Advertisement

ರಾಜ್ಯದ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿತ

12:30 AM Dec 17, 2018 | |

ಬೆಂಗಳೂರು ಸೇರಿದಂತೆ ರಾಜ್ಯದ  ಎಲ್ಲ ಜಿಲ್ಲೆಗಳಲ್ಲೂ ಶಾಲಾ ಶಿಕ್ಷಣ ವಂಚಿತ ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರ ಪತ್ತೆಗಾಗಿ  ಸಮಗ್ರ ಸಮೀಕ್ಷೆ ನಡೆಯುತ್ತಿದೆ. ಆದರೆ, ಶಾಲಾ ಶಿಕ್ಷಣ ವಂಚಿತ ಮಕ್ಕಳ ಪತ್ತೆಗಾಗಿ ಸೃಷ್ಟಿಸಿದ್ದ ಸಾಫ್ಟ್ವೇರ್‌ ಹಳ್ಳ ಹಿಡಿದಿದೆ. ಮಕ್ಕಳನ್ನು ಮುಖ್ಯವಾಹಿನಿಗೆ ತಂದ ನಂತರ ಅವರಿಗೆ ಪ್ರಮಾಣ ಪತ್ರ ಸಿಗುತ್ತಿಲ್ಲ. ಇದರಿಂದ ಶಾಲಾ ಶಿಕ್ಷಣ ವಂಚಿತ ಮಕ್ಕಳು ಶಾಲೆಗೆ ಮರಳಿ ಎಸ್ಸೆಸ್ಸೆಲ್ಸಿ, ಪಿಯುಸಿ ಪೂರೈಸಿ ವೃತ್ತಿಪರ ಕೋರ್ಸ್‌ಗೆ ಸರ್ಕಾರಿ ಕೋಟಾ ಮೂಲಕ ಸೀಟು ಪಡೆಯಲು ಸಾಧ್ಯವಾಗದ ಸ್ಥಿತಿ ರಾಜ್ಯದಲ್ಲಿದೆ.  ಮುಖ್ಯವಾಗಿ ಎಷ್ಟು ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬ ನಿಖರ ಮಾಹಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಬಳಿ ಇಲ್ಲ. ಶಾಲಾ ಶಿಕ್ಷಣ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆಯೇ ಮೀನಮೇಷ ಎಣಿಸುತ್ತಿದೆ.

Advertisement

ಶೂನ್ಯ ದಾಖಲಾತಿ, ಮುಚ್ಚಿದ ಶಾಲೆಗಳು
ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಪೋಷಕರಲ್ಲಿನ ಜಾಗೃತಿಯ ಕೊರತೆ, ಬಡತನ, ವಲಸೆ, ಖಾಸಗಿ ಶಾಲೆಗಳ ಅಬ್ಬರ..ಹೀಗೆ ನಾನಾ ಕಾರಣಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಮನೆಕೆಲಸ, ಶಾಲೆ ದೂರವಿರುವುದು, ಮಕ್ಕಳ ನಿರಾಸಕ್ತಿ, ಅನಾರೋಗ್ಯ, ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದದ್ದು, ಕೌಟುಂಬಿಕ ಕಲಹ, ತಮ್ಮ ತಂಗಿಯ ಪಾಲನೆ ಪೋಷಣೆ ಮುಂತಾದ ಕಾರಣಗಳೂ ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವಾಗಿವೆ. 

