ಯಳಂದೂರು: ಸಮೀಪದ ಇರಸವಾಡಿ ಗ್ರಾಮದ ಕೆರೆಯಲ್ಲಿ ಕಳೆದ ಎರಡು ದಿನಗಳಿಂದ ಸಾವಿರಾರೂ ಮೀನುಗಳು ಸಾವನ್ನಪ್ಪಿವೆ. ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಹಿಸಿಕೊಳ್ಳಲಾಗದ ದುರ್ವಾಸನೆ ಬರುತ್ತಿದೆ. ಚಾಮರಾಜನಗರ ತಾಲೂಕಿನ ಇರಸವಾಡಿ ಕೆರೆಯು ಸುಮಾರು 85 ಹೆಕ್ಟೇರ್‌ನಷ್ಟು ವಿಸ್ತೀರ್ಣದ ಕೆರೆಯಲ್ಲಿ ಕಳೆದ ಒಂದು ವಾರದಿಂದ ನೀರು ಸಂಪೂರ್ಣ ಭರ್ತಿಯಾಗಿ ತುಂಬಿಕೊಂಡಿದೆ.
ಕೆರೆಯನ್ನು ಬಾಲಸ್ವಾಮಿ ಎಂಬುವವರು ಗುತ್ತಿಗೆ ಪಡೆದುಕೊಂಡು 3 ವರ್ಷದಿಂದ ಕೆರೆಯಲ್ಲಿ ಮೀನುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಈ ವರ್ಷವೂ ಕಳೆದ 5 ತಿಂಗಳ ಹಿಂದೆ ಲಕ್ಷಕ್ಕೂ ಹೆಚ್ಚು ವಿವಿಧ ಜಾತಿಯ ಮೀನಿನ ಮರಿಗಳನ್ನು ಬಿಟ್ಟಿದ್ದರು. ಆದರೆ ಇದ್ದಕ್ಕಿದ್ದಂತೆ ಕಳೆದ ಎರಡು ದಿನಗಳಿಂದ ಸಾವನ್ನಪ್ಪಿದ್ದು, ಬಹಳ ನಷ್ಟ ಉಂಟಾಗಿದೆ. ಕೆರೆಯ ಮಾರ್ಗದಿಂದ ಪಟ್ಟಣಕ್ಕೆ ಬರುವವರು ಮೂಗು ಮುಚ್ಚಿಕೊಂಡು ಬರುವಂತಾಗಿದೆ.
ಕಲುಷಿತ ನೀರು ಸೇರ್ಪಡೆ: ಜಿಲ್ಲೆಯ ಸತತ ಮಳೆಯಾಗುತ್ತಿರುವ ಕಾರಣ ಹಳ್ಳ, ಕೊಳ್ಳ, ಕೆರೆ ಕಟ್ಟೆಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತದೆ. ಇದರ ಜೊತೆಗೆ ಗ್ರಾಮದ ಚರಂಡಿ ನೀರು ಕೆರೆಗೆ ಸೇರಿರುವ ಕಾರಣ ಕಲುಷಿತವಾಗಿರಬಹುದು. ಇಲ್ಲವಾದರೆ ಯಾರಾದರೂ ದುಷ್ಕರ್ಮಿಗಳು ಕ್ರಿಮಿನಾಶಕವನ್ನು ಮಿಶ್ರಣ ಮಾಡಿರಬಹುದು ಎಂಬು ಶಂಕೆಯನ್ನು ಮೀನುಗಾರರು ವ್ಯಕ್ತಪಡಿಸಿದರು.
ಇದನ್ನೂ ಓದಿ:- ಕುರುಗೋಡು: ರೈತರಿಗೆ ತರಬೇತಿ ಕಾರ್ಯಕ್ರಮ
ಇರಸವಾಡಿ ಗ್ರಾಮದ ಕೆರೆಯಲ್ಲಿ ಕಳೆದ 5 ತಿಂಗಳಿಂದ ಲಕ್ಷಕ್ಕೂ ಹೆಚ್ಚು ವಿವಿಧ ಜಾತಿಯ ಮೀನಿನ ಮರಿಗಳನ್ನು ಬಿಡಲಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ 1 ಕೆ.ಜಿ ತೂಕದ ಸಾವಿರಾರು ಮೀನುಗಳು ಸಾವನ್ನಪ್ಪಿದೆ. ಈ ಬಗ್ಗೆ ಸಂಬಂಧಪಟ್ಟ ಮೀನುಗಾರಿಕೆಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕಾಗಿದೆ ಎಂದು ವೈ.ಕೆ.ಮೋಳೆ ಶೇಖರ್ ಮನವಿ ಮಾಡಿದ್ದಾರೆ.
“ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವ ಬಗ್ಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸತತ ಮಳೆಯಾಗುತ್ತಿರುವ ಪರಿಣಾಮ ಕೊಳಚೆ ನೀರು ಕೆರೆಗೆ ಸೇರಿರುವ ಕಾರಣ ಮೀನುಗಳು ಮೃತಪಟ್ಟಿರಬಹುದು. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರೆ ಕ್ರಮವಹಿಸಲಾಗುವುದು.”
– ಪ್ರಶಾಂತ್, ಸಹಾಯಕ ನಿರ್ದೇಶಕ ಮೀನುಗಾರಿ ಇಲಾಖೆ.