ಕೊಪ್ಪಳ: ನನ್ನ ಮಕ್ಳು ಸಾಲಿ ಚೋಲೋ ಕಲೀಲಿ ಅಂತಾ ಕಷ್ಟ ಪಟ್ಟಿದ್ನಲ್ಲೋ ನನ್ನ ಮಗಳಾ.. ಮೊನ್ನೆರ ಹೊಸ ಬಟ್ಟಿ ಹೊಲಿಸ್ಕೊಂಡು ಕಾಲೇಜಿಗೆ ಹೋಕ್ಕಿನಿ ಅಂದಿದ್ದೆಲ್ಲೋ ನನ್ನವ್ವಾ..ಆ ಹೊಸ ಬಟ್ಟಿ ಈಗ ಯಾರ್ಗೆ ಕೊಡೊಲ್ಲೋ ಏ ಯವ್ವಾ..ನನ್ನ ಒಬ್ಟಾತನ್ನ ಬಿಟ್ಟ ಹೋದ್ರೆಲ್ಲೋ ನನ್ನ ಮಕ್ಕಳ..ಇನ್ನ ನಾ ಯಾರನ್ನ ಮಕ್ಕಳಂತ ಕರಿಲೋ ಏ ನನ್ನವ್ವ..ಇನ್ನ ನಾನಾದ್ರೂ ಯಾಕ ಜೀವ ಇಡೊಲ್ಲೋ ಏ ಯವ್ವಾ… ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಮವಾರ ತನ್ನ ಮೂರು ಮಕ್ಕಳನ್ನ ಕಳೆದಕೊಂಡ ಯಲಮಗೇರಿಯ ಸೋಮಣ್ಣ ಕುದರಿಮೋತಿ ಅವರ ಆಕ್ರಂದನ ನುಡಿಗಳು ನೆರೆದವರ ಕರಳು ಚುರಕ್ ಎನ್ನುವಂತಿದ್ದವು.
ನಾ ಒಬ್ನ ಏನ್ ಮಾಡ್ಲೋ ದೇವ್ರೇ : ಯವ್ವಾ..ನೀವು ಎಲ್ರೂ ಹೋದ್ರ ನನ್ನ ನೋಡೋರು ಯಾರೂ ಇಲ್ದಂಗಾತಲ್ಲೋ ಯವ್ವಾ..ನನ್ನ ಒಬ್ಟಾತನ್ನ ಬಿಟ್ಟು ಹೋಗಿರಲ್ಲೋ ಯವ್ವಾ..ಅಪ್ಪಾಜಿ ಅಪ್ಪಾಜಿ ಅಂತಿದ್ರಲ್ಲೋ..ಇನ್ನ ನಾನು ಯಾರನ್ನ ಮಕ್ಕಳಂತಾ ಕರಿಲೋ ನನ್ನ ಕೂಸೇ..ಆ ದೇವ್ರ ನನ್ನ ಮನಿಗೆ ಕತ್ಲ ಮಾಡ್ಯಾನೋ..ನನ್ನ ಮನಿಗೇ ಬೆಳಕ್ ಇಲ್ದಂಗ ಮಾಡಿದ್ನಲ್ಲೋ..ಇನ್ನ ಈ ಜೀವನಾಗ ಏನೈತೋ ದೇವ್ರೇ..ಎಂದು ಸೋಮಣ್ಣ ಗೋಗರೆದರು. ಮನೆ ಮೇಲ್ಛಾವಣಿ ಕುಸಿತದಿಂದ ಮೂವರು ಮಕ್ಕಳನ್ನು ಕಳೆದುಕೊಂಡ ಸೋಮಣ್ಣನವರ ಜೀವನದ ಸ್ಥಿತಿ ನೆನೆದು ಗ್ರಾಮಸ್ಥರು ಕಣ್ಣೀರು ಹಾಕಿದರು.ಆ ದೇವ್ರು ಮಕ್ಕಳ ಮುಖವನ್ನೂ ಕಣ್ತೆರೆದು ನೋಡ್ಲಿಲ್ಲ. ಆ ದೇವ ಎಂಥಾ ಕ್ರೂರಿ.. ಎಂದು ಜನ ಕಣ್ಣೀರು ಹಾಕುತ್ತಲೇ ಶಪಿಸಿದರು.