ಇದೆಲ್ಲದರ ಪರಿಣಾಮವಾಗಿ ರಾಜ್ಯದ ನಾನಾ ಭಾಗಗಳಲ್ಲಿ ದಾಖಲಾತಿ ಇಲ್ಲದ ಕಾರಣಕ್ಕಾಗಿ ಹಲವು ಶಾಲೆಗಳಿಗೆ ಬೀಗ ಹಾಕಲಾಗಿದೆ. ಗಮನಿಸಬೇಕಾದ ಅಂಶವೆಂದರೆ, ಹೀಗೆ ಬಾಗಿಲು ಹಾಕಿದ ಶಾಲೆಗಳಲ್ಲಿ ಕನ್ನಡದ ಜೊತೆಗೆ, ತಮಿಳು ಮತ್ತು ಉರ್ದು ಶಾಲೆಗಳೂ ಇವೆ ಎನ್ನುವುದು. ಕೊಪ್ಪಳವೊಂದರಲ್ಲೇ ದಾಖಲಾತಿ ಇಲ್ಲದೇ 2 ಉರ್ದು, 3 ಕನ್ನಡ ಶಾಲೆಗಳು ಬಂದ್‌ ಆಗಿದ್ದರೆ, ಪ್ರಸಕ್ತ  ಶೈಕ್ಷಣಿಕ ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ  12 ಸರಕಾರಿ ಶಾಲೆಗಳಿಗೆ ಈ ವರ್ಷ ಬೀಗ ಹಾಕಲಾಗಿದೆ. 9 ಪ್ರಾಥಮಿಕ ಶಾಲೆ, 2 ತಮಿಳು, 1 ಉರ್ದು ಶಾಲೆಗಳನ್ನು ಈ ಜಿಲ್ಲೆಯಲ್ಲಿ ಮುಚ್ಚಲಾಗಿದೆ. ಮಕ್ಕಳ ದಾಖಲಾತಿಯೇ ಇಲ್ಲದಿರುವುದು ಇದಕ್ಕೆ ಕಾರಣ ಎನ್ನಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯ 25 ಶಾಲೆಯಲ್ಲಿ ಹೊಸ ದಾಖಲಾತಿಯೇ ಆಗಿಲ್ಲ ! ಇದೇ ಪರಿಸ್ಥಿತಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೆ. ಆದರೆ, ಅಧಿಕಾರಿಗಳು ಮಾತ್ರ ಯಾವುದೇ ಶಾಲೆಗಳನ್ನು ಬಂದ್‌ ಮಾಡಿಲ್ಲ. ದಾಖಲಾತಿ ಪಡೆಯದ ಹಿನ್ನೆಲೆಯಲ್ಲಿ ಇಂಥ ಶಾಲೆಗಳನ್ನು ಶೂನ್ಯ ದಾಖಲಾತಿ ಶಾಲೆಗಳೆನ್ನುತ್ತೇವೆ. ಅಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದರೆ ತಕ್ಷಣ ಶಾಲೆ ಆರಂಭಿಸಲಿದ್ದೇವೆ. ಮಕ್ಕಳ ದಾಖಲಾತಿಗೆ ಮನೆ ಮನೆ ಭೇಟಿ, ದಾಖಲಾತಿ ಆಂದೋಲನ ನಡೆಸುತ್ತಿದ್ದೇವೆ ಎನ್ನುತ್ತಾರೆ. ಉಲ್ಲೇಖಾರ್ಹ ಸಂಗತಿಯೆಂದರೆ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಮೈಸೂರು ಜಿಲ್ಲಾದ್ಯಂತ ಈವರೆಗೂ ಯಾವುದೇ ಕನ್ನಡ ಶಾಲೆಯನ್ನು ಮುಚ್ಚಲು ಗುರುತಿಸಿಲ್ಲ. ಆದರೂ ಮೈಸೂರು ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಬಗ್ಗೆ ಅಂದಾಜಿಸಲಾಗಿದೆ. 

