Advertisement

ದೇವರ ನಾಡಿನಲ್ಲಿ ಮೂರು ದಿನ; ಸುತ್ತಲಿನ ಹಚ್ಚ ಹಸುರು, ತಂಪು ವಾತಾವರಣ…

09:43 PM Oct 04, 2020 | Karthik A |

ದೇವರನಾಡು ಪ್ರಸಿದ್ಧಿಯ ಕೇರಳ ಪ್ರವಾಸಿತಾಣಗಳ ಬೀಡು ಕೂಡ ಹೌದು. ಇಲ್ಲಿಯ ಪ್ರೇಕ್ಷಣೀಯ ಸ್ಥಳಗಳು ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆದಿವೆ. ನಮ್ಮ ಕಾಲೇಜಿನಿಂದ ದ್ವಿತೀಯ ಎಂ.ಕಾಂ. ವಿದ್ಯಾರ್ಥಿಗಳಿಗೆ ಕೇರಳ ಪ್ರವಾಸ ಏರ್ಪಡಿಸಲಾಗಿತು.

Advertisement

ಆಗ ಕೊರೊನಾ ರೋಗದ ಆರಂಭಿಕ ಸಮಯ. ಕೇರಳದಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿತ್ತು. ರೋಗದ ಕಾರಣ ಮನೆಯವರಿಂದ ನಿರ್ಬಂಧ. ಹೋಗಲೇಬೇಕು ಎನ್ನುವ ಛಲದಿಂದ ಅಂತೂ ಇಂತೂ ನಮ್ಮ ಮೂರು ದಿನದ ಪಯಣ ಮೊದಲ್ಗೊಂಡಿತ್ತು.

ಸಂಜೆ 6 ಗಂಟೆಗೆ ಪೆರುವಾಜೆ ಜಲದುರ್ಗಾದೇವಿ ದೇಗುಲದಲ್ಲಿ ಪೂಜೆ ಮುಗಿಸಿ ಅಲ್ಲಿಂದ ಹೊರಟೆವು. ನಮ್ಮದು ಅಂತಾರಾಜ್ಯ ಪ್ರವಾಸವಾದ್ದರಿಂದ ಜಾಲ್ಸೂರು ಬಳಿ ಗಡಿ ಪ್ರದೇಶವಾದ ಪಂಜಿಕಲ್‌ನಲ್ಲಿ ಕೇರಳ ಮೂಲದ ಬಸ್‌ಗೆ ವರ್ಗಾವಣೆಗೊಂಡು ನಮ್ಮ ಪಯಣ ಮುಂದುವರೆಯಿತು. ಮಾರ್ಗಮಧ್ಯೆ ಅಡಿಮಲೈಯಲ್ಲಿ ಬೆಳಗ್ಗಿನ ಉಪಾಹಾರ ಮುಗಿಸಿ 11 ಗಂಟೆಗೆ ಮುನ್ನಾರ್‌ನ ರೋಜ್‌ ಗಾರ್ಡನ್‌ ತಲುಪಿದೆವು. ಇದು 2 ಎಕ್ರೆ ಸ್ಥಳದಲ್ಲಿ ನಿರ್ಮಾಣವಾಗಿದ್ದು, ನಗರದಿಂದ 2 ಕಿ.ಮೀ. ದೂರದಲ್ಲಿದೆ. ವರ್ಣರಂಜಿತ ಹೂವುಗಳಿಂದ ಈ ಸ್ಥಳ ಭೂಮಿಯ ಮೇಲಿನ ಸ್ವರ್ಗದಂತಿದೆ. ಅಲ್ಲಿಂದ ಹೊರಟು ಮುನ್ನಾರ್‌ ಟೀ ಪ್ಲಾಂಟೇಶನ್‌ ನೋಡಿ, ಟಾಟಾ ಮ್ಯೂಸಿಯಂ ಚಹ ಹುಡಿ ಉತ್ಪಾದನಾ ಕೇಂದ್ರದಲ್ಲಿ ಚಹಾ ಸಂಸ್ಕರಣೆಯ ವಿವಿಧ ಹಂತಗಳನ್ನು ತಿಳಿದೆವು.

