ಬಳ್ಳಾರಿ: ಅಭಯ ಫೌಂಡೇಷನ್ ವತಿಯಿಂದ ಜ.7, 10, 11ರಂದು ಮೂರು ದಿನಗಳ ಕಾಲ ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿನ ವಿಮ್ಸ್, ವೀರಶೈವ ಕಾಲೇಜು ಮೈದಾನಗಳಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಫೌಂಡೇಷನ್‌ನ ಅಧ್ಯಕ್ಷ ರಾಮಕೃಷ್ಣ ರೇಣುಗುಂಟ್ಲ ತಿಳಿಸಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯಲ್ಲಿ ಪೊಲೀಸ್, ವೈದ್ಯರು, ಕಂದಾಯ ಇಲಾಖೆಯ ಡಿಸಿ ಕಚೇರಿ, ತಾಲೂಕು ಕಚೇರಿ, ಕೆಇಬಿ, ಸಾರಿಗೆ ಸಂಸ್ಥೆ, ಲೆಕ್ಕಪರಿಶೋಧಕರು, ಇಂಜಿನಿಯರ್, ಆಯುರ್ವೇದ ತಂಡಗಳ ಜೊತೆಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಸಹ ಭಾಗವಹಿಸಲಿವೆ.
ಸಾರ್ವಜನಿಕರು-ಸರ್ಕಾರಿ ಕಚೇರಿ ಅ ಧಿಕಾರಿಗಳ ನಡುವೆ ಪರಿಚಯ, ಸಂಪರ್ಕವೇ ಇಲ್ಲದಂತಾಗಿದೆ. ಹಾಗಾಗಿ ಒಬ್ಬರಿಗೊಬ್ಬರು ಪರಿಚಯ ಬೆಳೆಸಿಕೊಳ್ಳುವ ಸಲುವಾಗಿ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಒಟ್ಟು 20 ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು. ಪಂದ್ಯಾವಳಿಯಲ್ಲಿ 20 ತಂಡಗಳನ್ನು ಅಂತಿಮಗೊಳಿಸಲಾಗಿದೆ. ಪ್ರತಿ ತಂಡದಿಂದ 7500 ರೂ. ಪ್ರವೇಶ ಶುಲ್ಕವನ್ನು ಪಡೆಯಲಾಗಿದೆಯಾದರೂ, ಪ್ರತಿ ತಂಡದ 15 ಆಟಗಾರರಿಗೆ ಐಪಿಎಲ್ ಮಾದರಿಯಲ್ಲಿ ಗುಣಮಟ್ಟದ ಜೆರ್ಸಿಗಳನ್ನು ವಿತರಿಸಲಾಗಿದೆ. ಮೂರು ದಿನಗಳ ಕಾಲ ಬೆಳಗಿನ ಉಪಾಹಾರ, ಮಧ್ಯಾಹ್ನದ ಭೋಜನ, ಕುಡಿಯುವ ನೀರಿನ ವ್ಯವಸ್ಥೆ ಎಲ್ಲವನ್ನೂ ಉಚಿತವಾಗಿದೆ ಮಾಡಲಾಗಿದೆ.
ಪಿಚ್ ಸಿದ್ಧತೆ, ಅಂಪೈರ್ ವ್ಯವಸ್ಥೆಯನ್ನು ಅರಿಸ್ಟೋಕ್ರಾಟ್ ಕ್ರಿಕೆಟ್ ಕ್ಲಬ್‌ಗ ವಹಿಸಲಾಗಿದೆ. ಇದೇ ಜನವರಿ 7,8,9 ರಂದು ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಜ.10, 11ರಂದು ಆಯೋಜನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಭಯ ಫೌಂಡೇಷನ್‌ನ ಕ್ರಿಕೇಟ್ ಅಸೋಸಿಯೇಷನ್ ಮುಖ್ಯಸ್ಥ ಬಾದ್ಮಿ ನಾಗಾರ್ಜುನ ಮಾತನಾಡಿ, ಪಂದ್ಯಾವಳಿಯಲ್ಲಿ ಒಟ್ಟು 46 ತಂಡಗಳಿಂದ ಅರ್ಜಿಗಳು ಬಂದಿದ್ದು, ಅಂತಿಮವಾಗಿ 20 ತಂಡಗಳನ್ನು ಆಯ್ಕೆ ಮಾಡಲಾಯಿತು. ಈ 20 ತಂಡಗಳನ್ನು ತಲಾ ನಾಲ್ಕು ತಂಡಗಳಂತೆ ಐದು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಮೊದಲ ಸುತ್ತಿನ ಲೀಗ್ ಹಂತದಲ್ಲಿ ಪ್ರತಿ ತಂಡಗಳು 8 ಓವರ್‌ಗಳುಳ್ಳ ಮೂರು ಪಂದ್ಯಗಳನ್ನು ಆಡಲಿವೆ.
ನಂತರ ಮೂರು ಹಂತದ ಕ್ವಾಟರ್ ಫೈನಲ್, ಸೆಮಿಫೈನಲ್, ಫೈನಲ್ ಪಂದ್ಯಗಳು 12 ಓವರ್‌ಗಳಿಗೆ ನಡೆಯಲಿವೆ. ಫೈನಲ್‌ನಲ್ಲಿ ವಿಜೇತ ತಂಡಕ್ಕೆ 40 ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ, ರನ್ನರ್ ಆಫ್ ತಂಡಕ್ಕೆ 20 ಸಾವಿರ ರೂ. ನಗದು, ಪ್ರಶಸ್ತಿ ವಿತರಿಸಲಾಗುವುದು. ವಿಮ್ಸ್ ಮೈದಾನದಲ್ಲಿ ಎರಡುಕಡೆ ಮತ್ತು ವೀರಶೈವ ಕಾಲೇಜು ಮೈದಾನ ಸೇರಿ ಒಟ್ಟು ಮೂರುಕಡೆ ಪಂದ್ಯಾವಳಿಗಳು ನಡೆಯಲಿವೆ ಎಂದರು. ಜ. 7ರಂದು ಬೆಳಗ್ಗೆ 9 ಗಂಟೆಗೆ ಪಂದ್ಯಾವಳಿ ಉದ್ಘಾಟನೆ ಕಾರ್ಯ ನಡೆಯಲಿದ್ದು ಶಾಸಕರಾದ ಜಿ.ಸೋಮಶೇಖರರೆಡ್ಡಿ, ಬಿ.ನಾಗೇಂದ್ರ, ಮಾಜಿ ಶಾಸಕರಾದ ನಾರಾ ಸೂರ್ಯನಾರಾಯಣರೆಡ್ಡಿ, ಜಿಲ್ಲಾ ಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಎಸ್‌ಪಿ ಸೈದುಲು ಅಡಾವತ್ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿ. ಹರಿಪ್ರಸಾದ್ ರೆಡ್ಡಿ, ನಾಮಾ ಕಾರ್ತಿಕ್, ಎಚ್. ಆರ್. ಬಾಲ ನಾಗರಾಜ್, ಟಿ. ವೇಣುಗೋಪಾಲ್ ಗುಪ್ತ, ಜೆ.ಎಸ್.ಅಜಯ್, ಎಸ್.ಜಿತೇಂದ್ರ ಪ್ರಸಾದ್, ಜೆ.ಪಿ.ಮಂಜುನಾಥ್, ಅಮನ್‌ದೀಪ್‌ಸಿಂಗ್ ಇದ್ದರು.