ಋತುಮಾನ ಶಾಲೆಗಳ ವರ್ತಮಾನ
ನಿತ್ಯದ ದುಡಿಮೆಗಾಗಿ ಉದ್ಯೋಗ ಅರಸಿ ವಲಸೆ ಹೋಗುವ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆಂದು ರಾಜ್ಯ ಸರ್ಕಾರ ಋತುಮಾನ ಶಾಲೆಗಳು ಎನ್ನುವ ವಿಶೇಷ ಯೋಜನೆ ಜಾರಿಗೆ ತಂದಿತ್ತು, ಇದು ಅನೇಕ ಭಾಗಗಳಲ್ಲಿ ಕಾರ್ಯಾಚರಿಸುತ್ತಿದೆ. ಋತುಮಾನ ಶಾಲೆಗಳಲ್ಲಿ ಓದಲು ಬರುವ ಮಕ್ಕಳಿಗೆ ಬೆಳಗಿನ ಉಪಾಹಾರ ಮತ್ತು ರಾತ್ರಿ ಊಟವನ್ನು ಸರ್ಕಾರವೇ ತನ್ನ ವೆಚ್ಚದಲ್ಲಿ ನೀಡಬೇಕು. ಮಧ್ಯಾಹ್ನ ಶಾಲೆಯಲ್ಲೇ ಬಿಸಿಯೂಟದ ಸೌಲಭ್ಯವಿರುತ್ತದೆ. ರಾತ್ರಿ ವೇಳೆ ಮಕ್ಕಳು ಶಾಲೆಯಲ್ಲೆ ತಂಗಲಿರುವುದರಿಂದ ಅವರಿಗೆ ಅಗತ್ಯವಾದ ಹಾಸಿಗೆ ಹೊದಿಕೆ ಸೇರಿದಂತೆ ಇತರೆ ಪೂರಕ ಸೌಲಭ್ಯ ಕಲ್ಪಿಸಲು ಸರ್ಕಾರ ಸೂಚಿಸಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಋತುಮಾನ ಶಾಲೆಗಳ ಜವಾಬ್ದಾರಿಯನ್ನು ಕೆಲವು ಎನ್‌ಜಿಒಗಳಿಗೆ ನೀಡಲಾಗಿದ್ದು, ಆದರೂ ಇದರ ಯಶಸ್ಸಿನ ಬಗ್ಗೆ ಅಷ್ಟಾಗಿ ಸರ್ಕಾರ ಗಮನಹರಿಸದಿರುವುದು ಸ್ಪಷ್ಟ.  ಸಾಮಾನ್ಯವಾಗಿ ಪ್ರತಿವರ್ಷ ನವೆಂಬರ್‌ನಿಂದ ಏಪ್ರಿಲ್‌ ತಿಂಗಳವರೆಗೂ ಚಿಕ್ಕಮಗ ಳೂರು ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳಿಗೆ ಕೊಯ್ಲಿಗಾಗಿ ಹಾಗೂ ಇನ್ನಿತರ ಕೆಲಸಗಳಿಗಾಗಿ ಹೊರ ಜಿಲ್ಲೆಗಳಿಂದ ಕೂಲಿ ಕಾರ್ಮಿಕರು ಬರುವುದು ಸಾಮಾನ್ಯ. ಅವರ ಜೊತೆ ಮಕ್ಕಳು ಬರುವುದರಿಂದ ಅವರು ಆ ಸಮಯದಲ್ಲಿ ವಿದ್ಯಾಭ್ಯಾಸ ವಂಚಿತರಾಗುತ್ತಾರೆ. ಈ ಮಕ್ಕಳಿಗೆ  ಶಿಕ್ಷಣ ನೀಡಲು ಆಲೋಚಿಸಿ ಈ ರೀತಿಯ ಐದು ಶಾಲೆಗಳನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಥಾಪಿಸಲು ಸರ್ಕಾರ ಮುಂದಾಗಿದೆ. 

ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ 234 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಹರಪನಹಳ್ಳಿ ತಾಲೂಕಿನಲ್ಲಿ ಅನೇಕರು ಕೆಲಸ ಅರಸುತ್ತಾ ಬೇರೆ ಬೇರೆ ಕಡೆಗೆ ಹೋಗುವುದರಿಂದ ಶಾಲೆಯಿಂದ ಮಕ್ಕಳು ಹೊರಗೆ ಉಳಿಯತ್ತಾರೆ. ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗುವ ಕೃಷಿ ಕೂಲಿ ಕಾರ್ಮಿಕರ ಮಕ್ಕಳಗಾಗಿಯೇ ಹರಪನಹಳ್ಳಿ ತಾಲೂಕಿನಲ್ಲಿ ಶಿಕ್ಷಣ ಇಲಾಖೆ ಋತುಮಾನ ಶಾಲೆ ತೆರೆದಿದ್ದರೂ ಪಾಲಕರು ಮಕ್ಕಳನ್ನು ತಮ್ಮೊಟ್ಟಿಗೆ ಕರೆದೊಯ್ಯುತ್ತಾರೆ ಎನ್ನಲಾಗುತ್ತದೆ.

Advertisement

ರಾಜ್ಯದ ನಾನಾಭಾಗದಲ್ಲೂ ಋತುಮಾನ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದರೂ ಅದರ ಉದ್ದೇಶಿತ ಗುರಿ ಈಡೇರುತ್ತಿಲ್ಲ. ವಲಸಿಗ ಪೋಷಕರಲ್ಲಿರುವ ಜಾಗೃತಿಯ ಕೊರತೆಯೂ ಇದಕ್ಕೆ ಮುಖ್ಯ ಕಾರಣಗಳಲ್ಲೊಂದು. ಹೀಗಾಗಿ, ಈ ರೀತಿಯ ಶಾಲೆಗಳ ಬಗ್ಗೆ ವಲಸೆ ಬಂದವರನ್ನು ಅರಿವು ಮೂಡಿಸುವ ಕೆಲಸವನ್ನು ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು, ಸ್ವಯಂಸೇವಾ ಸಂಸ್ಥೆಗಳು  ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಅಗತ್ಯವಂತೂ ಇದೆ.

