ಮುಧೋಳ: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಘಟನೆ 1: ಕಬ್ಬು ತುಂಬಿದ ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿ ಬೈಕ್ ಹಿಂಬದಿ ಕುಳಿತಿದ್ದ ಯುವಕ ಸಾವಿಗೀಡಾಗಿರುವ ಘಟನೆ ಸಮೀಪದ ಇಂಗಳಗಿ ಕ್ರಾಸ್ ಬಳಿ ನಡೆದಿದೆ.
ಬಬಲೇಶ್ವರ ತಾಲೂಕಿನ ಹೊಸೂರ ಮೂಲದ ವಜ್ಜರಮಟ್ಟಿ ನಿವಾಸಿ ಕೃಷ್ಣಾ ಬಂಗಿ (19) ಮೃತಯುವಕ.
ಮೃತ ಯುವಕ ವಜ್ಜರಮಟ್ಟಿ ಗ್ರಾಮದ ಸುದೀಪ ಬಾಗವ್ವಗೋಳ ಎಂಬಾತನ ಜೊತೆ ವಜ್ಜರಮಟ್ಟಿಗೆ ತೆರಳುತ್ತಿದ್ದ. ಬೈಕ್ ಚಲಾಯಿಸುತ್ತಿದ್ದ ಸುದೀಪ ತನ್ನ ಮುಂದೆ ಹೋಗುತ್ತಿದ್ದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಮುಂದಾದಾಗ ನಿಯಂತ್ರಣ ತಪ್ಪಿ ಬೈಕ್ ಟ್ರ್ಯಾಕ್ಟರ್ ಹಿಂಬದಿ ಟ್ರೇಲರ್ ಗೆ ಬಡಿದಿದೆ. ಈ ವೇಳೆ ಚಕ್ರದಡಿ ಸಿಲುಕಿದ್ದ ಕೃಷ್ಣಾ ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೃಷ್ಣಾ ಮೃತಪಟ್ಟಿದ್ದಾನೆ ಘಟನೆ ಸಂಬಂಧಿಸಿದಂತೆ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
**
ಘಟನೆ 2 : ಬಾದಾಮಿ ಬನಶಂಕರಿ ಜಾತ್ರೆಗೆ ಪಾದಯಾತ್ರೆ ಹೊರಟಿದ್ದ ಭಕ್ತನಿಗೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಸಾವಿಗೀಡಾದ ಘಟನೆ ಸಮೀಪದ ಶಿರೋಳ ಗ್ರಾಮದ ಬಳಿ ಗುರುವಾರ ನಸುಕಿನ ಜಾವ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಪರಪ್ಪ ಬಾಳಿಗಿಡ (38) ಎಂದು ಗುರುತಿಸಲಾಗಿದೆ.
ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪರಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಅಸುನೀಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?