ಕಲಬುರಗಿ: ನೀರಿನ ಗುಂಡಿಯಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ ಬುಧವಾರ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.
ವಿಘ್ನೇಶ್ (11), ಪ್ರಶಾಂತ್ (11) ಹಾಗೂ ದರ್ಶನ್ ಎಂಬುವವರೇ ಮೃತ ದುರ್ದೈವಿ ಮಕ್ಕಳು. ಬ್ರಹ್ಮಪುರ ಪ್ರದೇಶದ ನಿವಾಸಿಗಳಾದ ಈ ಮಕ್ಕಳು ಆಟವಾಡಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ.
ಮಹಾಲಕ್ಷ್ಮಿ ಲೇಔಟ್‌ನ ವಿವೇಕಾನಂದ ಕಾಲೇಜಿನ ಹಿಂಭಾಗದ ಖಾಲಿ ನಿವೇಶನದಲ್ಲಿ ಗುಂಡಿ ತೋಡಿದ್ದು, ಮಂಗಳವಾರ ರಾತ್ರಿ ಸುರಿದ ಮಳೆಗೆ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು.
ಬುಧವಾರ ಮಧ್ಯಾಹ್ನ ಆಟವಾಡಲು ಹೋದ ಮೂವರೂ ಮಕ್ಕಳು ಆ ಗುಂಡಿಯಲ್ಲಿ ಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬಂದು ರಕ್ಷಣೆ ಮಾಡುವಷ್ಟರಲ್ಲಿ ಮಕ್ಕಳು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆ ಬಳಿ ಮಕ್ಕಳ ಪೋಷಕರು, ಸಂಬಂಧಿಕರ ಆಕ್ರಂದ ಮುಗಿಲು ಮುಟ್ಟಿದೆ.
ಆರ್.ಜಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.