ಬೆಂಗಳೂರು: ಗಾಂಜಾ, ಮದ್ಯ ಸೇವನೆಗಾಗಿ ರಿಟ್ಜ್ ಕಾರಿನಲ್ಲಿ ಬಂದು ರಾಯಲ್ ಎನ್‌ಫೀಲ್ಡ್ ಸೇರಿದಂತೆ ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾಯಂಡಹಳ್ಳಿಯ ಅಂಬೇಡ್ಕರ್ ನಗರ ನಿವಾಸಿ ಸೂರ್ಯ ಅಲಿಯಾಸ್ ತುಡುಕ್ ಸೂರ್ಯ (22), ಪ್ರಶಾಂತ್ ಅಲಿಯಾಸ್ ರೆಡ್ಡಿ (22) ಮತ್ತು ದಶರಥ (25) ಬಂಧಿತರು. ಆರೋಪಿಗಳಿಂದ 11 ಲಕ್ಷ ರೂ. ಮೌಲ್ಯದ 5 ರಾಯಲ್ ಎನ್‌ಫೀಲ್ಡ್ ಬುಲೆಟ್, 2 ಪಲ್ಸರ್ ಸೇರಿ 9 ದ್ವಿಚಕ್ರ ವಾಹನಗಳು ಹಾಗೂ 6 ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ನಗರದ 6 ಠಾಣೆಗಳ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಮತ್ತು ಒಂದು ಕನ್ನ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳ ಪೈಕಿ ಸೂರ್ಯ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ದಶರಥ ಕಾರು ಚಾಲಕನಾಗಿದ್ದು, ಪ್ರಶಾಂತ್ ಕೆ.ಆರ್.ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾನೆ.
ಮೂವರೂಆರೋಪಿಗಳು ಸ್ನೇಹಿತರಾಗಿದ್ದು, ಗಾಂಜಾ ಮತ್ತು ಮದ್ಯವ್ಯಸನಿಗಳಾಗಿದ್ದಾರೆ. ತಮ್ಮ ದುರಭ್ಯಾಸಗಳಿಗೆ ಹಣ ಹೊಂದಿಸಲು, ಮನೆ ಮಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮಧ್ಯವರ್ತಿಗಳ ಮೂಲಕ ತಮಿಳುನಾಡಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ರಿಟ್ಜ್ ಕಾರಿನಲ್ಲಿ ಬರುತ್ತಿದ್ದರು: ಆರೋಪಿಗಳ ಪೈಕಿ ದಶರಥ, ಬೇರೆಯವರ ರಿಟ್ಜ್ ಕಾರು ಓಡಿಸುತ್ತಿದ್ದು, ಕಾರು ಮಾಲೀಕರು ನಿತ್ಯ 600 ರೂ. ಕೂಲಿ ಕೊಡುತ್ತಿದ್ದರು. ಮೂವರು ಆರೋಪಿಗಳು ಇದೇ ರಿಟ್ಜ್ ಕಾರಿನಲ್ಲಿ ರಾತ್ರಿ ಹೊತ್ತು ಕೆಲ ಪ್ರದೇಶಗಳನ್ನು ಸುತ್ತಾಡುತ್ತಿದ್ದರು.
ಬಳಿಕ ಮನೆ ಮುಂದೆ ನಿಲ್ಲಿಸಿದ್ದ ಹೊಸ ಬುಲೆಟ್‌ಗಳು, ಪಲ್ಸರ್‌ಗಳು(ನಂಬರ್ ಬರೆಸದಿರುವ) ಹಾಗೂ ಇತರೆ ಮಾದರಿಯ ದ್ವಿಚಕ್ರ ವಾಹನಗಳ ಲಾಕ್ ಮುರಿದು ಡೈರೆಕ್ಟ್ ಮಾಡಿಕೊಂಡು ಕದ್ದೊಯ್ಯುತ್ತಿದ್ದರು. ಬಳಿಕ ಕೇವಲ 20-30 ಸಾವಿರ ರೂ.ಗೆ ಮದ್ಯವರ್ತಿಗಳ ಮೂಲಕ ಮಾರಾಟ ಮಾಡುತ್ತಿದ್ದರು.
ಆರೋಪಿಗಳ ಕೃತ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಆಧಾರದ ಮೇಲೆ ವಿಶೇಷ ಕಾರ್ಯಚರಣೆ ನಡೆಸಿದಾಗ ರಿಟ್ಜ್ ಕಾರಿನ ನಂಬರ್ ಪತ್ತೆಯಾಗಿದ್ದು, ಕಾರಿನ ನಂಬರ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.