ಚಿತ್ರದುರ್ಗ: ಹಸಿರು ವಲಯದಲ್ಲಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೂ ಇದೀಗ ಕೋವಿಡ್ ಮಹಾಮಾರಿ ಕಾಲಿಟ್ಟಿದೆ.
ಗುಜರಾತ್‌ನ ಅಹಮದಾಬಾದ್‌ನಿಂದ ಆಗಮಿಸಿದ್ದ ಮೂರು ಜನ ತಬ್ಲಿಘಿ ಸದಸ್ಯರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
ಪೇಷಂಟ್ ಸಂಖ್ಯೆ 751, 752 ಹಾಗೂ 753 ಚಿತ್ರದುರ್ಗದ ಕೋವಿಡ್ ಸೋಂಕಿತರಾಗಿದ್ದು, ಮೂರು ಜನರ ವಯಸ್ಸು 64 ವರ್ಷ. ಸೋಂಕಿತರನ್ನು ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಜರಾತ್‌ನ ಅಹಮದಾಬಾದ್‌ನಿಂದ 33 ಜನ ತಬ್ಲೀಘಿ ಸದಸ್ಯರು ಮೇ. 5 ರಂದು ಚಿತ್ರದುರ್ಗಕ್ಕೆ ಆಗಮಿಸಿದ್ದರು. ಈ 33 ಜನರಲ್ಲಿ 18 ಜನ ತುಮಕೂರು ಜಿಲ್ಲೆಗೆ ಸೇರಿದ್ದು, 15 ಜನ ಚಿತ್ರದುರ್ಗ ನಗರದವರಾಗಿದ್ದರು. ಇವರನ್ನೆಲ್ಲಾ ಬೊಗಳೇರಹಟ್ಟಿ ಚೆಕ್‌ಪೋಸ್ಟ್‌ನಲ್ಲಿ ತಡೆದು ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗಿತ್ತು.
ಜಿಲ್ಲೆಗೆ ಆಗಮಿಸಿದ್ದ 15 ಜನ ತಬ್ಲೀಘಿಗಳ ಪೈಕಿ ನಾಲ್ವರಿಗೆ ಈ ಹಿಂದೆ ಕೋವಿಡ್ ಸೋಂಕು ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿ ಬಳಿಕ ಚಿತ್ರದುರ್ಗಕ್ಕೆ ಅವರು ಬಂದಿದ್ದರು. ಇದೀಗ ಜಿಲ್ಲೆಯಲ್ಲಿ ಮತ್ತೆ ಮೂರು ಜನರಿಗೆ ಸೋಂಕು ಕಾಣಿಸಿಕೊಂಡಿರುವುದು ನಗರದ ಜನತೆಯ ಆತಂಕಕ್ಕೆ ಕಾರಣವಾಗಿದೆ.
ಇವರು ಅಹಮದ್‌ಬಾದ್‌ನ ಜಿನಾತ್‌ಪುರ ತರ್ಕೇಜ್ ಮಸೀದಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಲು ಇಲ್ಲಿಂದ ತೆರಳಿದ್ದರು. ಈ ವೇಳೆ ಲಾಕ್‌ಡೌನ್ ಘೋಷಣೆಯಾದ್ದರಿಂದ ಅಲ್ಲಿಯೇ ಸಿಲುಕಿದ್ದರು. ಬಳಿಕ ಕರ್ನಾಟಕಕ್ಕೆ ವಾಪಾಸಾಗುವಾಗ ನಿಯಮಾನುಸಾರ ಪಾಸ್ ಪಡೆದಿರಲಿಲ್ಲ. ಈ ಸೋಂಕಿತರು ಗುಜರಾತ್‌ನಿಂದ ಸೂರತ್, ನಾಸಿಕ್, ವಿಜಯಪುರ, ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸಿದ್ದರು.