ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶುಕ್ರವಾರ ಮೂರು ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಹೊರ ಬಂದಿದ್ದು, ಜಿಲ್ಲೆಯ ಒಟ್ಟು ಸಂಖ್ಯೆ 72ಕ್ಕೇರಿದಂತಾಗಿದೆ.
ರಾಯಬಾಗ ತಾಲೂಕಿನ ಕುಡಚಿಯ ಮೂರು ಪಾಸಿಟೀವ್ ಕೇಸ್ ಪತ್ತೆಯಾಗಿದ್ದು, 55 ವರ್ಷದ ಪುರುಷ, 30 ವರ್ಷದ ಮಹಿಳೆ ಹಾಗೂ 50 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಇವರೆಲ್ಲರಿಗೂ ಸೋಂಕಿತ ಸಂಖ್ಯೆ 301ರ ದ್ವಿತೀಯ ಸಂಪರ್ಕದಿಂದ ಸೋಂಕು ತಾಗಿರುವುದು ದೃಢವಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಖಚಿತಪಡಿಸಿದೆ.
ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ ಹದಿನಾಲ್ಕು ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದವು. ಶುಕ್ರವಾರ ಇದುವರೆಗೆ ಮತ್ತೆ ಮೂರು ಪ್ರಕರಣಗಳು ದೃಢವಾಗಿದ್ದು, ಜನತೆಯಲ್ಲಿ ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಇಂದು ಹನ್ನೊಂದು ಸೋಂಕು ಪ್ರಕರಣಗಳು ದೃಢವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ.
ಅದರಲ್ಲಿ 235 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮತ್ತು 22 ಪ್ರಕರಣಗಳು ಮರಣ ಹೊಂದಿದ್ದು, ಒಂದು ಮರಣ ಕೋವಿಡ್-19 ಅಲ್ಲದ ಕಾರಣದಿಂದ ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.