ಕಂಪ್ಲಿ: ನರಭಕ್ಷಕ ಚಿರತೆ ಸೆರೆ ಹಿಡಿದು ದಿನ ಕಳೆಯುವುದರೊಳಗೇ ಮತ್ತೆ ಮೂರು ಚಿರತೆ ಪ್ರತ್ಯಕ್ಷವಾಗಿವೆ. ಸೋಮವಾರ ತಾಲೂಕಿನ ದೇವಲಾಪುರದಲ್ಲಿ ಒಂದು, ಮಾವಿನಹಳ್ಳಿ ಹಾಗೂ ಶ್ರೀರಾಮರಂಗಾಪುರ ರಸ್ತೆಯಲ್ಲಿ ಚಿರತೆ ಮತ್ತು ಚಿರತೆ ಮರಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ.
ದೇವಲಾಪುರ ಗ್ರಾಮದ ರಾಜನಮಟ್ಟಿ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಚಿರತೆಯೊಂದು ಮತ್ತೆ ಪ್ರತ್ಯಕ್ಷವಾಗಿದೆ. ಗ್ರಾಮದ ಮಾರೇಶ ಎನ್ನುವವರು ತಮ್ಮ ಹೊಲಕ್ಕೆ ಹೋದ ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದರಿಂದ ಭಯಗೊಂಡ ಮಾರೇಶ್ ಕೂಗುತ್ತ ಗ್ರಾಮಕ್ಕೆ ಓಡಿ ಬಂದಿದ್ದಾನೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಕೂಂಬಿಂಗ್ ನಡೆಸಿದರೂ
ಚಿರತೆ ಮಾತ್ರ ಪತ್ತೆಯಾಗಲಿಲ್ಲ. ಈಗಾಗಲೇ ಮೂರು ಚಿರತೆ ಸೆರೆ ಹಿಡಿದ್ದಿದ್ದರೂ ಸಹಿತ ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರ ಭಯ ಹೆಚ್ಚಿಸಿದೆ.
ಚಿರತೆ, ಚಿರತೆ ಮರಿ ಪ್ರತ್ಯಕ್ಷ: ತಾಲೂಕಿನ ಮಾವಿನಹಳ್ಳಿ ಹಾಗೂ ಶ್ರೀರಾಮರಂಗಾಪುರ ರಸ್ತೆಯಲ್ಲಿ ಚಿರತೆಯೊಂದು ಮರಿಗಳೊಂದಿಗೆ ಕಾಣಿಸಿಕೊಂಡಿದ್ದು, ದ್ವಿಚಕ್ರ ವಾಹನವನ್ನು ಬೆನ್ನತ್ತಿಹೋದ ಘಟನೆ ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ. ಮಾವಿನಹಳ್ಳಿಯಿಂದ ಕಾರ್ತಿಕ ಎಂಬ ವಿದ್ಯಾರ್ಥಿ ಶ್ರೀರಾಮರಂಗಾಪುರದ ಪ್ರೌಢಶಾಲೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನವೊಂದು ಬಂದಿದ್ದು, ಅದನ್ನು ಏರಿದ್ದಾನೆ. ಸಿದ್ದಮ್ಮನಹಳ್ಳಿ ಬಳಿ ಬೈಕ್ ಸವಾರ ಮೂತ್ರವಿಸರ್ಜನೆಗಾಗಿ ಬೈಕ್ ನಿಲ್ಲಿಸಿದಾಗ ರಸ್ತೆ ಬದಿಯ ಗಿಡಗಂಟಿಗಳಲ್ಲಿ ಅವಿತಿದ್ದ ಚಿರತೆ ಮತ್ತು ಚಿರತೆಯ ಮರಿ ಇವರ ಮೇಲೆರಗಲು ಪ್ರಯತ್ನಿಸಿದೆ. ಅದರಿಂದ ತಪ್ಪಿಸಿಕೊಂಡ ಬೈಕ್ ಸವಾರ ಹಾಗೂ ವಿದ್ಯಾರ್ಥಿ ಬೈಕ್ ಏರಿ ಬಚಾವ್ ಆಗಿದ್ದಾರೆ.