ಬಾಲಕಾರ್ಮಿಕ ಪದ್ಧತಿಯ ಪರಿಣಾಮ
ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲೆಯಲ್ಲಿ ಮಗುವಿನ ಹೆಸರು ದಾಖಲಾಗಿದ್ದರೂ, ಆನಂತರ ಮಕ್ಕಳು ಶಾಲೆ ಬಿಡುತ್ತಿದ್ದಾರೆ. ಅಂತಹ ಮಕ್ಕಳು ಹೋಟೆಲ್‌, ಅಂಗಡಿ, ಮಂಗಟ್ಟುಗಳು ಸೇರಿದಂತೆ ತೋಟ, ಜಮೀನುಗಳಲ್ಲಿ ದುಡಿಯುತ್ತಿರುವುದು ಈಗಲೂ ನಡೆದಿದೆ. 

ಬಾಲಕಾರ್ಮಿಕ ಪದ್ಧತಿ ಮುಖ್ಯವಾಗಿ ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್‌, ಬಿಜಾಪುರ ಭಾಗಗಳಲ್ಲಿ ಅಧಿಕವಿದೆ. ರಾಯಚೂರೊಂದರಲ್ಲೇ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈಚೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ 24 ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಮೀಕ್ಷೆ ನಡೆಸಿದಾಗ ಜಿಲ್ಲೆಯಲ್ಲಿ 1,360 ಬಾಲಕಾರ್ಮಿಕರು ಇರುವ ಅಂಶ ಪತ್ತೆಯಾಗಿದೆ! ಇನ್ನು ಮಳೆಯಾಶ್ರಿತ ಪ್ರದೇಶವಾದ ಗದಗದಲ್ಲಿಯೂ ಬಾಲಕಾರ್ಮಿಕ ಪದ್ಧತಿಯಿದ್ದು ಜಿಲ್ಲೆಯಲ್ಲಿ ಹಲವು ಸ್ವಯಂ ಸೇವಾ ಸಂಸ್ಥೆಗಳಿದ್ದು, ಆಗೊಮ್ಮೆ- ಈಗೊಮ್ಮೆ ದಾಳಿ ನಡೆಸಿ ಸುಮ್ಮನಾಗುತ್ತವೆ. ಇನ್ನು, ಅ ಧಿಕಾರಿಗಳಂತೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಹಾಜರಾತಿ ಇದ್ದರೂ ಕೂಲಿಗೆ   
ಸತತ 7 ದಿನ ಗೈರಾದರೆ ಅಂಥ ಮಕ್ಕಳನ್ನು ಶಾಲೆ ಬಿಟ್ಟವರು ಎಂದು ಗುರುತಿಸಲಾಗುತ್ತದೆ. ಆದರೆ ಕೆಲ ಮಕ್ಕಳು ವಾರಕ್ಕೆ 2-3 ದಿನ ಹಾಜರಾಗಿ, ಇನ್ನುಳಿದ ದಿನ ಶಾಲೆಯತ್ತ ಮುಖ ಮಾಡುವುದಿಲ್ಲ. ಇಲಾಖೆ ಅ ಧಿಕಾರಿಗಳೇ ಹೇಳುವಂತೆ ಒಂದೆರಡು ದಿನ ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರು ಉಳಿದ ದಿನ ಅವರನ್ನು ಕೂಲಿಗೆ ಕಳುಹಿಸುತ್ತಾರೆ. ಅಂಥ ಮಕ್ಕಳನ್ನು ನಾವು ಹೊರಗುಳಿದ ಮಕ್ಕಳು ಎಂದು ಕರೆಯಲು ಬರುವುದಿಲ್ಲ. ಮರಳಿ ಬಾ ಶಾಲೆಗೆ ಯೋಜನೆಯಡಿ ಪಾಲಕರ ಮನವೊಲಿಕೆ ಮಾಡಿ ಕರೆತಂದರೂ ಒಂದೆರಡು ದಿನಗಳಲ್ಲಿ ಪುನಃ ಗೈರಾಗುತ್ತಾರೆ ಎಂದು ವಿವರಿಸುತ್ತಾರೆ  ಇಲಾಖೆ ಅಧಿಕಾರಿಗಳು

