Advertisement

ರಷ್ಯಾಗೆ ಸಿಟಿಜನ್‌ ಆರ್ಮಿ ಸಡ್ಡು

08:55 PM Feb 27, 2022 | Shreeram Nayak |

ಕೀವ್‌/ಮಾಸ್ಕೋ: ಉಕ್ರೇನ್‌ ಯೋಧರ ಸತತ ಹೋರಾಟದ ನಡುವೆಯೂ ರಷ್ಯಾ ಪಡೆಗಳು ಉಕ್ರೇನ್‌ನೊಳಗ್ಗೆ ಲಗ್ಗೆಯಿಟ್ಟಿವೆ. ಉಕ್ರೇನ್‌ನ ಯೋಧರ ಸಂಖ್ಯೆ ಕೂಡ ದೈತ್ಯ ಮಿಲಿಟರಿ ಶಕ್ತಿಯಿರುವ ರಷ್ಯಾದ ದಾಳಿಯಿಂದಾಗಿ ಇಳಿಮುಖವಾಗುತ್ತಿದೆ.

Advertisement

ಹಾಗಾಗಿ, ಅಲ್ಲಿನ ಸರ್ಕಾರ ನಾಗರಿಕರ ಕೈಗೆ ಬಂದೂಕು ಕೊಟ್ಟಿದೆ. ನಾಗರಿಕರಲ್ಲಿ ದೇಶಭಕ್ತಿ, ಕೆಚ್ಚು ತುಂಬಿ ಅವರನ್ನು ದೇಶ ರಕ್ಷಣೆಗೆ ಮುನ್ನುಗ್ಗಿಸಿದೆ.

ಇದರ ಫ‌ಲವಾಗಿ, ಉಕ್ರೇನ್‌ನ ರಾಜಧಾನಿ ಕೀವ್‌ ನಗರದ ಸಾವಿರಾರು ನಾಗರಿಕರು ಸ್ವಯಂಪ್ರೇರಿತವಾಗಿ ಬಂದು ಸೇನೆಗೆ ಸೇರಿಕೊಳ್ಳುತ್ತಿದ್ದಾರೆ. ರಷ್ಯಾ ದಾಳಿಕೋರರ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದಾರೆ. ನಗರದ ಹೊರವಲಯದಲ್ಲಿರುವ ಪ್ರಾಂತೀಯ ರಕ್ಷಣಾ ಪಡೆಗಳ ಕಚೇರಿ ತುಂಬೆಲ್ಲಾ ನಾಗರಿಕರು ಸೇನೆಗೆ ಸೇರಲು ಜಮಾಯಿಸಿದ್ದಾರೆ. ಆಯ್ಕೆಯಾದ ನಾಗರಿಕರಿಗೆ ಕಚೇರಿ ಪಕ್ಕದಲ್ಲಿರುವ ಮೈದಾನದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆಯಲಾಗುತ್ತಿದೆ. ಎಲ್ಲರ ಕೈಗೆ ಎ.ಕೆ. 47, ಎ.ಕೆ. 56 ಮಾದರಿಯ ಮಷೀನ್‌ ಗನ್‌ಗಳನ್ನು ನೀಡಲಾಗಿದೆ.

ರಕ್ಷಣಾ ಪಡೆಗಳ ಕಚೇರಿಯಿಂದ ಬಂದೂಕು ಪಡೆದವರಲ್ಲಿ ಐಟಿ ಪದವೀಧರರು, ವೈದ್ಯರು, ವಕೀಲರು ಸೇರಿದಂತೆ ಹಲವಾರು ಮಹತ್ವದ ಉದ್ಯೋಗಗಳಲ್ಲಿರುವವರೂ ಸೇರಿದ್ದಾರೆ. ಇವರಲ್ಲೊಬ್ಬರಾದ ರಮನೊವ್‌ ಎಂಬ ಐಟಿ ಉದ್ಯೋಗಿ, “”ರಷ್ಯನ್ನರು ಇಲ್ಲಿಗೆ ಬಂದರೆ ಅವರು ಸಾಯುವುದು ಖಂಡಿತ. ಇಲ್ಲಿ ನಾನೂ ಸೇರಿದಂತೆ ಸಾವಿರಾರು ನಾಗರಿಕರು, ಕೈಯ್ಯಲ್ಲಿ ಬಂದೂಕುಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ. ಎಲ್ಲರಲ್ಲೂ ತಾಯ್ನಾಡನ್ನು ರಕ್ಷಿಸುವ ಛಾತಿಯಿದೆ. ನಾಗರಿಕರ ಪಡೆವನ್ನು ತಡೆಯಲು ರಷ್ಯನ್ನರಿಗೆ ಅವಕಾಶವೇ ಇಲ್ಲ” ಎಂದಿದ್ದಾರೆ.

