ಜಮ್ಮು: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಕೇರ್ನಿ ಸೆಕ್ಟರ್ ಹಾಗೂ ಕುಪ್ವಾರಾ ಜಿಲ್ಲೆಯ ಟಾಂಗ್ದಾರ್ ಮತ್ತು ಕರ್ನಾಹ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಭಾನುವಾರ ನಡೆಸಿದ ಎರಡು ಪ್ರತ್ಯೇಕ ಕದನ ವಿರಾಮ ಉಲ್ಲಂಘನೆ, ಅನಿಯಂತ್ರಿತ ಗುಂಡಿನ ದಾಳಿಯ ಪರಿಣಾಮವಾಗಿ ಮೂವರು ನಾಗರಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ನಾಗರಿಕರನ್ನು ಜಾವೇದ್ ಖಾನ್, ಜಿಎಚ್ ರಸೂಲ್ ಖಾನ್ ಮತ್ತು ರೇಡಿ ಚೌಕಿಬಾಲ್ ಎಂದು ಗುರುತಿಸಲಾಗಿದೆ. ಪಾಕಿಸ್ತಾನ ಸೇನಾಪಡೆ ಇಂದು ಮಧ್ಯಾಹ್ನದ ಹೊತ್ತಿಗೆ ಸೇನೆ ನೆಲೆ ಹಾಗೂ ಕೇರ್ನಿ ಸೆಕ್ಟರ್ ನ ಪ್ರದೇಶದ ಮೇಳೆ ಮೋರ್ಟಾರ್ ಶೆಲ್ಸ್ ಹಾಗೂ ಗುಂಡಿನ ದಾಳಿ ನಡೆಸಿದ್ದು, ಇದರಿಂದ ಸ್ಥಳೀಯ ಜನರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಕುಪ್ವಾರ ಜಿಲ್ಲೆಯ ಟಾಂಗ್ದಾರ್ ಮತ್ತು ಕರ್ನಾಹ್ ಸೆಕ್ಟರ್ ನಲ್ಲಿಯೂ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಭಾರತೀಯ ಸೇನಾ ಪಡೆ ಕೂಡ ಪ್ರತಿದಾಳಿಯ ಮೂಲಕ ತಕ್ಕ ಉತ್ತರ ನೀಡಿದೆ. ವರದಿಯ ಪ್ರಕಾರ, ಪಾಕ್ ಸೇನೆ ಷಾರಾರಾತ್, ಜಲ್, ಬ್ಲ್ಯಾಕ್ ರಾಕ್ ಮತ್ತು ಅನಿಲ್ ಪೋಸ್ಟ್ ಅನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದೆ.
ಕಳೆದ ಒಂದು ವಾರದಿಂದ ಪಾಕಿಸ್ತಾನಿ ಸೇನಾ ಪಡೆ ಮೆಂಧಾರ್, ಬಾಲ್ ಕೋಟ್, ಮ್ಯಾನ್ ಕೋಟ್, ಶಾಪುರ್, ಕೇರ್ನಿ ಮತ್ತು ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.
ಪಾಕ್ ಪಡೆಯ ಅಪ್ರಚೋದಿತ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾಪಡೆ ಮಿನಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕ್ ಪಡೆ ಹಲವಾರು ಬಂಕರ್ ಗಳನ್ನು ನಾಶಪಡಿಸಿ, ಹಲವು ಪಾಕ್ ಸೈನಿಕರನ್ನು ಹತ್ಯೆಗೈದಿತ್ತು. ಈ ವರ್ಷ ಪಾಕಿಸ್ತಾನ ಸುಮಾರು 2000 ಬಾರಿ ಕದನ ವಿರಾಮ ಉಲ್ಲಂಘಿಸಿರುವುದಾಗಿ ವರದಿ ತಿಳಿಸಿದೆ.