ಮಕ್ಕಳು ಶಾಲೆಗೆ ಗೈರು: ಇಂದು ಮಾವಿನಹಳ್ಳಿ ಹಾಗೂ ಶ್ರೀರಾಮರಂಗಾಪುರ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಈ ಗ್ರಾಮಕ್ಕೆ ಬಸ್ಸಿನ ಸೌಕರ್ಯವಿಲ್ಲದಿರುವುದರಿಂದ ಮಕ್ಕಳು ಶಾಲೆಗೆ ಗೈರಾಗಿದ್ದಾರೆ ಎಂದು ಶಾಲೆಯ ಶಿಕ್ಷಕರು ತಿಳಿಸಿದ್ದಾರೆ. ಸುಗ್ಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಶ್ರೀರಾಮರಂಗಾಪುರ ಸರ್ಕಾರಿ ಪ್ರೌಢಶಾಲೆಯೊಂದೇ ಇರುವುದರಿಂದ ಈ ಭಾಗದ ಹಳ್ಳಿಗಳ ವಿದ್ಯಾರ್ಥಿಗಳು ಬಸ್ ಸೌಲಭ್ಯ ಇಲ್ಲದೆ ನಡೆದುಕೊಂಡೇ ಶಾಲೆಗೆ ಹೋಗಬೇಕಾಗಿದೆ. ಚಿರತೆ ಕಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಭಯದಿಂದ ಶಾಲೆಗೆ ಹೋಗಿಲ್ಲ. ಕೂಡಲೇ ಈ ಭಾಗದಲ್ಲಿ ಬೋನ್ ಅಳವಡಿಸಿ ಚಿರತೆ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚಿರತೆ ದಾಳಿಗೆ ಮೇಕೆ-ನಾಯಿ ಬಲಿ
ಹೊಸಪೇಟೆ: ಬಳ್ಳಾರಿ ಜಿಲ್ಲೆಯಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಜೋಡಿ ಚಿರತೆಗಳು ಮೇಕೆ ಮರಿ ಹಾಗೂ ಎರಡು ನಾಯಿಗಳನ್ನು ಹೊತ್ತೂಯ್ದು ಕೊಂದು ಹಾಕಿದ ಘಟನೆ ತಾಲೂಕಿನ ಸೀತಾರಾಂ ತಾಂಡಾದ ಗ್ರಾಮದ ಹೊರ ವಲಯದಲ್ಲಿ ಸೋಮವಾರ ನಡೆದಿದೆ. ಗ್ರಾಮದ ರೈತ ರಂಗನಾಥನ್‌ಗೆ ಸೇರಿದ ಮೇಕೆ ಮರಿಯನ್ನು ಚಿರತೆ ಹೊತ್ತೂಯ್ದು ಕೊಂದು ಹಾಕಿದ್ದು, ಜೊತೆಯಲ್ಲಿ ಎರಡು ನಾಯಿಗಳ ಮೇಲೆ ದಾಳಿ ನಡೆಸಿವೆ.ಹೊಲ-ಗದ್ದೆಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರು, ಚಿರತೆ ದಾಳಿಯ ಭೀತಿಯಿಂದ ಗ್ರಾಮಕ್ಕೆ ಮರಳಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಚಿರತೆ ಸೆರೆ ಹಿಡಿಯಲು ಬೋನು ಅಳವಡಿಸಬೇಕೆಂದು ಆಗ್ರಹಿಸಿದರು. ಈ ಹಿಂದೆ ಹಂಪಿ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದ್ದ ಜೋಡಿ ಚಿರತೆಗಳು ಇದೀಗ ಈ ಪ್ರದೇಶದಲ್ಲಿ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.