ಹೊಸದಿಲ್ಲಿ : ಅತ್ಯಾಚಾರ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಹಾಗೂ ಸಚಿವ ಗಾಯತ್ರಿ ಪ್ರಜಾಪತಿಯ ಇನ್ನೂ ಮೂವರು ಸಹಚರರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಲುಕ್ ಔಟ್ ನೊಟೀಸ್ ಮಾತ್ರವಲ್ಲದೆ, ಜಾಮೀನು ರಹಿತ ಅರೆಸ್ಟ್ ವಾರೆಂಟ್ ಕೂಡ ಜಾರಿಯಾಗಿರುವ 49ರ ಹರೆಯದ ಎಸ್‌ಪಿ ನಾಯಕ ಗಾಯತ್ರಿ ಪ್ರಜಾಪತಿಯ ಪ್ರಕರಣಕ್ಕೆ ಸಂಬಂಧಪಟ್ಟು ಈ ತನಕ ಪೊಲೀಸರು ವಶಕ್ಕೆ ತೆಗೆದುಕೊಂಡಿರುವವರ ಸಂಖ್ಯೆ ಈಗ ಆರಕ್ಕೆ ಏರಿದೆ.
ಇಂದಿನ ಬಂಧನಗಳು ಕೇಂದ್ರ ಲಕ್ನೋ ದ ಹಜರತ್‌ಗಂಜ್ ಪ್ರದೇಶದಲ್ಲಿ ನೆದಿವೆ ಎಂದು ಐಜಿ (ಲಕ್ನೋ) ಎ ಸತೀಶ್ ಗಣೇಶ್ ತಿಳಿಸಿದ್ದಾರೆ. ಇದಕ್ಕೆ ಮೊದಲು ಪ್ರಜಾಪತಿಯ ಇಬ್ಬರು ಸಹಚರರನ್ನು ಕಳೆದ ಮಾರ್ಚ್ 7ರಂದು ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿನ ಜೇವಾರ್ ಎಂಬಲ್ಲಿಗೆ ಸಮೀಪ ನೋಯ್ಡಾದಲ್ಲಿ ಬಂಧಿಸಲಾಗಿತ್ತು.
ಕಳೆದ ಮಾರ್ಚ್ 6ರಂದು ಪ್ರಜಾಪತಿಯ ಸೆಕ್ಯುರಿಟಿ ಗಾಡ್‌ರ ಚಂದ್ರಪಾಲ್‌ನನ್ನು ಲಕ್ನೋ ಪೊಲೀಸ್ ಲೈನ್ ಸಮೀಪ ಬಂಧಿಸಲಾಗಿತ್ತು.
ಮಹಿಳೆಯೊಬ್ಬಳ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಮಗಳ ಮೇಲೆ ಅತ್ಯಾಚಾರದ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟು ಸಚಿವ ಗಾಯತ್ರಿ ಪ್ರಜಾಪತಿ ಮತ್ತು ಇತರ ಆರು ಮಂದಿಯ ವಿರುದ್ಧ ಕಳೆದ ಫೆ.17ರಂದು ಸುಪ್ರೀಂ ಕೋರ್ಟ್ ಆಣತಿಯ ಮೇರೆಗೆ ಎಫ್ಐಆರ್ ದಾಖಲಿಸಲಾಗಿತ್ತು.