ಬೆಂಗಳೂರು: ಆನೆಯ ದಂತ ಕಳ್ಳಸಾಗಣೆ ಮತ್ತು ಅಕ್ರಮ ಮಾರಾಟ ಯತ್ನ ಸಂಬಂಧ ಸಿಐಡಿ ಡಿವೈಎಸ್‌ಪಿ ಸಂಬಂಧಿ ಹಾಗೂ ಮಾಜಿ ಅರಣಾಧಿಕಾರಿ ಸೇರಿ ಮೂವರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಿವೃತ್ತ ಸಹಾಯಕ ಅರಣ್ಯಾಧಿಕಾರಿ ಎಂ.ಸುಬ್ರಾಯ್ ವರ್ಮ, ಆನೆ ಮಾಲೀಕ ಕರುಣಾಕರ್ ಪೂಜಾರ್ ಮತ್ತು ದಲ್ಲಾಳಿ ಸುದೇಶ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇವರಿಂದ 12 ಕೆ.ಜಿ ತೂಕದ ಲಕ್ಷಾಂತರ ರೂ ಮೌಲ್ಯದ ಮೂರು ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಂ.ಜಿ.ರಸ್ತೆಯಲ್ಲಿ ಕಾರೊಂದರಲ್ಲಿ ಕುಳಿತ ವ್ಯಕ್ತಿಯೊಬ್ಬ ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಶೋಕ್‌ನಗರ ಪೊಲೀಸರು ಆನೆ ದಂತ ಸಮೇತ ಮಧ್ಯವರ್ತಿ ಸುದೇಶ್‌ನನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಸಿಐಡಿ ಡಿವೈಎಸ್‌ಪಿ ಸಂಬಂಧಿ ಎಂಬುದು ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಎರಡು ದಂತಗಳನ್ನು ವಶಪಡಿಸಿಕೊಂಡಿದ್ದು, ಮತ್ತೂಂದನ್ನು ಸುದೇಶ್ ಮನೆಯಲ್ಲಿ ಪತ್ತೆಯಾಗಿವೆ. ಆನೆ ಮಾಲೀಕ ಕರುಣಾಕರ್ ಪೂಜಾರ್, ನಿವೃತ್ತ ಅಧಿಕಾರಿ ಸುಬ್ರಾಯ್ ವರ್ಮ ಮತ್ತು ಸುದೇಶ್ ಒಟ್ಟಾಗಿ ಆನೆ ದಂತಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದರು. ಮಂಗಳೂರಿನಿಂದ ಆನೆ ದಂತಗಳನ್ನು ಬೆಂಗಳೂರಿಗೆ ತರುವಾಗ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕರುಣಾಕರ್ ಪೂಜಾರ್ ಅವರು ಈ ಹಿಂದೆ ಆನೆ ಸಾಕಿದ್ದು, ಇತ್ತೀಚೆಗಷ್ಟೇ ಮೃತಪಟ್ಟಿತ್ತು. ಬಳಿಕ ಆನೆ ದಂತಗಳನ್ನು ತೆಗೆದು ಎಂ.ಜಿ.ರಸ್ತೆಯ ಅಂಗಡಿಯೊಂದರಲ್ಲಿ ಮಾರಾಟಕ್ಕೆ ಯತ್ನಿಸಿದ್ದರು. ಇದಕ್ಕೆ ನಿವೃತ್ತ ಅರಣ್ಯಾಧಿಕಾರಿ ಸುಬ್ರಾಯ್ ವರ್ಮಾ ಹಾಗೂ ಸುದೇಶ್ ಸಹಾಯ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.