ಖಾಸಗಿ ಶಾಲೆಗಳ ಅಬ್ಬರ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತಕ್ಕೆ ಖಾಸಗಿ ಶಾಲೆಗಳ ಬೆಳವಣಿಗೆಯೂ ಪ್ರಮುಖ ಕಾರಣ ಎನ್ನುವುದು ನಿರ್ವಿವಾದ. ಖಾಸಗಿ ಶಾಲೆಗಳ ಸಂಖ್ಯೆಯಲ್ಲಿ ಏರಿಕೆಗೆ ತಕ್ಕಂತೆ ಸರ್ಕಾರಿ ಶಾಲೆಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಗಮನಿಸಬೇಕಾದ ಸಂಗತಿ. ರಾಜ್ಯದ ಕೆಲವು ಪ್ರದೇಶಗಳಲ್ಲಂತೂ ಖಾಸಗಿ ಸಂಸ್ಥೆಗಳ ಲಾಬಿ ಯಾವ ಮಟ್ಟಕ್ಕೆ ಇದೆ ಎಂದರೆ, ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳ ಅಕ್ಕಪಕ್ಕದಲ್ಲಿಯೇ ಖಾಸಗಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿದೆ! ಸರ್ಕಾರಿ ಶಾಲೆಗಳ ಸಮೀಪದಲ್ಲಿ ಖಾಸಗಿ ಶಾಲೆಗಳನ್ನು ಆರಂಭಿಸಲು ಆ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ನಮ್ಮ ಶಾಲೆಗೆ ಖಾಸಗಿ ಶಾಲೆಯಿಂದ ಯಾವುದೇ ತೊಂದರೆ ಆಗಲ್ಲ. ದಾಖಲಾತಿ ಇಳಿಮುಖವಾಗಲ್ಲ ಎನ್ನುವ ಒಪ್ಪಿಗೆಯ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ಅವರಿಗೆ ಪತ್ರ ನೀಡಿದ ನೂರಾರು ಉದಾಹರಣೆಗಳಿವೆ. 

ಇನ್ನು  ಕಿರಿಯ ಪ್ರಾಥಮಿಕ ಶಾಲೆಗಳಿಗೆ ಕೆಲವೆಡೆ ಶಿಕ್ಷಣ ಇಲಾಖೆಯು ಓರ್ವ ಅಥವಾ ಕೇವಲ ಇಬ್ಬರು ಶಿಕ್ಷಕರನ್ನು ನೇಮಿಸಿರುವುದರಿಂದ  ಇಬ್ಬರು ಶಿಕ್ಷಕರು ಇಡೀ ಶಾಲೆಯನ್ನು ನಿರ್ವಹಿಸುವುದು ಕಷ್ಟವಾಗು ತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗಲಿದೆ ಎನ್ನುವುದನ್ನು ಅರಿತ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಇನ್ನು ಸರ್ಕಾರಿ ಶಾಲೆಗಳಲ್ಲಿ ಇತ್ತೀಚೆಗೆ ಗುಣಮಟ್ಟದ ಬೋಧನೆ ಕಾಣುತ್ತಿಲ್ಲ. ಖಾಸಗಿ ಶಾಲೆಗಳ ಮಕ್ಕಳು ಪ್ರತಿಯೊಂದರಲ್ಲೂ ಮುಂದಿದ್ದರೆ, ಸರ್ಕಾರಿ ಶಾಲೆಯ ಮಕ್ಕಳು ಹಿನ್ನಡೆ ಅನುಭವಿಸುವಂತಾಗಿದೆ. ಇದನ್ನರಿತು ಪಾಲಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿಲ್ಲ.

ಸಮೀಕ್ಷೆ-ಸ್ಯಾಟ್ಸ್‌ ತಂತ್ರಾಂಶ, ಹೇಗಿದೆ ಸ್ಥಿತಿ?
ಒಂದನೇ ತರಗತಿಯಿಂದ 10ನೇ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯ ಮಾಹಿತಿಯನ್ನು ಶೇಖರಿಸಲು ಸ್ಯಾಟ್ಸ್‌ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಾಂಶದಲ್ಲಿ ವಿದ್ಯಾರ್ಥಿಯ ಶಾಲೆಯ ದಾಖಲಾತಿ ಸಂಖ್ಯೆ, ಆಧಾರ್‌ ಕಾರ್ಡ್‌ ಸಂಖ್ಯೆ, ಹಾಜರಾತಿ ಸೇರಿದಂತೆ ಪ್ರತಿ ಹಂತದ ಪ್ರಗತಿ ಮಾಹಿತಿಯನ್ನು ಶಿಕ್ಷಕರು ಅಪ್‌ಡೇಟ್‌ ಮಾಡಬೇಕಾಗುತ್ತದೆ.

