Advertisement
1 ಬೆದರಿಕೆಯಿಂದ 3 ಕೋಟಿ ರೂ. ನಷ್ಟ!ಹುಸಿ ಬಾಂಬ್ ಬೆದರಿಕೆಗಳಿಂದ ಕಳೆದ ಒಂದು ವಾರದಿಂದ ಭಾರತೀಯ ವಿಮಾನಯಾನ ವಲಯವು ತಲ್ಲಣಗೊಂಡಿದೆ. ಅಂತಾರಾಷ್ಟ್ರೀಯ ಹಾಗೂ ದೇಶಿಯ ವಿಮಾನಗಳಿಗೆ ನಿರಂತರ ವಾಗಿ ಎದುರಾಗುತ್ತಿರುವ ಬೆದರಿಕೆಗಳಿಂದ ಪ್ರಯಾಣಿಕರಿಗೆ ಆತಂಕ ಮಾತ್ರವಲ್ಲದೇ, ವಿಮಾನಯಾನ ಸಂಸ್ಥೆಗಳಿಗೆ ಸಾಕಷ್ಟು ಆರ್ಥಿಕ ನಷ್ಟವೂ ಆಗುತ್ತಿದೆ. ಮೇಲ್ನೋಟಕ್ಕೆ ಹುಸಿ ಬಾಂಬ್ ಬೆದರಿಕೆಯಷ್ಟೇ ಎನಿಸಬಹುದು. ಆದರೆ ಇಂಥದ್ದೊಂದು ಬೆದರಿಕೆಯಿಂದ ವಿಮಾನಯಾನ ಸಂಸ್ಥೆಗಳಿಗೆ ಭಾರಿ ನಷ್ಟವಾಗುತ್ತದೆ. ಉದಾಹರಣೆಗೆ, ಮುಂಬಯಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಬೋಯಿಂಗ್ 777 ವಿಮಾನಕ್ಕೆ ಬಾಂಬ್ ಬೆದರಿಕೆ ಬಂತು. ಕೂಡಲೇ ಈ ವಿಮಾನವನ್ನು ದಿಲ್ಲಿ ಏರ್‌ಪೋರ್ಟ್‌ಗೆ ತಿರುಗಿಸಲಾಯಿತು. 200 ಪ್ರಯಾಣಿಕರು ಮತ್ತು 130 ಟನ್ ಜೆಟ್ ಇಂಧನ, ಪ್ರಯಾಣಿಕರ ಲಗೇಜ್, ಬ್ಯಾಗೇಜ್‌ನಿಂದಾಗಿ ವಿಮಾನದ ತೂಕ ಹೆಚ್ಚು ಕಡಿಮೆ 340- 350 ಟನ್ ಇತ್ತು. ಇಷ್ಟು ಭಾರದಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಕನಿಷ್ಠ 200 ಟನ್ ಭಾರ ಇದ್ದರೆ ಮಾತ್ರ ಸರಾಗವಾಗಿ ಲ್ಯಾಂಡಿಂಗ್ ಮಾಡಬಹುದು. ಮುಂಬಯಿಯಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಬೆದರಿಕೆ ಬಂದ ಕಾರಣ, ಲ್ಯಾಂ ಡಿಂಗ್ ಮಾಡಲು ವಿಮಾನದ ತೂಕವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು ಅನಿವಾರ್ಯವಾಯಿತು. ಆಗ ವಿಮಾನದಲ್ಲಿದ್ದ ಇಂಧನದ ಪೈಕಿ 100 ಟನ್ ಜೆಟ್ ಇಂಧನವನ್ನು ಹೊರಗೆ ಹಾಕಲಾಯಿತು. ಅಷ್ಟೂ ಇಂಧನ ವ್ಯರ್ಥವಾಯಿತು. ಪರಿಣಾಮ, ಟನ್ ಜೆಟ್ ಇಂಧನಕ್ಕೆ ಹೆಚ್ಚು ಕಡಿಮೆ 1 ಲಕ್ಷ ರೂ. ಆಗುತ್ತದೆ. ಅಂದರೆ, 1 ಕೋಟಿ ರೂ. ನಷ್ಟ. ಇಂಧನದ ಲೆಕ್ಕಾಚಾರ. ವೇಳಾ ಪಟ್ಟಿ ರಹಿತ ತುರ್ತು ಲ್ಯಾಂಡಿಂಗ್, ಪ್ರಯಾಣಿಕರಿಗೆ ವಸತಿ ವ್ಯವಸ್ಥೆ, ಏರ್‌ಕ್ರಾಫ್ಟ್ ಗ್ರೌಂಡಿಂಗ್, ಸಿಬಂದಿ ಬದಲಾವಣೆ ಸೇರಿದಂತೆ ಇನ್ನಿತರ ಎಲ್ಲ ವೆಚ್ಚವು ಸೇರಿ ಸುಮಾರು 3 ಕೋಟಿ ರೂ. ಆಗುತ್ತದೆ. ಅಂದರೆ ಒಂದು ಹುಸಿ ಬಾಂಬ್ ಬೆದರಿಕೆಯಿಂದ ವಿಮಾನಯಾನ ಸಂಸ್ಥೆಗೆ 3 ಕೋಟಿ ರೂ.ವರೆಗೂ ನಷ್ಟ ಗ್ಯಾರಂಟಿ.
