು. ಈ ಗಲಾಟೆಗೆ ಸುತ್ತಮುತ್ತಲಿನ ಮಂದಿಯೆಲ್ಲ ಮುಲ್ಲಾನ ಮನೆಯಂಗಳದಲ್ಲಿ ಜಮೆಯಾದರು. ಎಲ್ಲರೂ ತಲೆಗೊಂದರಂತೆ ಮಾತಾಡತೊಡಗಿದರು.
“”ಬಾಗಿಲು ಭದ್ರವಾಗಿರಲಿಲ್ಲ, ಅದಕ್ಕೇ ಕಳ್ಳರು ನುಗ್ಗಿದ್ದು” ಎಂದ ಒಬ್ಬ.
“”ಹೊರಡುವ ಮೊದಲು ಕಿಟಕಿ ಬಾಗಿಲು ಸರಿಯಾಗಿ ಭದ್ರಪಡಿಸಬೇಕಿತ್ತು” ಮತ್ತೂಬ್ಬ ಹೇಳಿದ.
“”ಬೀಗ ಹಳೆಯದಾಗಿತ್ತು ಅಂತ ಕಾಣುತ್ತೆ. ಅದಕ್ಕೇ ಸುಲಭದಲ್ಲಿ ಕಿತ್ತು ಬಂದಿದೆ” ಮಗದೊಬ್ಬ ದನಿಗೂಡಿಸಿದ.
“”ಸಾಕು ನಿಲ್ಸಿ! ಎಲ್ಲಾ ಸೇರಿ ನನಗೊಬ್ಬನಿಗೇ ಬಯ್ತಿದ್ದೀರಲ್ಲ?” ಎಂದ ಮುಲ್ಲಾ ಗಟ್ಟಿದನಿಯಲ್ಲಿ. 
ಗುಂಪು ಕ್ಷಣಕಾಲ ಸ್ತಬ್ಧವಾಯಿತು. ಅಲ್ಲವೋ ನಸ್ರುದ್ದೀನ, 
“”ನಿನಗಲ್ಲದೆ ಮತ್ಯಾರಿಗೆ ಬಯ್ಯಬೇಕೋ?” ಎನ್ನುತ್ತ ವೃದ್ಧನೊಬ್ಬ ಮುಂದೆ ಬಂದ.
ಅಳುತ್ತ ಹೇಳಿದ ಮುಲ್ಲಾ, “”ಸ್ವಲ್ಪ ಆ ಕಳ್ಳನನ್ನೂ ಬೈಯಿರಿ!”

