Advertisement

ಬಾಗಲಕೋಟೆ: ಕೋವಿಡ್‌ಗೆ ಮತ್ತೆ ಮೂವರು ಬಲಿ ; ಜಿಲ್ಲೆಯಲ್ಲಿ ಒಟ್ಟು 62 ಜನ ಸಾವು

03:00 AM Aug 08, 2020 | Hari Prasad |

ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್ 19 ಮರಣ ಮೃದಂಗ ಮುಂದುರೆದಿದೆ.

Advertisement

ಶುಕ್ರವಾರ ಒಂದೇ ದಿನ ಮೂವರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಸಂಬಂಧಿತ ಸಾವಿನ ಸಂಖ್ಯೆ 59ಕ್ಕೆ ಏರಿಕೆಯಾಗಿದೆ.

ಬೇರೆ ಜಿಲ್ಲೆಯಲ್ಲಿ ಸಾವನ್ನಪ್ಪಿದ ಮೂವರು ಸಹಿತ ಒಟ್ಟು 62 ಜನರು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ.

ತೇರದಾಳದ 63 ವರ್ಷದ ಪುರುಷ ಕಳೆದ ಆ. 2ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಬಾಗಲಕೋಟೆ ನಗರದ 58 ವರ್ಷದ ಪುರುಷ ಕಳೆದ ಆ.1ರಂದು ಖಾಸಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಧುಮೇಹ, ರಕ್ತ ಹೀನತೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರೂ ಶುಕ್ರವಾರ ಸಾವನ್ನಪ್ಪಿದ್ದಾರೆ.

Advertisement

ಅಲ್ಲದೇ ಬಾದಾಮಿಯ 65 ವರ್ಷದ ಪುರುಷ ಕಳೆದ ಆ.2ರಂದು ಖಾಸಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಕೋವಿಡ್ ಜತೆಗೆ ನ್ಯೂಮೋನಿಯಾ ಮತ್ತು ತೀವ್ರ ಉಸಿರಾಟದ ಸಮಸ್ಯೆ ಇತ್ತು. ಇವರು ಶುಕ್ರವಾರ ಮೃತಪಟ್ಟಿದ್ದಾರೆ.

ಕೋವಿಡ್‌ನಿಂದ ಜಿಲ್ಲೆಯಲ್ಲಿ ಈ ವರೆಗೆ 59 ಜನ ಮೃತಪಟ್ಟಿದ್ದು, ಬೆಂಗಳೂರು, ವಿಜಯಪುರ ಹಾಗೂ ಗದಗನಲ್ಲಿ ತಲಾ ಒಬ್ಬರು ಸೇರಿ ಒಟ್ಟು 62 ಜನರು ಬಲಿಯಾಗಿದ್ದಾರೆ.

ಒಂದೇ ದಿನ 148 ಜನರಿಗೆ ಸೋಂಕು:
ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದರ ನಾಲ್ವರು ಸಿಬ್ಬಂದಿ ಸಹಿತ ಶುಕ್ರವಾರ ಮತ್ತೆ 148 ಜನರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಬಾಗಲಕೋಟೆ ತಾಲೂಕಿನಲ್ಲಿ 26, ಬಾದಾಮಿ 44, ಬೀಳಗಿ 4, ಹುನಗುಂದ 32, ಮುಧೋಳ 26, ಜಮಖಂಡಿ 16 ಹಾಗೂ ಬೇರೆ ಜಿಲ್ಲೆಯ ಒಬ್ಬರು ಸಹಿತ ಒಟ್ಟು 148 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ. ರಾಜೇಂದ್ರ ತಿಳಿಸಿದ್ದಾರೆ.

ಶುಕ್ರವಾರ ಮತ್ತೆ 84 ಜನರು ಕೋವಿಡ್ 19 ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿತರ ಸಂಖ್ಯೆ ಒಟ್ಟು 2762ಕ್ಕೇ ಏರಿಕೆಯಾಗಿದ್ದು, 1238 ಜನರು ಕೋವಿಡ್‌ 19 ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜಿಲ್ಲೆಯಿಂದ ಕಳುಹಿಸಿದ 157 ಜನರ ಗಂಟಲು ದ್ರವ ಮಾದರಿ ವರದಿ ಇನ್ನೂ ಬರಬೇಕಿದೆ. ಸಧ್ಯ ಜಿಲ್ಲೆಯಲ್ಲಿ 666 ಜನರು ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಈವರೆಗೆ 33,298 ಜನರ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ 30,101 ಜನರ ವರದಿ ನೆಗೆಟಿವ್ ಬಂದಿದೆ. 2762 ಜನರಿಗೆ ಪಾಜಿಟಿವ್ ಬಂದಿದ್ದು, 1238 ಜನರು ಗುಣಮುಖರಾಗಿದ್ದಾರೆ. ಸಧ್ಯ 1389 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next