ಆಧಾರ್‌ ಸಂಖ್ಯೆಯನ್ನು ಸ್ಯಾಟ್ಸ್‌ ತಂತ್ರಾಂಶದಲ್ಲಿ ಅಪ್‌ಡೇಟ್‌ ಮಾಡು ವು ದರಿಂದ ವಿದ್ಯಾರ್ಥಿಯ ಜಾಡು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಮುಖ್ಯವಾಗಿ ಒಬ್ಬನೇ ವಿದ್ಯಾರ್ಥಿಯ ಹೆಸರು ಎರಡೆರಡು ಶಾಲೆಗಳಲ್ಲಿ ನೋಂದಣಿಯಾಗಿದ್ದು, ಎಷ್ಟು ದಿನದಿಂದ ಶಾಲೆಯಿಂದ ಹೊರಗುಳಿದಿದ್ದ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.  ಆದರೆ, ಬಹುತೇಕ ಭಾಗಗಳಲ್ಲಿ ಸ್ಯಾಟ್ಸ್‌ ತಂತ್ರಾಂಶ ಅಪ್ಡೆàಟ್‌ ಮಾಡುವ ಕಾರ್ಯ ಮುಗಿದಿಲ್ಲ. 

ಸಮೀಕ್ಷೆ ವಿಳಂಬ: ಹಿಂದುಳಿದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಡತನ, ಗುಳೆ ಹೋಗುವಿಕೆ, ಹೋಟೆಲ್‌ ಮತ್ತು ಕಾರ್ಖಾನೆಗಳಲ್ಲಿ ದುಡಿಯುವುದು… ಹೀಗೆ ಒಂದಿಲ್ಲ ಒಂದು ಕಾರಣಕ್ಕೆ ಪ್ರತಿ ವರ್ಷ 6ರಿಂದ 16 ವರ್ಷದೊಳಗಿನ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. 
 
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಮುಕ್ಕಾಲು ಸಮಯ ಕಳೆದಿದ್ದರೂ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯೇ ಮುಗಿದಿಲ್ಲ. ಹೀಗಾಗಿ ಕಳೆದ ವರ್ಷದ ಸಂಖ್ಯೆಯನ್ನೇ ಮುಂದಿರಿಸಿಕೊಂಡು ಶಿಕ್ಷಣ ಇಲಾಖೆ ಕನವರಿಸುತ್ತಿದೆ. ವಿಜಯಪುರ, ರಾಯಚೂರು, ಕೊಪ್ಪಳ, ಯಾದಗಿರಿಯಲ್ಲೂ ಇದೇ ಪರಿಸ್ಥಿತಿ ಇದೆ. ಇವಕ್ಕೆ ಹೋಲಿಸಿದರೆ ಕಲಬುರಗಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ ಶಾಲೆ ಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಸಮೀಕ್ಷೆಯಲ್ಲಿ ಪತ್ತೆಯಾದ ವಿದ್ಯಾರ್ಥಿಗಳ ಮೂಲವನ್ನು ತಿಳಿಯಲು ಸ್ಯಾಟ್ಸ್‌ ತಂತ್ರಾಂಶದಲ್ಲಿ ಶೇಖರಿಸುವ ಕಾರ್ಯ ನಡೆಯುತ್ತಿದೆ.

ಜೂನ್‌ ತಿಂಗಳಲ್ಲೇ ಶಾಲೆಗಳು ಆರಂಭಗೊಂಡು ಏಳು ತಿಂಗಳಾದರೂ ವಿಜಯಪುರ ಜಿಲ್ಲೆಯಲ್ಲಿ ಅಕ್ಷರ ಲೋಕದಿಂದ ಹೊರಗುಳಿದ ಮಕ್ಕಳ ಸಂಖ್ಯೆ ಎಷ್ಟು ಎಂದು ನಿಖರ ಮಾಹಿತಿ ಇಲ್ಲವಾಗಿದೆ. ಸತತ ಭೀಕರ ಬರ, ನಿರಂತರ ಕಾಡುತ್ತಿರುವ ಬಡತನ, ಗುಳೆ ಸಂಸ್ಕೃತಿ ಮನೆ ಮಾಡಿರುವ ವಿಜಯಪುರ ಜಿಲ್ಲೆಯಲ್ಲಿ ಗ್ರಾಮೀಣ ಅದರಲ್ಲೂ ಬುಡಕಟ್ಟು ಬಂಜಾರಾ ಸಮುದಾಯಗಳ ನೆಲೆ ಇರುವ ತಾಂಡಾಗಳ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಲೇ ಇದ್ದಾರೆ. 