ಏರ್ ಇಂಡಿಯಾ ಎಕ್ಸ್‌ಪ್ರೆಸ್, ಏರ್ ಇಂಡಿಯಾ, ವಿಸ್ತಾರ, ಇಂಡಿಗೋ ಮತ್ತು ಆಕಾಶ್ ಏರ್ ಸಂಸ್ಥೆಯ ವಿಮಾನಗಳಿಗೆ ಹೆಚ್ಚು ಬಾಂಬ್ ಬೆದರಿಕೆ ಬಂದಿದೆ. ಅದರಲ್ಲೂ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 7 ವಿಮಾನಗಳಿಗೆ ಬೆದರಿಕೆಯುಂಟಾಗಿದೆ. ಇನ್ನು ವಿಸ್ತಾರ 6, ಇಂಡಿಗೋ 5, ಏರ್ ಇಂಡಿಯಾದ 2 ವಿಮಾನಗಳಿಗೆ ಈವರೆಗೆ ಬಾಂಬ್ ಬೆದರಿಕೆಯುಂಟಾಗಿದೆ. ಈ ಸಂಸ್ಥೆಗಳ ಅಂತಾ ರಾಷ್ಟ್ರೀಯ ಮತ್ತು ದೇಶಿ ವಿಮಾನಗಳು ಬೆದರಿಕೆಯನ್ನು ಸ್ವೀಕರಿಸಿವೆ. ಒಟ್ಟಾರೆ ಒಂದು ವಾರದಲ್ಲಿ 70 ಹುಸಿ ಬಾಂಬ್ ಬೆದರಿಕೆಗಳು ಬಂದಿವೆ. 80 ಕೋಟಿ ರೂ.ನಷ್ಟ!
ಹಬ್ಬದ ಋತುವಿನಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳು ಭಾರೀ ನಷ್ಟವನ್ನುಂಟು ಮಾಡು ತ್ತಿವೆ. ಒಂದರ್ಥದಲ್ಲಿ ಇದನ್ನು ಆರ್ಥಿಕ ಭಯೋತ್ಪಾದನೆ ಎಂದು ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ಈÊರೆಗಿನ ಹುಸಿ ಬಾಂಬ್ ಕರೆಗಳ ಅಂದಾಜನ್ನು ಲೆಕ್ಕಿಸಿದರೆ ಸುಮಾರು 80 ಕೋಟಿ ರೂ. ಆರ್ಥಿಕ ನಷ್ಟವಾಗಿರಬಹುದು ಎಂದು ಹೇಳಲಾಗಿದೆ. ಭಾರತದ ವಿಮಾನಯಾನ ಸಂಸ್ಥೆಗಳ ಪೈಕಿ ಇಂಡಿಗೋ ವಿಮಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹುಸಿ ಬಾಂಬ್ ಬೆದರಿಕೆಯುಂಟಾಗಿದೆ.
Related Articles
ಕೆಲವು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಹಿಂದೆ ಬಾಲಕರು ಮತ್ತು ಪ್ರಾಂಕರ್ಸ್‌ಗಳಿರುವುದು ಮೇಲ್ನೋಟದ ತನಿಖೆಯಲ್ಲಿ ಗೊತ್ತಾಗುತ್ತಿದೆ ಎನ್ನುತ್ತಾರೆ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರು. ವಿಮಾನಗಳಿಗೆ ಬರುವ ಎಲ್ಲ ಬೆದರಿಕೆಗಳನ್ನು ತನಿಖಾ ಸಂಸ್ಥೆಗಳು ಕೂಲಂಕಷವಾಗಿ ತನಿಖೆ ನಡೆಸುತ್ತಿವೆ. ಈ ಕುರಿತು ವಿಮಾನಯಾನ ಸಂಸ್ಥೆಗಳು, ಭದ್ರತಾ ಏಜೆನ್ಸಿಗಳ ಜತೆ ನಿರಂತರ ಮಾತುಕತೆಯನ್ನು ನಡೆಸಲಾಗುತ್ತದೆ. 4 ವಿಮಾನಗಳಿಗೆ ಟ್ವಿಟರ್‌ನಲ್ಲಿ ಬಾಂಬ್ ಬೆದರಿಕೆ ಹಾಕಿದ್ದ ಛತ್ತೀಸ್‌ಗಢನ ಬಾಲಕನೊಬ್ಬನನ್ನು ಈಗಾಗಲೇ ಬಂಧಿಸಲಾಗಿದೆ. ಯಾವುದೇ ಬೆದರಿಕೆಯನ್ನು ಭದ್ರತಾ ಸಂಸ್ಥೆಗಳು ಹಗುರವಾಗಿ ಪರಿಗಣಿಸುತ್ತಿಲ್ಲ ಎನ್ನುತ್ತಾರೆ ಅವರು.
