Advertisement

ಮೂರು ವೃತ್ತ ನವೀಕರಣ: ಎಸ್‌ಎಫ್‌ಸಿ ನಿಧಿಯಿಂದ 13.62 ಲಕ್ಷ ರೂ. ಮಂಜೂರು

04:25 PM Oct 28, 2017 | |

ನಗರ: ಜನನಿಬಿಡ, ವಾಹನದಟ್ಟಣೆ ಏರ್ಪಡುವ ಪುತ್ತೂರು ನಗರದ ಮೂರು ವೃತ್ತಗಳ ಅಭಿವೃದ್ಧಿಗೆ ನಗರಸಭೆ ಮುಂದಾಗಿದೆ.

Advertisement

ಪುತ್ತೂರು ಪೇಟೆಯಿಂದ ಕಾಣಿಯೂರು ಹಾಗೂ ಸುಳ್ಯ ಮಾರ್ಗವನ್ನು ವಿಭಾಗಿಸಿ ಕೊಡುವ ದರ್ಬೆ ವೃತ್ತ, ಅವೈಜ್ಞಾನಿಕ ರೀತಿಯಲ್ಲಿ ಇರುವ ಫಾ| ಪತ್ರಾವೋ ವೃತ್ತ ಇವುಗಳ ನವೀಕರಣ. ಇದಲ್ಲದೇ ನೆಹರೂನಗರದ ದಟ್ಟಣೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಹೊಸದೊಂದು ವೃತ್ತ ನಿರ್ಮಿಸುವ ಅನಿವಾರ್ಯ ಎದುರಾಗಿದೆ.

ಪುತ್ತೂರು ಪೇಟೆ ಬೆಳೆಯುತ್ತಿದ್ದಂತೆ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿದೆ. ಇದಕ್ಕೆ ಅನುಗುಣವಾಗಿ ಪೇಟೆಯು ಅಭಿವೃದ್ಧಿಯಾಗುತ್ತಿದೆ. ಜನಸಂಖ್ಯೆ, ವಾಹನದ ಸಂಖ್ಯೆಗೆ ತಕ್ಕಂತೆ ನಗರದ ಆಯಕಟ್ಟಿನ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದು ಅಗತ್ಯ. ಈ ನಿಟ್ಟಿನಲ್ಲಿ ಮೂರು ಪ್ರಮುಖ ಪ್ರದೇಶಗಳನ್ನು ಆರಿಸಿಕೊಂಡು, ಅಭಿವೃದ್ಧಿಗೆ ಮುಂದಾಗಿದೆ. ಇದಕ್ಕಾಗಿ ಎಸ್‌ಎಫ್‌ಸಿ ಇನ್ಸೆಂಟಿವ್ಸ್‌ ನಿಧಿಯಿಂದ 13,62,000 ರೂ. ಅನುದಾನ ಮಂಜೂರಾಗಿದೆ.

ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಒಂದೊಮ್ಮೆ ಪುಡಾ ಮುಂದಾಗಿತ್ತು. ಆದರೆ ನಗರಸಭೆ ಆಸ್ತಿಯ ಅಭಿವೃದ್ಧಿಗೆ ಅದರ ನಿಧಿಯಿಂದಲೇ ಅನುದಾನ ಇಟ್ಟು, ಕಾಮಗಾರಿ ನಡೆಸಬೇಕು ಎಂದು ತೀರ್ಮಾನಿಸಲಾಗಿದೆ. ಈ ನಿಟ್ಟಿ ನಲ್ಲಿ ಮುಂದಡಿ ಇಟ್ಟಿದ್ದು, ಎಸ್‌ಎಫ್‌ಸಿ ನಿಧಿ ಯಿಂದ ಅನುದಾನ ಮಂಜೂರು ಮಾಡುವಲ್ಲಿ ಯಶಸ್ವಿಯೂ ಆಗಿದೆ. 

ದರ್ಬೆ ವೃತ್ತ
ದರ್ಬೆಯಲ್ಲಿ ರಸ್ತೆ ವಿಸ್ತರಣೆ ನಡೆಸಿದ ಸಂದರ್ಭ ವೃತ್ತವನ್ನು ಅಭಿವೃದ್ಧಿ ಮಾಡುವುದು ಅನಿವಾರ್ಯವಾಯಿತು. ಒಂದಷ್ಟು ಕಾಮಗಾರಿಯನ್ನು ನಡೆಸಲಾಯಿತು. 3 ಪ್ರಮುಖ ರಸ್ತೆಗಳಿಗೂ ಡಿವೈಡರ್‌ ಹಾಕಿದ್ದು ಆಯಿತು. ಆದರೆ ಅಪಘಾತ ಕಡಿಮೆ ಆಗಲೇ ಇಲ್ಲ. ಈ ಬಗ್ಗೆ ನಗರಸಭೆ ಗಮನ ಸೆಳೆದಾಗ, ಕಾಣಿಯೂರು ರಸ್ತೆಗೆ ಹಂಪ್ಸ್‌ ಹಾಕಿ ವಾಹನದ ವೇಗವನ್ನು ತಗ್ಗಿಸುವ ಕೆಲಸ ಮಾಡಿತು. ಹಂಪ್ಸ್‌ ಕಿತ್ತು ಹೋಗಿದೆ, ಅಪಘಾತ ಹೆಚ್ಚಳವಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ಹಾಕಿಕೊಂಡು ವೈಜ್ಞಾನಿಕವಾಗಿ ವೃತ್ತವನ್ನು ಅಭಿವೃದ್ಧಿ ಪಡಿಸುವ ಹೊಣೆ ನಗರಸಭೆ ಮೇಲಿದೆ.