ಇನ್ನು ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಸಮೀಕ್ಷಾ ಕಾರ್ಯ ಕುಂಟುತ್ತಾ ಸಾಗಿದೆ. ರಾಮನಗರದಲ್ಲಿ ಸಮೀಕ್ಷಾ ಕಾರ್ಯ ಪೂರ್ಣ ಗೊಂಡಿದ್ದು  ಅಂಕಿ ಅಂಶಗಳನ್ನು ವರ್ಗೀಕರಿಸುವ ಕಾರ್ಯ ನಡೆಯು ತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ 2018-19 ನೇ ಸಾಲಿಗೆ ನಡೆಸಲಾದ ಸಮೀಕ್ಷೆಯಲ್ಲಿ 250 ಮಂದಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲಾಗಿತ್ತು. ಇದರಲ್ಲಿ 105 ಮಕ್ಕಳನ್ನು ಮುಖ್ಯ ವಾಹಿನಿಗೆ ತರಲಾಗಿದೆ. 

ಮಳೆಯಾಶ್ರಿತ ಪ್ರದೇಶಗಳಲ್ಲಿ ಸಮೀಕ್ಷಾ ಕಾರ್ಯ ವಿಳಂಬವಾಗುತ್ತಿರುವುದು ಗಮನಾರ್ಹ. ಬರಗಾಲದಲ್ಲಿ ಕೆಲವರು ಕುಟುಂಬ ಸಮೇತ ಗುಳೆ ಹೋದರೆ, ಇನ್ನೂ ಕೆಲವರು ಗ್ರಾಮದಲ್ಲೇ ಹಿರಿ ಜೀವಗಳೊಂದಿಗೆ ಮಕ್ಕಳನ್ನೂ ಬಿಟ್ಟು ಹೋಗುತ್ತಾರೆ. ಹೀಗಾಗಿ ಮಕ್ಕಳು ನಿರಂತರವಾಗಿ ಶಾಲೆಗೆ ಬರುತ್ತಾರೆ ಎಂಬ ಖಾತ್ರಿಯಿಲ್ಲ. ವಲಸೆ ಹೋಗುವವರು ಶಾಲೆಯಿಂದ ಮಕ್ಕಳ ವಲಸೆ ಕಾರ್ಡ್‌ ಪಡೆದು, ಅಲ್ಲಿ ಸಮೀಪದ ಶಾಲೆ ಸೇರಿಸಬೇಕು. ಆದರೆ, ಇದನ್ನು ಅನೇಕರು ಪಾಲಿಸುವುದಿಲ್ಲ .
 
ಸಮೀಕ್ಷೆಗೆ ಮಾದರಿಯಾಗಲಿ: ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸುವ ಸಲುವಾಗಿ ಶಿಕ್ಷಣ ಇಲಾಖೆಯೊಂದಿಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮೀಕ್ಷೆ ನಡೆಸಿದರೆ ಉತ್ತಮ ಎನ್ನುವುದು ಪರಿಣತರ ಅಭಿಪ್ರಾಯ. ಮಹಿಳಾ ಮತ್ತು ಮಕ್ಕಳ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗೆ ಆಶಾ ಕಾರ್ಯಕರ್ತೆಯರು, ಎಸ್‌ಡಿಎಂಸಿ ಸದಸ್ಯರ, ಜತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರನ್ನು ಸಮೀಕ್ಷಾ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡರೆ ಸಮೀಕ್ಷೆ ಕಾರ್ಯ ಫ‌ಲಪ್ರದವಾಗುತ್ತದೆಎನ್ನುತ್ತಾರೆ ಇಲಾಖಾ ಅಧಿಕಾರಿಗಳು. 

Advertisement

Udayavani is now on Telegram. Click here to join our channel and stay updated with the latest news.

Next