ಬೆಂಗಳೂರು: ಬೊಮ್ಮನಹಳ್ಳಿ ವಲಯಕ್ಕೆ ಸೇರಿದ ಉತ್ತರಹಳ್ಳಿ, ಜಿಗಣಿ ಹಾಗೂ ಅಂಜನಾಪುರ ವಾರ್ಡ್ ಗಳಲ್ಲಿ ಒಟ್ಟಾರೆ 150 ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರಗಳನ್ನು ಮುಂದಿನ ಎರಡು ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಜಿಗಣಿಯ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿಜಯಶ್ರೀ ಖಾಸಗಿ ಆಸ್ಪತ್ರೆಯ ಸಹಯೋಗದಲ್ಲಿ ನಿರ್ಮಿಸಲಾಗುತ್ತಿರುವ ಕೋವಿಡ್ ಕೇಂದ್ರ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದ ಸಚಿವರು, ಇಂದು ಉತ್ತರಹಳ್ಳಿ ವಾರ್ಡಿನ ಬಿಬಿಎಂಪಿ ಪದವಿಪೂರ್ವ ಕಾಲೇಜು ಹಾಗೂ ಅಂಜನಾಪುರ ವಾರ್ಡಿನ ಬಿಹೈಂಡ್ ವುಡ್ಸ್ ರೆಸಾರ್ಟಿನಲ್ಲಿ ಸಿದ್ಧಗೊಳಿಸುತ್ತಿರುವ ಕೋವಿಡ್ ಕೇಂದ್ರಗಳನ್ನೂ ಪರಿಶೀಲನೆ ಮಾಡಿದ್ದೇನೆ. ಸೋಂಕಿತರ ಆರೈಕೆಗೆ ಅವಶ್ಯಕವಿರುವ ಮೂಲಸೌಕರ್ಯಗಳ ಕುರಿತಂತೆ ಕೆಲವು ಸಲಹೆ-ಸೂಚನೆಗಳನ್ನು ಸಹ ಅಧಿಕಾರಿಗಳಿಗೆ ನೀಡಿದ್ದೇನೆ. ಈ ಮೂರೂ ಕಡೆ ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್ ಗಳು ಇನ್ನು ಎರಡು ದಿನಗಳಲ್ಲಿ ಆರಂಭಗೊಳ್ಳಲಿವೆ. ಒಟ್ಟಾರೆಯಾಗಿ ಇಪ್ಪತ್ತು ಆಕ್ಸಿಜನ್ ಪೂರಕ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದ್ದು, ಈ ಭಾಗದ ಕೋವಿಡ್ ಸೋಂಕಿತ ನಾಗರಿಕರಿಗೆ ಈ ಕೇಂದ್ರಗಳು ಅತ್ಯುತ್ತಮ ಸೌಕರ್ಯಗಳನ್ನು ಕಲ್ಪಿಸಲಿವೆ ಎಂದರು.
ಶಾಸಕರ ಸಹಕಾರ: ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಕೃಷ್ಣಪ್ಪ ಅವರು ಈ ಕೋವಿಡ್ ಕೇಂದ್ರಗಳ ಸ್ಥಾಪನೆಗೆ ಅಪಾರವಾದ ಕೊಡುಗೆ ನೀಡಿದ್ದು, ತಮ್ಮ ಸಮೀಪ ಸಹವರ್ತಿಗಳ ಸಹಕಾರದೊಂದಿಗೆ, ಅಂಜನಾಪುರದ ಬಿಹೈಂಡ್ ವುಡ್ ರೆಸಾರ್ಟ್ ನಲ್ಲಿ 50 ಹಾಸಿಗೆಗಳ ಆರೈಕೆ ಕೇಂದ್ರ ಸ್ಥಾಪನೆಗೆ ಸಹ ಸಹಕಾರ ನೀಡಿದ್ದಾರೆ. ಜನಪ್ರತಿನಿಧಿಗಳ ಈ ರೀತಿಯ ಸಹಕಾರ ಇಂದಿನ ಸಂದರ್ಭದಲ್ಲಿ ವಿಶ್ವಾಸವನ್ನು ತುಂಬುವಂತಹುದ್ದಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಶ್ಲಾಘಿಸಿದರು.
ಇದನ್ನೂ ಓದಿ:ನೀವು ಉಳಿಯುತ್ತಿರೋ ಇಲ್ಲವೋ ನಾನಂತೂ ಉಳಿಯಬೇಕು: ಸಚಿವ ಉಮೇಶ್ ಕತ್ತಿ
ಸಚಿವರೊಂದಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೃಷ್ಣಪ್ಪ, ಬೊಮ್ಮನಹಳ್ಳಿ ನೋಡಲ್ ಅಧಿಕಾರಿಯಾದ ರಾಜೇಂದ್ರಕುಮಾರ ಕಠಾರಿಯ, ಬೊಮ್ಮನ ಹಳ್ಳಿ ವಲಯ ಜಂಟಿ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.