Advertisement
ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲೂಇಎಫ್) 50ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗಿದ ಸಿಎಂ, ಶನಿವಾರ ತಮ್ಮ ಗೃಹ ಕಚೇರಿ “ಕೃಷ್ಣಾ’ದಲ್ಲಿ ಪತ್ರಿಕಾಗೋಷ್ಠಿ ಕರೆದು ತಮ್ಮ ಪ್ರವಾಸದ ಬಗ್ಗೆ ಮಾಹಿತಿ ನೀಡಿದರು. ಇದರಿಂದಾಗಿ ಇಂತಿಷ್ಟು ಹಣ ಹೂಡಿಕೆ ಯಾಗಲಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆ ರಾಜ್ಯಕ್ಕೆ ಹರಿದು ಬರಲಿದೆ. ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲೂ ಬಂಡವಾಳ ಹರಿದು ಬರುವ ಕನಸು ನನಸಾಗುವ ವಿಶ್ವಾಸವಿದೆ ಎಂದು ತಿಳಿಸಿದರು.
Related Articles
Advertisement
ಈಗಾಗಲೇ ಮಾತುಕತೆ ನಡೆಸಿರುವ ಕಂಪನಿಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಪತ್ರ ವ್ಯವಹಾರ ನಡೆಸಲಾಗುವುದು. ದಾವೋಸ್ ವಾರ್ಷಿಕ ಸಭೆಯಲ್ಲಿ ಕರ್ನಾಟಕ, ಬೆಂಗಳೂರು ಕುರಿತೇ ಹೆಚ್ಚು ಚರ್ಚೆಯಾಗಿ ವ್ಯಾಪಕ ಪ್ರಚಾರ ಸಿಕ್ಕಿತು. ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು 100 ಉದ್ಯಮಿ ಗಳೊಂದಿಗೆ ನಿಂತು ದೇಶ ಹಾಗೂ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿದರು. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಕರ್ನಾಟಕದ ಪೆವಿಲಿಯನ್ ಆಕರ್ಷಣೀಯ ಕೇಂದ್ರ: ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಡಬ್ಲೂಇಎಫ್ ವಾರ್ಷಿಕ ಸಭೆಯಲ್ಲಿ ಕರ್ನಾಟಕದ ಪೆವಿಲಿಯನ್ ಆಕರ್ಷಣೀಯ ಕೇಂದ್ರವಾಗಿತ್ತು. ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ತಂಡ ನಮ್ಮ ಪೆವಿಲಿಯನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾಹಿತಿ ಪಡೆಯಿತು. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿದ್ದು, ಆ ಹಾದಿಯಲ್ಲಿ ಮುಂದುವರಿಯುವ ಅಗತ್ಯವಿದೆ ಎಂದು ಹೇಳಿದ್ದು ಸಂತಸ ತಂದಿದೆ ಎಂದರು.
ಉಡುಪಿ ಮೂಲದ ಸಂಸದ ಭೇಟಿ: ಕರ್ನಾಟಕ ಪೆವಿಲಿಯನ್‌ಗೆ ಸಾಕಷ್ಟು ಯುವಜನತೆ ಭೇಟಿ ನೀಡಿದ್ದರು. ಉಡುಪಿ ಮೂಲದ ವ್ಯಕ್ತಿಯೊಬ್ಬರು 40 ವರ್ಷ ಗಳಿಂದ ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ನೆಲೆಸಿದ್ದು, ಸಂಸದರಾಗಿದ್ದಾರೆ. ಅವರು ಬೆಳಗ್ಗೆ, ಸಂಜೆ ಪೆವಿಲಿಯನ್‌ಗೆ ಬಂದು ಹೋಗುತ್ತಿದ್ದರು. ಸ್ವಿಡ್ಜರ್‌ಲ್ಯಾಂಡ್ ವತಿಯಿಂದ ಭಾರತ ಹಾಗೂ ಕರ್ನಾಟಕಕ್ಕೆ ಆಗಬೇಕಿರುವ ಕೆಲಸ ಕಾರ್ಯಗಳಿಗೆ ರಾಯಭಾರಿಯಾಗಿ ಕೆಲಸ ಮಾಡುವುದಾಗಿ ಅವರು ಹೇಳಿದ್ದು ಖುಷಿಯಾಯಿತು ಎಂದು ಶೆಟ್ಟರ್ ಹೇಳಿ ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕಾರ್ಯದರ್ಶಿ ಸೆಲ್ವಕುಮಾರ್, ಸಲಹೆಗಾರ ಎಂ.ಲಕ್ಷ್ಮೀ ನಾರಾಯಣ್ ಉಪಸ್ಥಿತರಿದ್ದರು.
