ನವದೆಹಲಿ: ನಿವೇಶನ ಖರೀದಿಯ ವಿಚಾರದಲ್ಲಿ ವ್ಯಕ್ತಿಯೊಬ್ಬರಿಂದ ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ದೆಹಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ)ದ ಸಹಾಯಕ ನಿರ್ದೇಶಕ ಸೇರಿದಂತೆ ಮೂವರು ಉದ್ಯೋಗಿಗಳನ್ನು ಸಿಬಿಐ ಶನಿವಾರ (ಆಗಸ್ಟ್ 15, 2020) ಬಂಧಿಸಿದೆ.
ಲಂಚ ಸ್ವೀಕರಿಸಿದ್ದ ಸಹಾಯಕ ನಿರ್ದೇಶಕ ಸುಧಾಂಶು ರಂಜನ್, ಕ್ಲರ್ಕ್ ಅಜೀತ್ ಭಾರದ್ವಾಜ್ ಮತ್ತು ಭದ್ರತಾ ಸಿಬ್ಬಂದಿ ದಾರ್ವಾನ್ ಸಿಂಗ್ ಸೇರಿದಂತೆ ಮೂವರು ಸಿಬಿಐ ವಶದಲ್ಲಿರುವುದಾಗಿ ವರದಿ ತಿಳಿಸಿದೆ.
ನಿವೇಶನ ಮಾರಾಟ ವಿಚಾರದಲ್ಲಿ ಖರೀದಿದಾರರನ ಬಳಿ ನಾಲ್ಕು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು ನಂತರ ಮಾರಾಟಗಾರನ ಹೆಸರಿಗೆ ನಿವೇಶನ ದಾಖಲು ಮಾಡಿಕೊಡುವುದಾಗಿ ತಿಳಿಸಿದ್ದರು.
ಈ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬ ಖರೀದಿಸಿದ್ದ, ಅಲ್ಲದೇ ಜಾಗವನ್ನು ಬೇರೆಯವರೊಬ್ಬರಿಗೆ ಮಾರಾಟ ಮಾಡಲು ಬಯಸಿದ್ದ. ಆದರೆ ಅದಕ್ಕೆ ಡಿಡಿಎಯಿಂದ ಖಾಸಗಿ ವ್ಯಕ್ತಿಯ ಹೆಸರಿನಲ್ಲಿರುವ ದಾಖಲೆಯ ಅಗತ್ಯವಿತ್ತು. ಇದಕ್ಕಾಗಿ ಡಿಡಿಎ ಅಧಿಕಾರಿಗಳು ನಾಲ್ಕು ಲಕ್ಷ ರೂಪಾಯಿ ಲಂಚ ಕೇಳಿರುವುದಾಗಿ ಖರೀದಿದಾರ ಆರೋಪಿಸಿರುವುದಾಗಿ ಸಿಬಿಐ ವಕ್ತಾರ ಆರ್ ಕೆ ಗೌರ್ ತಿಳಿಸಿದ್ದಾರೆ.
ಹೀಗೆ ಖರೀದಿದಾರನ ದೂರಿನ ಆಧಾರದ ಮೇಲೆ ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಅಜೀತ್ ಭಾರದ್ವಾಜ್ ಸಿಬಿಐ ಬಲೆಗೆ ಬಿದ್ದಿರುವುದಾಗಿ ವರದಿ ವಿವರಿಸಿದೆ.