ನವದೆಹಲಿ:ಸ್ವಾಮಿನಾಥನ್ ವರದಿ ಜಾರಿ, ರೈತರ ಸಾಲ ಮನ್ನಾ ಹೀಗೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ರೈತರು ಶುಕ್ರವಾರ ರಾಮ್ ಲೀಲಾ ಮೈದಾನದಿಂದ ಸಂಸತ್ ಭವನದವರೆಗೆ ಮೆರವಣಿಗೆ ಮೂಲಕ ಸಾಗಿ ಸಂಸತ್ ಮುತ್ತಿಗೆ ಹಾಕಲು ತೆರಳಿದ್ದಾರೆ.
ಕಿಸಾನ್ ಮೋರ್ಚಾ ನೀಡಿರುವ ದೆಹಲಿ ಚಲೋ ಕರೆಗೆ ಸುಮಾರು 200ಕ್ಕೂ ಅಧಿಕ ರೈತಪರ ಸಂಘಟನೆಗಳು, 23 ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ. ರೈತರಿಗೆ ಸಂಬಂಧಪಟ್ಟ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಸಂಸತ್ ನ ವಿಶೇಷ ಕಲಾಪವನ್ನು ಕೇಂದ್ರ ಸರ್ಕಾರ ನಡೆಸಬೇಕೆಂದು ರೈತ ಸಂಘಟನೆಗಳು ಬೇಡಿಕೆ ಇಟ್ಟಿವೆ.
ಗುರುವಾರ ರಾತ್ರಿಯಿಂದಲೇ ರಾಮಲೀಲಾ ಮೈದಾನದಲ್ಲಿ ರೈತರು ಆಗಮಿಸಿದ್ದ ಹಿನ್ನೆಲೆಯಲ್ಲಿ ಇಂದು ಸಂಸತ್ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸೆಂಟ್ರಲ್ ದೆಹಲಿಯಲ್ಲಿ 3,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ರೈತರ ಜಾಥಾದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕರ್ನಾಟಕದ ರೈತರು ಹಾಗೂ ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮಬಂಗಾಳ ಮತ್ತು ಉತ್ತರಪ್ರದೇಶದಿಂದ ರೈತರು ದೆಹಲಿಗೆ ಆಗಮಿಸಿದ್ದರು.
ಇಂದು ಸಾವಿರಾರು ಸಂಖ್ಯೆಯಲ್ಲಿ ಜಾಥಾ ಹೊರಟಿದ್ದು, ಕೆಲವು ರೈತರು ಬೆತ್ತಲೆ, ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾರೆ. ತೆಲಂಗಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ರೈತರ ಪತ್ನಿಯರು ಕೂಡಾ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.
ಹಿರಿಯ ಪತ್ರಕರ್ತ ಪಿ.ಸಾಯಿನಾಥ್, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಸೇರಿದಂತೆ ಹಲವು ಗಣ್ಯರು ರೈತರ ಜಾಥಾಕ್ಕೆ ಸಾಥ್ ನೀಡಿದ್ದಾರೆ. ಸುಮಾರು 10ಸಾವಿರಕ್ಕೂ ಅಧಿಕ ರೈತರು ರಾಮಲೀಲಾ ಮೈದಾನದಿಂದ ಬೆಳಗ್ಗೆ ಜಾಥಾ ಹೊರಟಿದ್ದಾರೆ. ರೈತರು ತೆರಳುವ ಸ್ಥಳದ ಬಗ್ಗೆ ದೆಹಲಿ ಟ್ರಾಫಿಕ್ ಪೊಲೀಸರು ಟ್ವೀಟ್ ಮೂಲಕ ಲೈವ್ ಅಪ್ ಡೇಟ್ ನೀಡುತ್ತಿದ್ದಾರೆ.