“ಜಾಗ್ವಾರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ನಿಖಿಲ್‌ಕುಮಾರ್, ಆ ಬಳಿಕ “ಸೀತಾರಾಮ ಕಲ್ಯಾಣ’ದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡರು. ನಂತರದ ದಿನಗಳಲ್ಲಿ ಪೌರಾಣಿಕ ಚಿತ್ರ “ಕುರುಕ್ಷೇತ್ರ’ದಲ್ಲೂ ಅಭಿಮನ್ಯು ಆಗಿ ಅಬ್ಬರಿಸಿದರು. ಇತ್ತೀಚೆಗೆ ಲೈಕಾ ಎಂಬ ದೊಡ್ಡ ಪ್ರೊಡಕ್ಷನ್ ಕಂಪೆನಿಯಲ್ಲೊಂದು ಸಿನಿಮಾ ಮಾಡುವ ಬಗ್ಗೆಯೂ ಸುದ್ದಿಯಾಯ್ತು. ಆ ಸುದ್ದಿ ಇನ್ನೂ ಹಸಿಯಾಗಿರುವಾಗಲೇ, ಮತ್ತೊಂದು ಹೊಸ ಚಿತ್ರದಲ್ಲಿ ನಟಿಸುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ನಿಖಿಲ್‌ಕುಮಾರ್.
ಹೌದು, ಈ ಚಿತ್ರ ನಿರ್ಮಾಣ ಮಾಡುತ್ತಿರುವುದು ಬೇರಾರೂ ಅಲ್ಲ, ಲಹರಿ ಮ್ಯೂಸಿಕ್ ಸಂಸ್ಥೆ. ಕಳೆದ ಮೂರು ದಶಕಗಳ ಬಳಿಕ ನಿರ್ಮಾಣಕ್ಕೆ ಬಂದಿರುವ ಲಹರಿ ಸಂಸ್ಥೆ, ನಿಖಿಲ್‌ಕುಮಾರ್ ಅಭಿನಯದ ಹೊಸ ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಲು ತಯಾರಿ ನಡೆಸಿದೆ. ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಲಹರಿ ವೇಲು, “ಕನ್ನಡದಲ್ಲಿ ಮೊದಲು ನಮ್ಮ ಸಂಸ್ಥೆ ಮೂಲಕ ಡಾ.ವಿಷ್ಣುವರ್ಧನ್ ಅಭಿನಯದ “ಮಹಾಕ್ಷತ್ರಿಯ’ ಸಿನಿಮಾ ನಿರ್ಮಾಣ ಮಾಡಿದ್ದೆವು. ನಂತರ “ಗಣೇಶನ ಗಲಾಟೆ’ ಚಿತ್ರ ನಿರ್ಮಾಣವಾಗಿತ್ತು.
ಅದಾದ ಮೂರು ದಶಕದ ಬಳಿಕ ನಿಖಿಲ್‌ಕುಮಾರ್ ಅವರಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರಕ್ಕೆ ತೆಲುಗಿನ ವಿಜಯಕುಮಾರ್ ಕೊಂಡ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕಿನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಅರ್ಜುನ್ ಜನ್ಯಾ ಅವರ ಸಂಗೀತ ಚಿತ್ರಕ್ಕಿರಲಿದೆ. ಇದೊಂದು ಪಕ್ಕಾ ಮಾಸ್ ಸಿನಿಮಾ ಆಗಿದ್ದು, ಈಗಿನ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಕಥೆ ಇದೆ. ಮನರಂಜನೆ ಚಿತ್ರದ ಹೈಲೈಟ್. ಇನ್ನು, ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ.
30 ವರ್ಷಗಳ ಬಳಿಕ ನಿರ್ಮಾಣಕ್ಕೆ ಇಳಿದಿರುವುದರಿಂದ ನಮ್ಮ ಲಹರಿ ಮ್ಯೂಸಿಕ್ ಸಂಸ್ಥೆ ಮೂಲಕ 2020ರಲ್ಲಿ ಇದು ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಳ್ಳಲಿದೆ. ಕನ್ನಡ ಭಾಷೆ ಸೇರಿದಂತೆ ತೆಲುಗು ಹಾಗು ಹಿಂದಿ ಭಾಷೆಯಲ್ಲೂ ಚಿತ್ರ ತಯಾರಾಗುತ್ತಿದೆ. ಹಾಗಾಗಿ, ಚಿತ್ರಕ್ಕೆ ಈಗಾಗಲೇ ಜೋರಾಗಿಯೇ ತಯಾರಿ ನಡೆದಿದೆ. ಸಂಕ್ರಾಂತಿ ಹಬ್ಬದ ಬಳಿಕ ಚಿತ್ರಕ್ಕೆ ಚಾಲನೆ ಸಿಗಲಿದೆ. ಸದ್ಯಕ್ಕಿಷ್ಟು ಮಾಹಿತಿ ಇದೆ. ಉಳಿದಂತೆ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ.
ಯಾವ ತಾಂತ್ರಿಕ ವರ್ಗ ಕೆಲಸ ಮಾಡಲಿದೆ ಎಂಬಿತ್ಯಾದಿ ವಿಷಯವನ್ನು ಶೀಘ್ರವೇ ಹೇಳುತ್ತೇನೆ’ ಎಂದು ವಿವರ ಕೊಡುತ್ತಾರೆ ಲಹರಿ ವೇಲು. ನಿಖಿಲ್‌ಕುಮಾರ್ ಅವರ ಹಿಂದಿನ ಚಿತ್ರಗಳೆಲ್ಲವೂ ಅದ್ಧೂರಿಯಾಗಿಯೇ ತಯಾರಾಗಿದ್ದವು. ಈ ಚಿತ್ರವೂ ಸಹ ಅದ್ಧೂರಿಯಾಗಿಯೇ ನಿರ್ಮಾಣವಾಗಲಿದ್ದು, ಚಿತ್ರದ ಕಥೆಯಲ್ಲೂ ಸಾಕಷ್ಟು ಹೊಸತನ ಇರುವುದರಿಂದ ಸಿನಿಮಾವನ್ನು ಕ್ಲಾಸ್ ಆಗಿಯೇ ನಿರ್ಮಿಸುವ ಉದ್ದೇಶ ಲಹರಿ ವೇಲು ಅವರದು.