ನವದೆಹಲಿ/ಪಾಟ್ನಾ: ಶಾಲೆಯ ಆವರಣದಲ್ಲಿ ಬಾಂಬ್ ಇಟ್ಟಿದ್ದೇವೆ ಎನ್ನುವ ಬೆದರಿಕೆ ಇ-ಮೇಲ್ ಹಾಕಿದ ಪರಿಣಾಮ ಭೀತಿಯಿಂದ ಮಕ್ಕಳನ್ನು ಸ್ಥಳಾಂತರಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಸಾದಿಕ್ ನಗರದಲ್ಲಿರುವ ಇಂಡಿಯನ್ ಪಬ್ಲಿಕ್ ಸ್ಕೂಲ್ ಗೆ ಬುಧವಾರ ಮುಂಜಾನೆ 10:49 ರ ಹೊತ್ತಿಗೆ ಶಾಲೆಯ ಆವರಣದಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಬೆದರಿಕೆಯ ಇಮೇಲ್ ವೊಂದು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ವಿಚಾರ ತಿಳಿದ ಕೂಡಲೇ ಪೋಷಕರು ಶಾಲಾ ಗೇಟ್ ಬಳಿ ಬಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶಾಲಾ ಆಡಳಿತ ಮಂಡಳಿ ಇಮೇಲ್ ಬಂದ ಬಳಿಕ ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ಸಂದೇಶ ಕಳುಹಿಸಿದ್ದಾರೆ ಎಂದು ಪೋಷಕರಲ್ಲಿ ಒಬ್ಬರು ಹೇಳಿದ್ದಾರೆ.
ಸದ್ಯ ಈ ಬಗ್ಗೆ ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸುತ್ತಿದ್ದು, ಇದುವರೆಗೆ ಯಾವ ಅನುಮಾನದ ವಸ್ತುಗಳು ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.
Related Articles
ಈ ಶಾಲೆಗೆ ಇಂಥ ಬಾಂಬ್ ಬೆದರಿಕೆಗಳು ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ನವೆಂಬರ್ ನಲ್ಲೂ ಇದೇ ರೀತಿಯ ಬೆದರಿಕೆ ಬಂದಿತ್ತು. ಆ ಬಳಿಕ ಅದು ಹುಸಿ ಬೆದರಿಕೆ ಎನ್ನುವುದು ತಿಳಿದು ಬಂದಿತ್ತು.
ಪಾಟ್ನಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ:
ಇನ್ನೊಂದೆಡೆ ಪಾಟ್ನಾದ ಜಯಪ್ರಕಾಶ್ ನಾರಾಯಣ ವಿಮಾನ ನಿಲ್ದಾಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಬಾಂಬ್ ಬೆದರಿಕೆ ಕರೆ ಬಂದಿದೆ. ಬುಧವಾರ ಬೆಳಗ್ಗೆ 10:47 ರ ಹೊತ್ತಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಸದ್ಯ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದ್ದಾರೆ. ವಿಮಾನಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯಾಚರಿಸುತ್ತಿವೆ ಎಂದು ʼಇಂಡಿಯಾ ಟುಡೇʼ ವರದಿ ತಿಳಿಸಿದೆ.