Advertisement

ಚಂದ್ರ ಬಾವಿಗೆ ಬಿದ್ದ 
ರಾತ್ರಿಯ ಹೊತ್ತು ಅದ್ಯಾವುದೋ ಕೆಲಸಕ್ಕೆ ಹೊರಹೋಗಿದ್ದ ಮುಲ್ಲಾ ಪೇಟೆದಾರಿಯಲ್ಲಿ ನಡೆದುಬರುತ್ತಿದ್ದ. ಹಾಗೆ ನಡೆಯುತ್ತಿದ್ದವನಿಗೆ ಪೇಟೆಯ ಮಧ್ಯದಲ್ಲಿದ್ದ ಸಾರ್ವಜನಿಕ ಬಾವಿಯಲ್ಲಿ ಇಣುಕಿನೋಡುವ ಹುಕಿ ಹುಟ್ಟಿತು. ಮೆಲ್ಲನೆ ಅತ್ತ ನಡೆದು ಬಾವಿಯೊಳಗೆ ಇಣುಕಿದ. “ಏನಾಶ್ಚರ್ಯ! ನೀರಿನಲ್ಲಿ ಚಂದ್ರನ ಮುಖ ಕಾಣಿಸಿತವನಿಗೆ. ಅಯ್ಯಯ್ಯೋ! ಚಂದ್ರ ಹೋಗೀ ಹೋಗಿ ನಮ್ಮೂರ ಬಾವಿಗೆ ಬಿದ್ದುಬಿಟ್ಟಿ¨ªಾನೆ. ಹೀಗಾದರೆ ನಮ್ಮ ರಂಜಾನ್‌ ಉಪವಾಸ ಮುಗಿಯುವುದು ಹೇಗೆ? ಈ ಚಂದ್ರನನ್ನು ಹೇಗಾದರೂ ಮಾಡಿ ಬಚಾವು ಮಾಡಬೇಕು’ ಎಂದು ತನ್ನೊಳಗೇ ಹೇಳಿಕೊಂಡ ಮುಲ್ಲಾ ಅತ್ತಿತ್ತ ನೋಡಿ ಕೊನೆಗೆ ಬಾವಿಯ ರಾಟೆಯಲ್ಲಿದ್ದ ಹಗ್ಗವನ್ನೇ ತೆಗೆದು ಅದನ್ನು ಬಾವಿಯೊಳಗೆ ಬೀಸಿ ಒಗೆದ. ಆ ಹಗ್ಗ ಹೋಗಿ ಬಾವಿಯ ಕಲ್ಲುಗಳ ಸಂದಿಯಲ್ಲಿ ಸಿಕ್ಕಿಕೊಂಡಿತು. ರಾತ್ರಿಯ ಕತ್ತಲಲ್ಲಿ ಅದೆಲ್ಲಿ ಕಾಣಬೇಕು ಅವನಿಗೆ. ಮುಲ್ಲಾ ಈಗ ಹಗ್ಗದ ಇನ್ನೊಂದು ತುದಿಯನ್ನು ಗಟ್ಟಿಯಾಗಿ ಹಿಡಿದು ಎಳೆಯತೊಡಗಿದ. ಎಷ್ಟೆಷ್ಟು ಎಳೆದರೂ ಹಗ್ಗ ಮಿಸುಕಾಡಲಿಲ್ಲ. ಕೊನೆಗೆ ಇವನ ಎಳೆತದ ಬಿಗಿಗೆ ಪಕ್ಕಾಗಿ ಹಗ್ಗ ಎರಡು ತುಂಡಾಗಿ ಹೋಯಿತು. ಹಗ್ಗ ಕತ್ತರಿಸಿದಾಗ ಮುಲ್ಲಾ ಬಾವಿಕಟ್ಟೆಯಿಂದ ದೂರಕ್ಕೆ ಹೋಗಿ ಅಂಗಾತ ಬಿದ್ದ. ಆಗ ಕಂಡಿತವನಿಗೆ ಚಂದ್ರಬಿಂಬ ಆಕಾಶದಲ್ಲಿ. “ಅಬ್ಟಾ, ಕೊನೆಗೂ ಬಾವಿಯಿಂದ ಎತ್ತಿ ಆಕಾಶಕ್ಕೆ ಹಾಕಿದೆನಲ್ಲ! ನಾನು ಬಾವಿ ಇಣುಕದೇ ಇದ್ದರೆ ಎಂಥಾ ಫ‌ಜೀತಿಯಾಗಿಬಿಡುತ್ತಿತ್ತು’ ಎಂದು ನಿಟ್ಟುಸಿರುಬಿಟ್ಟ.

ಅರ್ಧರ್ಧ ಹಾಲು
ಮುಲ್ಲಾ ಮತ್ತು ಗೆಳೆಯ ಸಲೀಮ ಇಬ್ಬರೂ ಒಂದು ಹೊಟೇಲಿಗೆ ಹೋದರು. ಇಬ್ಬರೂ ಅರ್ಧರ್ಧ ದುಡ್ಡು ಹಾಕಿ ಒಂದು ಕಪ್‌ ಹಾಲು ತೆಗೆದುಕೊಂಡರು. ಸಲೀಮ ಹೇಳಿದ, “”ನಸ್ರುದ್ದೀನ. ಲೋಟದ ಅರ್ಧ ಭಾಗ ನೀನು ಕುಡಿ. ಉಳಿದ ಅರ್ಧಕ್ಕೆ ನಾನು ಸಕ್ಕರೆ ಬೆರೆಸಿ ಕುಡಿಯುತ್ತೇನೆ”
“”ಅದೇಕೆ ಹಾಗೆ? ಈಗಲೇ ಸಕ್ಕರೆ ಹಾಕು. ನನ್ನ ಭಾಗ ನಾನು ಕುಡಿದು ಉಳಿದದ್ದನ್ನು ನಿನಗೆ ಕೊಡುತ್ತೇನೆ” ಎಂದ ಮುಲ್ಲಾ.
“”ಇಲ್ಲ, ಇಲ್ಲ. ಇಬ್ಬರಿಗಾಗುವಷ್ಟು ಸಕ್ಕರೆ ನನ್ನ ಬಳಿ ಇಲ್ಲ. ಅರ್ಧ ಲೋಟದ ಹಾಲಿಗಾಗುವಷ್ಟು ಮಾತ್ರ ಇದೆ. ಹಾಗಾಗಿ, ನೀನು ಅರ್ಧ ಕುಡಿದ ಮೇಲೆ ಮಿಕ್ಕ ಅರ್ಧ ಭಾಗಕ್ಕೆ ಸಕ್ಕರೆ ಬೆರೆಸುತ್ತೇನೆ” ಸಲೀಮನ ಹಠ ಮುಂದುವರಿಯಿತು. ಮುಲ್ಲಾ ನೇರವಾಗಿ ಹೊಟೇಲಿನೊಳಗೆ ಹೋದವನೇ ಒಂದು ಚಮಚ ಉಪ್ಪು ತೆಗೆದುಕೊಂಡು ಬಂದ. ಹೇಳಿದ, “”ಸರಿ ಹಾಗಾದರೆ. ನಿನ್ನ ಭಾಗಕ್ಕೆ ಸಕ್ಕರೆ ಹಾಕಿಕೋ. ನಾನೀಗ ನನ್ನ ಭಾಗದ ಹಾಲಿಗೆ ಉಪ್ಪು ಬೆರೆಸುತ್ತಿದ್ದೇನೆ”

