ಮಡಿಕೇರಿ: ಸಾರ್ವಜನಿಕರಿಗೆ ದುಪ್ಪಟ್ಟು ಹಣದ ಆಮಿಷವೊಡ್ಡಿ ವೆಬ್‌ಸೈಟ್ ಮೂಲಕ ಹಣವನ್ನು ಹೂಡಿಕೆ ಮಾಡಿಸಿ ಕೋಟ್ಯಾಂತರ ರೂ ವಂಚಿಸಿರುವ ಜಾಲವನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ನೇತೃತ್ವದ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಕುಶಾಲನಗರದ ದ ಎ.ಜಾನ್(45), ಶಶಿಕಾಂತ್ ಅಲಿಯಾಸ್ ಶಮ್ಮಿ(37), ಆಂಟೋನಿ ಡಿ. ಕುನ್ನ ಅಲಿಯಾಸ್ ಡ್ಯಾನಿ(39) ಬಂಧಿತರು.. ಇವರ ಬಳಿಯಿಂದ ವಂಚನೆಗೆ ಬಳಸುತ್ತಿದ್ದ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗ್ಳನ್ನು ವಶ ಪಡಿಸಿಕೊಳ್ಳಲಾಗಿದೆ.
ಪ್ರಕರಣದ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್, ಉಳಿದ ನಾಲ್ವರು ಆರೋಪಿಗಳು ಕೂಡ ಕೊಡಗಿನವರೇ ಆಗಿದ್ದು, ಶೀಘ್ರ ಬಂಧಿಸುವುದಾಗಿ ತಿಳಿಸಿದರು. ಬೆಂಗಳೂರಿನ ವೆಬ್ ಸೈಟ್ ಡೆವಲಪರ್ ಸಂಸ್ಥೆಯೊಂದರ ಮೂಲಕ ವಂಚನೆಗಾಗಿ ವೆಬ್ ಸೈಟ್‌ವೊಂದನ್ನು ರಚಿಸಿಕೊಂಡ ಆರೋಪಿಗಳು, ಆಪ್ತ ಸ್ನೇಹಿತರ ಸಹಕಾರದೊಂದಿಗೆ ಸಾರ್ವಜನಿಕರನ್ನು ಕ್ಯಾಪಿಟಲ್ ರಿಲೇಷನ್ಸ್ ಡಾಟ್ ಇನ್ ಎನ್ನುವ ವೆಬ್‌ಸೈಟಿಗೆ ಸುಮಾರು 4 ಸಾವಿರ ಮಂದಿಯನ್ನು ಹೂಡಿಕೆದಾರರನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ವೆಬ್‌ಸೈಟ್ ಮೂಲಕ ಹೂಡಿಕೆ ಮಾಡುವ ಹಣಕ್ಕೆ ದುಪ್ಪಟ್ಟು ಹಣ ನೀಡುವ ಆಮಿಷವೊಡ್ಡಿ ಸುಮಾರು 15 ಕೋಟಿ ರೂ.ಗಳಷ್ಟು ವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ವಂಚನೆಯ ಜಾಲ ಕರ್ನಾಟಕ ರಾಜ್ಯದಾದ್ಯಂತ ಹಬ್ಬಿಕೊಂಡಿರುವ ಬಗ್ಗೆ ಸಂಶಯಗಳಿದೆ ಎಂದು ಎಸ್‌ಪಿ ತಿಳಿಸಿದರು.
ವಂಚನಾ ಜಾಲದ ವೆಬ್‌ಸೈಟ್ ಪ್ರಕಾರ ಯೂಸರ್ ಐಡಿ ಪಾಸ್ ವರ್ಡ್‌ನೊಂದಿಗೆ ಹೂಡಿಕೆದಾರರು ಮೊದಲಿಗೆ 3 ಇ-ಪಿನ್ ಖರೀದಿಸಬೇಕಾಗುತ್ತದೆ. ತಲಾ 1 ಸಾವಿರ ರೂ.ನಂತೆ 3 ಸಾವಿರ ರೂ.ಗಳನ್ನು ಆರೋಪಿಗಳ ಖಾತೆಗೆ ಜಮಾವಣೆ ಮಾಡಬೇಕಾಗುತ್ತದೆ. ಹಣ ಸಂದಾಯ ಮಾಡಿದ ರಶೀದಿಯನ್ನು ಅಪ್‌ಲೋಡ್ ಮಾಡಿದ ನಂತರ ಏಳು ದಿನಗಳ ಒಳಗೆ 3 ಸಾವಿರ ರೂ.ಗಳಿಗೆ ದುಪ್ಪಟ್ಟಾಗಿ 6 ಸಾವಿರ ರೂ.ಗಳನ್ನು ಹೂಡಿಕೆದಾರನ ಖಾತೆಗೆ ಸಂದಾಯ ಮಾಡಲಾಗುತ್ತದೆ. ಈ ಪ್ರಕಾರವಾಗಿ ಆರಂಭದಲ್ಲಿ ಇ-ಪಿನ್ ಪಡೆಯಲೆಂದು ಹೂಡಿಕೆ ಮಾಡಿದ ಸಾರ್ವಜನಿಕರು ಮೊದ ಮೊದಲು ಲಾಭ ಬಂತೆಂದು ನಂತರದ ದಿನಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಹಣ ಹೂಡಿಕೆ ಮಾಡಿ ಕೊನೆಯ ಕ್ಷಣ ಹಣ ಸಿಗದೆ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ ಎಂದರು.