ಮುಂದೆ ಮಟ್ಟುಪೆಟ್ಟಿ ಆಣೆಕಟ್ಟು ಹಾಗೂ ಎಕೋ ಪಾಯಿಂಟ್‌. ಮಟ್ಟುಪೆಟ್ಟಿ ಆಣೆಕಟ್ಟು ಮುನ್ನಾರ್‌ನಿಂದ ಸುಮಾರು 13 ಕಿ.ಮೀ. ದೂರದಲ್ಲಿದೆ. ಇಲ್ಲಿನ ಎಕೋ ಪಾಯಿಂಟ್‌ ಸ್ಟೇಷನ್‌ 1,700 ಮೀ. ಎತ್ತರ ಹೊಂದಿದ್ದು, ಸುತ್ತಲಿನ ಹಚ್ಚ ಹಸುರು, ತಂಪು ವಾತಾವರಣ ಆ ಸ್ಥಳವನ್ನು ಮತ್ತಷ್ಟು ವೈವಿಧ್ಯಮಯಗೊಳಿಸಿದೆ. ಎಕೋ ಪಾಯಿಂಟ್‌ ನೋಡಿ, ಆಣೆಕಟ್ಟು ವೀಕ್ಷಣೆಗೆ ಹೊರಟಾಗ ಸಂಜೆ 6 ಗಂಟೆಯಾಗಿತ್ತು. ಅಂದು ರಾತ್ರಿ
ಲಾಡ್ಜ್ವೊಂದರಲ್ಲಿ ತಂಗಿದೆವು.

Advertisement

ಮರುದಿನ ಹೊರಟಿದ್ದು ಚೊಟ್ಟಣಿಕ್ಕರ ಭಗವತಿ ದೇವಸ್ಥಾನಕ್ಕೆ. ನಾವು ಬಂದದ್ದು ಸ್ವಲ್ಪ ತಡವಾದ್ದರಿಂದ ದೇವಿಯ ದರ್ಶನ ಸಿಗಲಿಲ್ಲ. ಹೊರಗಿಂದಲೇ ಕೈ ಮುಗಿದು ಅಲ್ಲಿಂದ ಹೊರಟೆವು. ಇದು 1,500 ವರ್ಷಗಳಷ್ಟು ಪ್ರಾಚೀನ ದೇಗುಲವಾಗಿದ್ದು, ಇಲ್ಲಿ ದೇವಿಯನ್ನು ಬೆಳಗ್ಗೆ ಮಹಾಸರಸ್ವತಿ, ಮಧ್ಯಾಹ್ನ ಮಹಾಲಕ್ಷ್ಮೀ ಹಾಗೂ ಸಂಜೆ ಮಹಾಕಾಳಿಯಂತೆ ಮೂರು ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ ದೇಗುಲ ಎರ್ನಾಕುಲಂ – ಕೊಚ್ಚಿಯಿಂದ 20 ಕಿ.ಮೀ., ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 38 ಕಿ.ಮೀ. ದೂರದಲ್ಲಿದೆ. ಮುಂದಿನ ಸ್ಥಳ ಹಿಲ್‌ ಪ್ಯಾಲೇಸ್‌. ಹೆಸರಿನಂತೆ ಇದು ಬೆಟ್ಟದ ಮೇಲಿರೋ ಅರಮನೆ ಅಂದುಕೊಂಡಿ¨ªೆವು. ತಲುಪಿದ ಕೂಡಲೇ ಕಂಡದ್ದು ಮೆಟ್ಟಿಲುಗಳು.