ಜಾಗರೂಕತೆ
ಒಮ್ಮೆ ಮುಲ್ಲಾನ ಟೋಪಿಯೊಂದು ಕಳವಾಯಿತು. ಅದು ದುಬಾರಿ ಟೋಪಿ. ಒಳ್ಳೇ ಮಸ್ಲಿನ್‌ ಬಟ್ಟೆಯಿಂದ ಮಾಡಿದ್ದು. ವಿದೇಶದ್ದು ಬೇರೆ. ಹತ್ತು ಚಿನ್ನದ ನಾಣ್ಯಗಳಷ್ಟು ಬೆಲೆ ಬಾಳುವಂಥಾದ್ದು. 
“”ಏನಯ್ಯ ನಸ್ರುದ್ದೀನ! ಅಂಥಾ ಬೆಲೆಬಾಳುವ ಟೋಪಿ ಕಳಕೊಂಡೆಯಲ್ಲ! ಅದು ಸಿಗುವುದು ಅನುಮಾನವೇ ಬಿಡು” ಎಂದ ಗೆಳೆಯ ಚಹಾ ಹೀರುತ್ತ.
“”ಗೊತ್ತು ರಫಿ. ಅದಕ್ಕೇ ಅದನ್ನು ತಂದುಕೊಟ್ಟವರಿಗೆ ಒಂದು ಬೆಳ್ಳಿಯ ನಾಣ್ಯ ಕೊಡತೇನೆ ಅಂತ ಹೇಳಿದ್ದೇನೆ” ಎಂದ ಮುಲ್ಲಾ.
“”ಅದೇನೋ ಸರಿಯೇ. ಆದರೆ, ನಿನ್ನ ಟೊಪ್ಪಿ ಅದಕ್ಕಿಂತ ಹೆಚ್ಚು ಬೆಲೆ ಬಾಳುತ್ತಲ್ಲ? ನಾಣ್ಯದ ಆಸೆಗೆ ಟೊಪ್ಪಿ ಮರಳಿಸುತ್ತಾರೆ ಅಂತ ಭಾವಿಸಿದ್ದೀಯಾ? ಬಹುಶಃ ಇಲ್ಲ” ಎಂದ ಗೆಳೆಯ.
“”ಅದಕ್ಕೇ ನಾನು ಟೊಪ್ಪಿಯ ವಿವರದಲ್ಲಿ ಕೂಡ ಸ್ವಲ್ಪ ಬದಲಾಯಿಸಿದ್ದೇನೆ. ಹಳೇದು, ಅಲ್ಲಲ್ಲಿ ಕಿತ್ತುಹೋಗಿದೆ, ಸಾಧಾರಣ ಬಟ್ಟೆಯ ಟೋಪಿ ಅಂತ ಹೇಳಿದ್ದೇನೆ” ವಿವರಿಸಿದ ಮುಲ್ಲಾ.

ರೋಹಿತ್‌ ಚಕ್ರತೀರ್ಥ

Advertisement
Advertisement

Udayavani is now on Telegram. Click here to join our channel and stay updated with the latest news.

Next