ಅಲೆಕ್ಸ್‌ ಎಂಬ ಮತ್ತೊಬ್ಬ ವ್ಯಕ್ತಿ ಮಾತನಾಡಿ, “ನಮ್ಮ ನಾಡನ್ನು ರಷ್ಯಾ ಆಕ್ರಮಿಸಲು ಸಾಧ್ಯವಿಲ್ಲ. ಹಾಗೇನಾದರೂ ಅವರು ನಮ್ಮ ನಗರಕ್ಕೆ ಬಂದರೆ ಅವರ ವಿರುದ್ಧ ನಾವು ಶಕ್ತಿಶಾಲಿ ಆಕ್ರಮಣ ಮಾಡಲಿದ್ದೇವೆ. ಕೀವ್‌ ನಗರ ಪ್ರವೇಶಿಸಿದ್ದು ಅವರಿಗೊಂದು ದುಃಸ್ವಪ್ನವಾಗಿ ಕಾಡುವಂತೆ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಇವರಂತೆಯೇ , ಸೇನಾ ಜ್ಯಾಕೆಟ್‌ಗಳನ್ನು ಧರಿಸಿ, ಕೈಯ್ಯಲ್ಲಿ ಮೆಷಿನ್‌ ಗನ್‌ ಹಿಡಿದಿರುವ ನಾಗರಿಕರು, ಉಕ್ರೇನ್‌ಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.

Advertisement

ಸ್ವದೇಶಕ್ಕೆ ಆಗಮಿಸುತ್ತಿರುವ ಉಕ್ರೇನಿಯನ್ನರು
ಒಂದೆಡೆ, ಯುದ್ಧಕ್ಕೆ ಹೆದರಿ ಜೀವ ಉಳಿಸಿಕೊಳ್ಳಲು ಉಕ್ರೇನ್‌ ತೊರೆಯುವವರ ವಿಷಯ ಒಂದೆಡೆಯಾದರೆ, ಯೂರೋಪ್‌ನ ಇತರ ದೇಶಗಳಿಗೆ ಕಾರಣಾಂತರಗಳಿಂದ ವಲಸೆ ಹೋಗಿದ್ದ ಹಲವಾರು ಜನರು, ನಾಗರಿಕ ಸೇನೆಗೆ ಸೇರ್ಪಡೆಯಾಗಲು ಉಕ್ರೇನ್‌ಗೆ ಮರಳುತ್ತಿದ್ದಾರೆ!

“ದೇಶ ಸಂಕಷ್ಟದಲ್ಲಿದ್ದಾಗ ನಾವು ನಮ್ಮ ತಾಯ್ನಾಡಿನ ರಕ್ಷಣೆಗೆ ಹೋರಾಟ ಮಾಡುವುದೇ ಸರಿ’ ಎಂಬುದು ಅವರ ಲೆಕ್ಕಾಚಾರ. ಕಳೆದ ಎರಡು ಮೂರು ದಿನಗಳಲ್ಲಿ ಪೋಲೆಂಡ್‌ನಿಂದ ಸುಮಾರು 22 ಸಾವಿರ ಉಕ್ರೇನಿಯನ್ನರು ತಮ್ಮ ತಾಯ್ನಾಡಿಗೆ ಹಿಂದಿರುಗಿದ್ದಾರೆ ಎಂದು ವರದಿಗಳು ಹೇಳಿವೆ.