ಪ್ರಮುಖ ಹೂಡಿಕೆಗಳು* ಲುಲು ಕಂಪನಿಯು 2,000 ಕೋಟಿ ರೂ.ಬಂಡವಾಳ ಹೂಡಿಕೆಗೆ ಒಪ್ಪಿದೆ. ತರಕಾರಿ, ಹಣ್ಣು, ಹೂ ಇನ್ನಿತರ ಬೆಳೆಗಳನ್ನು ನಗರಗಳಿಗೆ ಸಾಗಿಸುವ ಸಂಪರ್ಕ ಜಾಲ ಕಲ್ಪಿಸಲು ಆಸಕ್ತಿ ತೋರಿದೆ. ಇದರಿಂದ ರೈತರ ಬೆಳೆಗಳು ಹಾಳಾಗದೆ ಬಹು ಬೇಗನೇ ಮಾರುಕಟ್ಟೆ ತಲುಪಿ ಉತ್ತಮ ಬೆಲೆ ಸಿಗುವಲ್ಲಿ ಸಹಕಾರಿ ಯಾಗುವ ನಿರೀಕ್ಷೆ. * ಬಹರೇನ್‌ನ ಎಕನಾಮಿಕ್ ಡೆವಲಪ್‌ಮೆಂಟ್ ಬೋರ್ಡ್‌ನೊಂದಿಗೆ ಫಿನ್‌ಟೆಕ್, ಕೃತಕ ಬುದ್ಧಿಮತ್ತೆ ಹಾಗೂ ಸೈಬರ್ ಸುರಕ್ಷತೆ ವಿಷಯಗಳಲ್ಲಿ ಸಹಯೋಗ, ಸಹಕಾರ ನೀಡುವ ಕುರಿತು ಒಪ್ಪಂದಕ್ಕೆ ಸಹಿ. * ನೋವೋ ನೋಸ್ಡೆಕ್ ಕಂಪನಿ, ರಾಜ್ಯದ ಮಧುಮೇಹಿಗಳ ಆರೋಗ್ಯ ಸುಧಾ ರಣೆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ನಿರ್ವಹಿಸಲು ಒಪ್ಪಿದೆ. ಇದರಿಂದ ರಾಜ್ಯದ ಸಾವಿರಾರು ಮಧುಮೇಹಿಗಳಿಗೆ ರೋಗನಿರ್ವಹಣೆ ಜತೆಗೆ ಕಡಿಮೆ ದರದಲ್ಲಿ ಔಷಧಿ ವಿತರಿಸುವಲ್ಲಿ ಸಹಕಾರಿಯಾಗುವ ನಿರೀಕ್ಷೆ. * ಉದ್ಯಮಿ ಲಕ್ಷ್ಮೀ ಮಿತ್ತಲ್ ಅವರೊಂದಿಗೆ ಚರ್ಚೆ. ಸೌರ ವಿದ್ಯುತ್ ಕ್ಷೇತ್ರದಲ್ಲಿ ಹೂಡಿಕೆಗೆ ಲಕ್ಷ್ಮೀ ಮಿತ್ತಲ್‌ಗೆ ಮನವಿ. ಉಕ್ಕು ಕಾರ್ಖಾನೆ ಸ್ಥಾಪನೆ ಆಹ್ವಾನಕ್ಕೆ ಸ್ಪಂದನೆ.