Advertisement
ಬೆದರಿಕೆ ಹಾಕುವವರಿಗೆ ಹಾರಾಟ ನಿಷೇಧಹುಸಿ ಬಾಂಬ್ ಬೆದರಿಕೆ ಹಾಕುವವರಿಗೆ ವಿಮಾನ ಪ್ರಯಾಣ ನಿಷೇಧ ಮಾಡುವತ್ತ ಸರಕಾರ ಮುಂದಾಗಿದೆ. ಬೆದರಿಕೆ ಹಾಕುವವನ್ನು ನೋ ಫೈಯಿಂಗ್ ಝೋನ್‌ಗೆ ಸೇರಿಸುವ ಪ್ರಸ್ತಾವವನ್ನು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ ಮುಂದಿಟ್ಟಿದೆ. ಸದ್ಯಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕುವವರಿಗೆ ಶಿಕ್ಷಿಸಲು ಯಾವುದೇ ಕಾನೂನುಗಳಿಲ್ಲ. ಹಾಗಾಗಿ ಅವರ ಮೇಲೆ ನಿಷೇಧ ಹೇರುವ ಕುರಿತು ಚರ್ಚೆ ನಡೆದಿದೆ. ಕಾನೂನು ಜಾರಿಗೂ ಚಿಂತನೆ
ಹುಸಿ ಬಾಂಬ್ ಬೆದರಿಕೆ ಒಡ್ಡುವವರನ್ನು ಪತ್ತೆ ಹಚ್ಚಲು ಭದ್ರತಾ ಸಂಸ್ಥೆಗಳು ಸತತವಾಗಿ ಪ್ರಯತ್ನಿಸುತ್ತಿವೆ. ಅಲ್ಲದೇ ಇವರಿಗೆ ಶಿಕ್ಷೆ ಯನ್ನು ನೀಡಲು ಹೊಸ ಕಾನೂನು ಜಾರಿಗೆ ತರುವ ಬಗ್ಗೆಯೂ ಚಿಂತನೆ ನಡೆದಿದೆ. ಯಾಕೆಂದರೆ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸು ವುದು ಮಾತ್ರವಲ್ಲದೇ ಆರ್ಥಿಕವಾಗಿಯೂ ಕಂಪೆನಿಗಳಿಗೆ ಬಾಂಬ್ ಬೆದರಿಕೆ ಕರೆಗಳಿಂದ ಸಾಕಷ್ಟು ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಮಾನಯಾನ ಕಾಯ್ದೆಗಳಿಗೆ ತಿದ್ದುಪಡಿ ತಿಂದು ಹುಸಿ ಬಾಂಬ್ ಬೆದರಿಕೆ ಹಾಕುವವರಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವವನ್ನು ಅಧಿಕಾರಿ ಮುಂದಿಟ್ಟಿದ್ದಾರೆ. ವಿಮಾನಗಳಿಗೆ ಬರುತ್ತಿರುವ ಹುಸಿ ಬಾಂಬ್ ಬೆದರಿಕೆ ನಿರ್ವಹಣೆ ಹೇಗೆ?
