ಬೆಂಗಳೂರು: ಕಮ್ಮನಹಳ್ಳಿ ಮುಖ್ಯರಸ್ತೆಯಿಂದ ಎಟಿಎಂಗೆ ತುಂಬಬೇಕಿದ್ದ 99 ಲಕ್ಷ ರೂ. ಹಣವನ್ನು ವಾಹನದ ಸಮೇತ ಕದ್ದು ಶುಕ್ರವಾರ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಎಟಿಎಂಗಳಿಗೆ ಹಣ ತುಂಬುವ ಖಾಸಗಿ ಏಜೆನ್ಸಿಯ ಸಿಬ್ಬಂದಿ ದಯಾನಂದ್, ಮುಖೇಶ್, ಮೊಹಮದ್ ಲಿಯಾಖತ್ ಬಂಧಿತ ಆರೋಪಿಗಳು.
ಪ್ರಮುಖ ಆರೋಪಿ ಪವನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾಸಗಿ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಲ್ಲಿನ ಯಂತ್ರಗಳಿಗೆ ಹಣ ತುಂಬುವ ಖಾಸಗಿ ಏಜೆನ್ಸಿಯೊಂದರ ವಾಹನದ ಚಾಲಕನಾಗಿ ಆರೋಪಿ ಪವನ್ ಕಾರ್ಯನಿರ್ವಹಿಸುತ್ತಿದ್ದು, ದಯಾನಂದ್ ಹಾಗೂ ಮುಖೇಶ್ ಕಸ್ಟೋಡಿಯನ್‌ಗಳಾಗಿ ಮತ್ತು ಮೊಹಮ್ಮದ್ ಲಿಯಾಖತ್ ಗನ್‌ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.
ಏಜೆನ್ಸಿ ಸೇವೆ ಓದಗಿಸುವ ಬ್ಯಾಂಕ್‌ಗಳಿಂದ ಹಣ ಸಂಗ್ರಹಿಸುವುದು ಹಾಗೂ ಎಟಿಎಂಗಳಿಗೆ ಹಣ ತುಂಬಿಸುವ ಕೆಲಸವನ್ನು ಆರೋಪಿಗಳು ನಿರ್ವಹಿಸುತ್ತಿದ್ದು, ಶುಕ್ರವಾರ ಸಂಜೆ 4.30ರ ಸುಮಾರಿಗೆ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಎಟಿಎಂಗೆ ಹಣ ತುಂಬಲು ವಾಹನದಲ್ಲಿ ಬಂದಿದ್ದರು. ಕಸ್ಟೋಡಿಯನ್‌ಗಳಿಬ್ಬರೂ ಹಣ ತುಂಬಲು ಕೆಳಗೆ ಇಳಿದು, ಪುನಃ ಹತ್ತಿಕೊಂಡಿದ್ದಾರೆ. ಬಳಿಕ ಪವನ್ ಹಾಗೂ ಇತರ ಆರೋಪಿಗಳು 99 ಲಕ್ಷ ರೂ. ಸಮೇತ ಪರಾರಿಯಾಗಿದ್ದಾರೆ.
ಬಳಿಕ ಸಂಜೆ 7 ಗಂಟೆ ಸುಮಾರಿಗೆ ಉಳಿದ ಆರೋಪಿಗಳು ಏಜೆನ್ಸಿಯ ಮ್ಯಾನೇಜರ್ ಆನಂದ್‌ಗೆ ಕರೆ ಮಾಡಿ, ನಾವು ಹಣ ತುಂಬಲು ಕೆಳಗೆ ಇಳಿದಾಗ ಪವನ್ ನಮ್ಮ ದಿಕ್ಕುತಪ್ಪಿಸಿ ಹಣದ ಸಮೇತ ವಾಹನ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಆನಂದ್ ಕೂಡಲೇ ಡಯಲ್ 100ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಾಣಸವಾಡಿ ಉಪವಿಭಾಗದ ಪೊಲೀಸರು ಅಲ್ಲಲ್ಲಿ ನಾಕಾಬಂದಿ ಹಾಕಿ ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಈ ಬೆಳವಣಿಗೆಗಳ ನಡುವೆಯೇ ಎಚ್‌ಬಿಆರ್ ಲೇಔಟ್‌ನಲ್ಲಿ ಹಣವಿದ್ದ ವಾಹನ ಪತ್ತೆಯಾಗಿದೆ. ಕಾರ್ಯಾಚರಣೆ ಮುಂದುವರಿಸಿ ದಯಾನಂದ್, ಮುಖೇಶ್, ಮೊಹಮದ್ ಲಿಯಾಖತ್‌ನನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ಒಟ್ಟಾಗಿ ಹಣ ದೋಚಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಚಾಲಕ ಪವನ್ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
75 ಲಕ್ಷ ರೂ. ಕಳವು ಕೇಸಲ್ಲಿ ಭಾಗಿ: ಬಂಧಿತರ ಪೈಕಿ ಆರೋಪಿ ಮುಖೇಶ್, 2018ರ ನವೆಂಬರ್‌ನಲ್ಲಿ ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಖಾಸಗಿ ಬ್ಯಾಂಕ್‌ಗೆ ತುಂಬಬೇಕಿದ್ದ 75 ಲಕ್ಷ ರೂ. ಕಳವು ಮಾಡಿಕೊಂಡು ಹೋಗಿದ್ದ ಪ್ರಕರಣದಲ್ಲೂ ಭಾಗಿಯಾಗಿದ್ದ ಎಂಬ ಬಗ್ಗೆ ತನಿಖೆ ವೇಳೆ ಗೊತ್ತಾಗಿದೆ. ಕೆ.ಜಿ.ಹಳ್ಳಿ ಪ್ರಕರಣದಲ್ಲಿ ಭಾಗಿಯಾದ ಬಳಿಕವೂ ಪುನಃ ಕೆಲಸಕ್ಕೆ ಸೇರಿಕೊಂಡಿದ್ದ ಮುಖೇಶನೇ ಈ ಬಾರಿ ಹಣ ಕಳುವಿಗೆ ಸಂಚು ರೂಪಿಸಿರುವ ಸಾಧ್ಯತೆಯಿದೆ. ಉಳಿದ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳು ಒಳಸಂಚು ರೂಪಿಸಿ ಕೃತ್ಯ ಎಸಗಿರುವುದು ಇದುವರೆಗಿನ ತನಿಖೆಯಲ್ಲಿ ಗೊತ್ತಾಗಿದೆ. ಚಾಲಕ ಪವನ್ ಬಂಧನಕ್ಕೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
-ರಾಹುಲ್‌ಕುಮಾರ್ ಶಹಾಪುರವಾಡ್, ಪೂರ್ವ ವಿಭಾಗದ ಡಿಸಿಪಿ