ಸಿಟಿಜನ್‌ ಆರ್ಮಿ ಅವಶ್ಯಕತೆಯೇನು?
ಯುದ್ಧಕ್ಕೂ ಮುನ್ನ ಉಕ್ರೇನ್‌ನ ಸೇನೆಯಲ್ಲಿ ಕಾರ್ಯಾಚರಣೆಗೆ ಇಳಿಯುವ ಸೈನಿಕರ ಸಂಖ್ಯೆ 2 ಲಕ್ಷ ಇದ್ದರೆ, ರಷ್ಯಾದ ಕಡೆ 9 ಲಕ್ಷ ಯೋಧರಿದ್ದರು. ಮೀಸಲು ಯೋಧರ ಸಂಖ್ಯೆ ಉಕ್ರೇನ್‌ನಲ್ಲಿ 9 ಲಕ್ಷದಷ್ಟಿದ್ದರೆ, ರಷ್ಯಾದಲ್ಲಿ 20 ಲಕ್ಷದಷ್ಟಿತ್ತು. ಇತ್ತೀಚೆಗಿನ ವರದಿಗಳ ಪ್ರಕಾರ, ಯುದ್ಧದಿಂದಾಗಿ ಎರಡೂ ದೇಶಗಳ ಸಾವಿರಾರು ಯೋಧರು ಅಸುನೀಗಿದ್ದಾರೆ. ರಷ್ಯಾದ ಸೇನಾ ಬಲ ದೊಡ್ಡದಿರುವುದರಿಂದ ಈವರೆಗೆ ಆಗಿರುವ ಯೋಧರ ಸಾವು ಆ ದೇಶವನ್ನು ಭಾದಿಸದು. ಆದರೆ, ಉಕ್ರೇನ್‌ಗೆ ಸಾವಿರ ಸಂಖ್ಯೆಯಲ್ಲಿ ಯೋಧರನ್ನು ಕಳೆದುಕೊಳ್ಳುವುದು ದೊಡ್ಡ ಪೆಟ್ಟು. ಹಾಗಾಗಿ, ಅದು ಈಗ ನಾಗರಿಕರನ್ನು ಯೋಧರನ್ನಾಗಿ ಬಳಸಲು ಸಜ್ಜಾಗಿದೆ.

ಪೆಟ್ರೋಲ್‌ ಬಾಂಬ್‌ ತಯಾರಿಕೆಯಲ್ಲಿ ಮಹಿಳೆಯರು!
ಉಕ್ರೇನ್‌ನ ಡಿನೈಪ್ರೋ ಎಂಬ ನಗರದ ಹಲವಾರು ಮಹಿಳೆಯರು ನಾಗರಿಕ ಸೇನೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇತ್ತೀಚೆಗೆ, ಉಕ್ರೇನ್‌ನ ರಕ್ಷಣಾ ಇಲಾಖೆಯು ಇತ್ತೀಚೆಗೆ ನಾಗರಿಕರಿಗೆ ಪೆಟ್ರೋಲ್‌ ಬಾಂಬ್‌ಗಳನ್ನು ತಯಾರಿಸುವಂತೆ ಸೂಚಿಸಿ, ಅವುಗಳನ್ನು ಕೀವ್‌ ನಗರ ಪ್ರವೇಶಿಸುವ ರಷ್ಯಾ ಪಡೆಗಳ ಮೇಲೆ ಎಸೆಯುವಂತೆ ಹೇಳಿತ್ತು. ಆ ಹಿನ್ನೆಲೆಯಲ್ಲಿ, ಡಿನೈಪ್ರೋ ನಗರದ ಹೊರವಲಯದಲ್ಲಿ ಹಲವಾರು ಮಹಿಳೆಯರು ಪೆಟ್ರೋಲ್‌ ಬಾಂಬ್‌ ತಯಾರಿಕೆಯಲ್ಲಿ ನಿರತವಾಗಿರುವ ಬಗ್ಗೆ ಯೂರೋಪ್‌ನ ಹಲವಾರು ವಾಹಿನಿಗಳು ವಿಡಿಯೋ ಸಹಿತ ವರದಿ ಮಾಡಿವೆ.

ಈ ವಿಡಿಯೋ ನೋಡಲು ಗೂಗಲ್‌ ಸರ್ಚ್‌ ಪೇಜ್‌ನಲ್ಲಿ ukrain + molatov cocktail + Dnipro ಎಂದು ಟೈಪಿಸಿದರೆ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಿಗುತ್ತವೆ.

 

Advertisement

Udayavani is now on Telegram. Click here to join our channel and stay updated with the latest news.

Next