ಬಾಂಬ್ ಬೆದರಿಕೆ ಬಂದ ತತ್‌ಕ್ಷಣ ಏನೇನು ಮಾಡಬೇಕು ಎಂಬ ಕುರಿತು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ(ಡಿಜಿಸಿಎ) ಕೆಲವು ಮಾರ್ಗದರ್ಶಿ ಸೂತ್ರ ರಚಿಸಿದೆ. ಅದರ ಪ್ರಕಾರ ಬಾಂಬ್ ಬೆದರಿಕೆ ಬಂದ ತತ್‌ಕ್ಷಣ ಆ ಮಾಹಿತಿಯನ್ನು ಸ್ಥಳೀಯ ನಾಗರಿಕ ವಿಮಾನಯಾನ ಅಧಿಕಾರಿ ಅಥವಾ ಏರ್‌ಲೈನ್ ಕಚೇರಿಗೆ ಮಾಹಿತಿ ನೀಡಬೇಕು. ಅಲ್ಲಿ, ಬೆದರಿಕೆಯು ಅಸಲಿಯೋ, ನಕಲಿಯೋ ಎಂಬುದನ್ನು ಪರೀಕ್ಷಿಸಲಾಗುತ್ತದೆ. ವಿಮಾನಯಾನ ಸಂಸ್ಥೆಯು, ಬೆದರಿಕೆಯು ನಿರ್ದಿಷ್ಟವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಅಂದರೆ ನಿರ್ದಿಷ್ಟ ಬೆದರಿಕೆಯಾಗಿದ್ದರೆ, ನಿರ್ದಿಷ್ಟ ವಿಮಾನದ ವಿವರ, ಅದರ ನಂಬರ್, ದಿನಾಂಕ, ವಿಮಾನ ಹೊರಡುವ, ಇಳಿಯುವ ಸಮಯ ಇತ್ಯಾದಿ ಮಾಹಿತಿ ಇರುತ್ತದೆ. ನಿರ್ದಿಷ್ಟವಲ್ಲದ ಬೆದರಿಕೆಯಲ್ಲಿ ಈ ಯಾವ ಮಾಹಿತಿಯೂ ಇರುವುದಿಲ್ಲ. ಒಂದು ವೇಳೆ, ವಿಮಾನ ಹಾರಾಟದಲ್ಲೇ ಬೆದರಿಕೆ ಬಂದರೆ ವಿಮಾನವನ್ನು ನಿಗದಿತ ಗುರಿ ಸ್ಥಾನಕ್ಕೆ ಹೋಗಬೇಕೋ ಅಥವಾ ವಾಪಸ್ ಬರಬೇಕೋ ಎಂಬುದನ್ನು ಪೈಲೆಟ್ ಅವರೇ ನಿರ್ಧರಿಸಬೇಕಾಗುತ್ತದೆ. ಬೆದರಿಕೆಯ ಸ್ವರೂಪವನ್ನು ಆಧರಿಸಿ ಪೈಲೆಟ್ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಒಂದು ವೇಳೆ, ನೇರವಾಗಿ ವಿಮಾನಯಾನ ಸಂಸ್ಥೆಗೆ ಬೆದರಿಕೆ ವರದಿಯಾದರೆ ಆ ಮಾಹಿತಿಯನ್ನು ಪೈಲೆಟ್ ತಿಳಿಸಲಾಗುತ್ತದೆ ಮತ್ತು ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾರೆ. ಇಷ್ಟಾದರೆ ವಿಮಾನವನ್ನು ಹತ್ತಿರದ ವಿಮಾನ ನಿಲ್ದಾಣಕ್ಕೆ ತಿರುಗಿಸಿ, ಲ್ಯಾಂಡಿಂಗ್ ಮಾಡಲಾಗುತ್ತದೆ. ಪ್ರಯಾಣಿಕರಿಗೆ ಆತಂಕ ಉಂಟಾಗದಂತೆ ನೋಡಿಕೊಳ್ಳಲು ಅವರಿಗೆ ಯಾವುದೇ ಮಾಹಿತಿಯನ್ನು ನೀಡಲಾಗುವುದಿಲ್ಲ. ಪ್ರಯಾಣಿಕರನ್ನು ಸುರಕ್ಷಿತ ಕೋಣೆಗೆ ತೆಗೆದುಕೊಂಡ ಹೋದ ಬಳಿಕ, ವಿಮಾನವನ್ನು ಪರೀಕ್ಷಿಸಲಾಗುತ್ತದೆ. ಒಂದು ಬಾಂಬ್ ಬೆದರಿಕೆಯಿಂದಾಗಿ ಇಷ್ಟೆಲ್ಲ ಪ್ರಕ್ರಿಯೆಗಳನ್ನು ಮಾಡಬೇಕಾಗುತ್ತದೆ. ವಿಮಾನಕ್ಕೂ ಮುನ್ನ ಶಾಲೆಗಳಿಗೆ ಬಾಂಬ್ ಬೆದರಿಕೆ
ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಶುರುವಾಗುವ ಮುಂಚೆ ಬೆಂಗಳೂರು, ದೆಹಲಿ, ಅಹ್ಮದಾಬಾದ್, ನಾಗಪುರ ಸೇರಿದಂತೆ ದೇಶದ ವಿವಿಧ ನಗರಗಳ ಶಾಲೆಗಳಿಗೆ ಬಾಂಬ್ ಬೆದರಿಕೆಗಳ ಪ್ರಕರಣಗಳು ನಡೆದಿದ್ದವು. ಬೆಂಗಳೂರಿನ ಹಲವಾರು ಶಾಲೆಗಳಿಗೆ ಬೆದರಿಕೆ ಇ ಮೇಲ್‌ಗಳು ಬಂದಿದ್ದವು. ಇದರಿಂದ ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಪೋಷಕರು ಆತಂಕ ಪಡುವಂತಾಗಿತ್ತು. ಬಳಿಕ ರೈಲುಗಳಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ಇದೀಗ ವಿಮಾನಗಳ ಸರದಿ.