Advertisement

ಫಾ| ಪತ್ರಾವೋ ವೃತ್ತ
ಶಿರಾಡಿ ರಸ್ತೆ ಕಾಮಗಾರಿಗೆ ಒಳಪಟ್ಟಾಗ, ಮಾಣಿ- ಮೈಸೂರು ರಾಜ್ಯ ಹೆದ್ದಾರಿ ಒಂದಷ್ಟು ಕಾಲ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿತು. ಈ ಸಂದರ್ಭ ಫಾ| ಪತ್ರಾವೋ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಒಳಪಡಿಸಲೇ ಇಲ್ಲ. ಅಂದರೆ ಸಂಚಾರಿ ಕಾನೂನು ಪ್ರಕಾರ, ವಾಹನಗಳು ವೃತ್ತದ ಬಲಬದಿಯಿಂದಲೇ ಸಾಗಬೇಕು. ಆದರೆ ಫಾ| ಪತ್ರಾವೋ ವೃತ್ತದಲ್ಲಿ ಇದು ಜಾರಿಯಾಗಲೇ ಇಲ್ಲ. ಮೂರು ರಸ್ತೆ ಸೇರುವ ನಡುವಲ್ಲೇ ವೃತ್ತವಿದ್ದರೂ ಹೆದ್ದಾರಿಯ ವಾಹನಗಳು ಎಡಬದಿಯಿಂದ ಮಾತ್ರ ಹೋಗಲು ಹಾಗೂ ಬರಲು ವ್ಯವಸ್ಥೆ ಮಾಡಲಾಯಿತು. ಇದರಿಂದ ಸುಳ್ಯದಿಂದ ಪುತ್ತೂರು ಕಡೆ ಬರುವ ವಾಹನ ಸವಾರರು ಗಲಿಬಿಲಿಗೊಳ್ಳುವ ಅಪಾಯ ಹೆಚ್ಚು. ಇದಕ್ಕೊಂದು ಪರಿಹಾರ ನೀಡುವ ಅನಿವಾರ್ಯವಿದೆ.

ಮಂಜಲ್ಪಡ್ಪುವಿಗೊಂದು ವೃತ್ತ
ಮಂಜಲ್ಪಡ್ಪು ಬಳಿಯ ನೆಹರೂನಗರ ಇದೀಗ ಹಬ್‌ ಆಗಿ ರೂಪುಗೊಳ್ಳುತ್ತಿದೆ. ವಿದ್ಯಾಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ. ದಿನನಿತ್ಯ ಸುಮಾರು 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬೆಳಗ್ಗೆ ಹಾಗೂ ಸಂಜೆ ಇಲ್ಲಿ ಸೇರುತ್ತಾರೆ. ಇದಕ್ಕೆ ತಕ್ಕಂತೆ ರಸ್ತೆಯನ್ನು ಸ್ವಲ್ಪ ವಿಸ್ತರಿಸಲಾಗಿದೆ. ಆದರೆ ಇದು ಏನೇನೂ ಸಾಲದು. ಅಪಘಾತ ಸಂಭವಿಸದಂತೆ ತಡೆಯುವ ದೃಷ್ಟಿಯಿಂದ ಪೊಲೀಸರು ನಿಲ್ಲುತ್ತಾರೆ. ಇದರ ಬದಲು ವೃತ್ತ ನಿರ್ಮಿಸಿದರೆ ಹೇಗೆ ಎಂಬ ಆಲೋಚನೆ ನಗರಸಭೆ ಮುಂದಿದೆ. ಯಾವ ರೀತಿಯಲ್ಲಿ ಯೋಜನೆಯನ್ನು ಜಾರಿಗೆ ತರುತ್ತಾರೋ ಕಾದು ನೋಡಬೇಕಾಗಿದೆ.

10 ದಿನಗಳ ಟೆಂಡರ್‌
ದರ್ಬೆ ವೃತ್ತ, ಫಾ| ಪತ್ರಾವೋ ವೃತ್ತ ಹಾಗೂ ಮಂಜಲ್ಪಡ್ಪು ವೃತ್ತದ ಕಾಮಗಾರಿಗೆ ಸರ್ವೆ ನಡೆದಿದೆ. 10 ದಿನಗಳ ಎಸ್ಟಿಮೇಟ್‌ ಸಿದ್ಧವಾಗಿ ಟೆಂಡರ್‌ ಕರೆಯಲಾಗುವುದು. ಎಸ್‌ಎಫ್‌ಸಿ ಇನ್‌ ಸೆಂಟಿವ್ಸ್‌ ನಲ್ಲಿ 13,62,000 ರೂ. ಅನುದಾನ ಮಂಜೂರಾಗಿದೆ.
– ರೂಪಾ ಶೆಟ್ಟಿ ,
ನಗರಸಭೆ ಪೌರಾಯುಕ್ತೆ, ಪುತ್ತೂರು

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next