ಮಧ್ಯಾಹ್ನದ ಸುಡುಬಿಸಿಲಿಗೆ ಆ ಮೆಟ್ಟಿಲು ಏರುವಷ್ಟರಲ್ಲಿ ಎಲ್ಲರೂ ಬಾಡಿ ಬೆಂಡಾಗಿದ್ದರು. ಅಷ್ಟರಲ್ಲಿ ನಮ್ಮಲ್ಲಿದ್ದ ಕೆಲವರು ಈ ಅರಮನೆಯಲ್ಲಿ ನಾಗವಲ್ಲಿ ಇದ್ದಳಂತೆ ಎಂಬ ಕತೆ ಹೇಳಲು ಸುರುಮಾಡಿದ್ದೇ ತಡ ಎಲ್ಲರ ಮುಖದಲ್ಲಿ ಆತಂಕ. ಆದರೆ ಅದು ಕಾಲ್ಪನಿಕ ಮಾತ್ರ. ಮಲಯಾಳ ಚಲನಚಿತ್ರ “ಮಣಿಚಿತ್ರತಾರೆ’ ಅಲ್ಲೇ ಚಿತ್ರೀಕರಣಗೊಂಡಿದ್ದು ಅದರಲ್ಲಿ ಬರುವ ಪಾತ್ರವೇ ಈ ನಾಗವಲ್ಲಿ. 1865ರಲ್ಲಿ ಕೊಚ್ಚಿಯ ರಾಜ ಇದನ್ನು ನಿರ್ಮಿಸಿದ. 1980ರಲ್ಲಿ ಸರಕಾರದ ಸ್ವಾಮ್ಯಕ್ಕೆ ಬಂದಮೇಲೆ ಕೇರಳ ರಾಜ್ಯ ಪುರಾತತ್ವ ಇಲಾಖೆ ಇದನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿದೆ. ಪುರಾತನ ಕಾಲದ ಒಡವೆ, ಆಭರಣ, ಖಡ್ಗ, ನಾಣ್ಯಗಳು, ವಿವಿಧ ರಾಜರ‌ ಚಿತ್ರಗಳು ಸೇರಿದಂತೆ ಅನೇಕ ವಸ್ತುಗಳು ಇಲ್ಲಿ ಕಾಣಸಿಗುತ್ತವೆ. ಸ್ನಾನದ ಕೊಳವಿದ್ದು ಸಂರಕ್ಷಣೆ ದೃಷ್ಟಿಯಿಂದ ಅದನ್ನು ಮುಚ್ಚಲಾಗಿದೆ.


ಜತೆಗೆ ಜಿಂಕೆ

ಉದ್ಯಾನವನ, ಐತಿಹಾಸಿಕ ಮತ್ತು ಮಕ್ಕಳ ಉದ್ಯಾನವನಗಳಿವೆ. ಅಲ್ಲಿಂದ ಹೊರಟು ಸಂಜೆ 5 ಗಂಟೆಗೆ ಮರೀನ್‌ ಡ್ರೈವ್‌ ತಲುಪಿದೆವು. ಅಲ್ಲಿಂದ ಹೌಸ್‌ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೋಟ್‌ನಲ್ಲಿ ಡಿಜೆ ಕೂಡ ಏರ್ಪಡಿಸಿದ್ದರಿಂದ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಪ್ರವಾಸದ ಕೊನೆಯ ದಿನ ಬೆಳಗ್ಗಿನ ಉಪಹಾರ ಮುಗಿಸಿ 10.30ರ ಹೊತ್ತಿಗೆ ಎಲ್ಲರೂ ಕಾತುರದಿಂದ ಕಾಯುತಿದ್ದ ವಂಡರ್‌ ಲಾ ತಲುಪಿದೆವು. ಕೊನೆಯ ದಿನ ಪೂರ್ತಿ ಅಲ್ಲೆ ನಮ್ಮೆಲ್ಲ ಮೋಜು ಮಸ್ತಿ ಮುಗಿಸಿ ವಾಪಸ್ಸಾದೆವು.

ಜೀವನದಲ್ಲಿ ಅನುಭವ ಮುಖ್ಯ. ಒಂದೊಂದು ಅನುಭವ ಒಂದೊಂದು ರೀತಿಯ ಪಾಠ ಕಲಿಸುತ್ತದೆ. ದೇಶ ಸುತ್ತಿದಾಗ ಸಿಗುವ ವಿವಿಧ ಸಂಸ್ಕೃತಿ, ಅಭಿರುಚಿ, ವಿಶೇಷತೆಗಳ ಅನುಭವ ನಮ್ಮಲ್ಲಿ ಹೊಸತನವನ್ನು ತರುತ್ತದೆ.


ಕಿಶನ್‌ ಪಿ.ಎಂ., ಶಿವರಾಮಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಪೆರುವಾಜೆ, ಬೆಳ್ಳಾರೆ 

 

Advertisement

Udayavani is now on Telegram. Click here to join our channel and stay updated with the latest news.

Next