ಪ್ರಕರಣ ನಡೆದಿದ್ದು ಹೀಗೆ: ಯಲಮಗೇರಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಮನೆ ನೆನೆದಿತ್ತು. ಸೋಮವಾರ ರಾತ್ರಿಯೂ ಸ್ವಲ್ಪ ಮಳೆಯಾಗಿತ್ತು. ಹೀಗಾಗಿ ಹೊರಗೆ ಮಲಗಿದ್ದ ತಂದೆ ಸೋಮಣ್ಣ ತನ್ನ ಮಕ್ಕಳ ಜತೆ ಒಳಗೆ ಬಂದಿದ್ದ. ಮಕ್ಕಳಾದ ಸುಜಾತ ಕುದರಿಮೋತಿ (22), ಅಮರೇಶ ಕುದರಿಮೋತಿ (18) ಹಾಗೂ ಗವಿಸಿದ್ದಪ್ಪ ಕುದರಿಮೋತಿ (15)ಅವರನ್ನು ಪಡಸಾಲೆಯಲ್ಲಿ ಮಲಗಲು ಹೇಳಿ ತಾನು ಅಡುಗೆ ಮನೆಯಲ್ಲಿ ಮಲಗಿದ್ದ. ಮಕ್ಕಳು ನಿದ್ರೆಗೆ ಜಾರಿದ ಹೊತ್ತಿನಲ್ಲೇ ಪಡಸಾಲೆ ಗೋಡೆ ಕುಸಿದು ಬಿದ್ದು ಮಕ್ಕಳು ಚಿರನಿದ್ರೆಗೆ ಜಾರುವಂತೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.
ಮನೆ ಗೋಡೆ ಕುಸಿದ ಶಬ್ದ ಕೇಳಿದ ತಂದೆ ಸೋಮಣ್ಣ ಅಡುಗೆ ಮನೆ ಬಾಗಿಲು ತೆರೆದು ನೋಡಿದಾಗ ಮಕ್ಕಳ ಮೇಲೆ ಕಟ್ಟಿಗೆ-ಮಣ್ಣು ಬಿದ್ದಿದ್ದನ್ನು ನೋಡಿದಿಕ್ಕೇ ತಿಳಿಯದಂತಾಗಿ ಅಕ್ಕಪಕ್ಕದ ಮನೆ ಜನರನ್ನು ಎಬ್ಬಿಸಿದ್ದಾನೆ. ಎಲ್ಲರೂ ಬಂದು ಮಕ್ಕಳ ಮೇಲೆ ಬಿದ್ದ ಮಣ್ಣು ಕಟ್ಟಿಗೆ ತೆಗೆದು ಹಾಕುವಷ್ಟರಲ್ಲೇ ಅವರೆಲ್ಲ ಇಹಲೋಕ ತ್ಯಜಿಸಿದ್ದರು.
ತಾಯಿ ಕಳೆದುಕೊಂಡಿದ್ರು: ಸೋಮಣ್ಣನ ಪತ್ನಿ ಗಂಗಮ್ಮ 11 ವರ್ಷಗಳ ಹಿಂದೆ ಮೃತಪಟ್ಟಿದ್ದಳು. ಇನ್ನ ಮೂವರು ಮಕ್ಕಳ ಮುಖ ನೋಡಿ ಜೀವನ ಸಾಗಿಸುತ್ತಿದ್ದ ತಂದೆಗೆ ಸೋಮವಾರ ಮತ್ತೆ ಬರಸಿಡಿಲು ಬಡಿದಿದೆ. ಮಗಳು ಸುಜಾತಾ ತನ್ನ ತಮ್ಮಂದಿರಾದ ಗವಿಸಿದ್ದಪ್ಪ, ಅರಮೇಶಹಾಗೂ ತಂದೆಯ ಹೊಟ್ಟೆ-ಬಟ್ಟೆ ನೋಡುತ್ತ ತಾಯ್ತನದ ಪ್ರೀತಿ ನೀಡುತ್ತಿದ್ದಳು. ಮನೆ ಕೆಲಸ ಮಾಡುತ್ತಲೇ ಕಾಲೇಜು ಮೆಟ್ಟಿಲು ಹತ್ತಿದ್ದಳು. ಇತ್ತೀಚೆಗಷ್ಟೆ ಇರಕಲ್ ಗಡಾ ಪದವಿ ಕಾಲೇಜಿನಲ್ಲಿ ಮೊದಲ ಬಿಎ ಪ್ರವೇಶ ಪಡೆದಿದ್ದಳು.
ಮೃತರ ಕುಟುಂಬಕ್ಕೆ15 ಲಕ್ಷ ರೂ. : ಮಳೆಯಿಂದ ಮನೆ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪ ಎನ್‌ಡಿಆರ್‌ಎಫ್ ನಿಯಮದಡಿ ತಲಾ 4ಲಕ್ಷ, ಸಿಎಂ ಪರಿಹಾರ ನಿಧಿಯಿಂದ ತಲಾ 1ಲಕ್ಷ ರೂ. ಸೇರಿದಂತೆ ತಲಾ 5 ಲಕ್ಷದಂತೆ ಒಟ್ಟು ಮೂರು ಮಕ್ಕಳ ಕುಟುಂಬಕ್ಕೆ 15ಲಕ್ಷ ರೂ. ಪರಿಹಾರವನ್ನು ಸರ್ಕಾರ ಭರಿಸಲಿದೆ ಎಂದು ಕೊಪ್ಪಳ ತಹಶೀಲ್ದಾರ್ ಜೆ.ಬಿ. ಮಜ್ಜಗಿ ತಿಳಿಸಿದರು.
-ದತ್ತು ಕಮ್ಮಾರ