Advertisement

ಸಾವಿರಾರು ಮಕ್ಕಳ ಶಾಲಾ ಮಾಹಿತಿ ಕಾಣೆ 

04:02 PM Dec 17, 2018 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣ ಕಲಿಕೆ ಮಾಹಿತಿ ಲಭ್ಯವಾಗದೆ ಶಿಕ್ಷಣ ಇಲಾಖೆ ಅಂಥ ಮಕ್ಕಳನ್ನು ಹುಡುಕುವ ಕಾರ್ಯದಲ್ಲಿ ಮಗ್ನವಾಗಿದೆ. ಶಿಕ್ಷಣ ಇಲಾಖೆ ಶಾಲಾ ದಾಖಲಾತಿ ತಂತ್ರಾಂಶ ಮಾಹಿತಿ ಆಧರಿಸಿ ನಡೆಸಿದ ಸಮೀಕ್ಷೆ ವೇಳೆ ಜಿಲ್ಲೆಯಲ್ಲಿ 1446 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೋ ಶಾಲೆ ಬಿಟ್ಟಿದ್ದಾರೋ ಎಂಬ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಇಂಥ ಮಕ್ಕಳನ್ನು ಪತ್ತೆ ಹಚ್ಚಲು ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕರು ಶಿಕ್ಷಣ ವಂಚಿತ ಮಕ್ಕಳ ಮನೆ ಹುಡುಕಿಕೊಂಡು ಹೋಗುತ್ತಿದ್ದಾರೆ.

Advertisement

ತಂತ್ರಾಂಶ ಸಮೀಕ್ಷೆಯಲ್ಲಿ ಕಾಣೆಯಾದ ಮಕ್ಕಳನ್ನು ಹುಡುಕಿಕೊಂಡು ಹೋದ ಶಿಕ್ಷಕರಿಗೆ ಈವರೆಗೆ 648 ಮಕ್ಕಳು ಪತ್ತೆಯಾಗಿದ್ದಾರೆ. ಆದರೆ, ಇವರಲ್ಲಿ ಬಹುತೇಕ ವಿದ್ಯಾರ್ಥಿಗಳು ಬೇರೆ ಶಾಲೆಗಳಲ್ಲಿ ಕಲಿಕೆಯಲ್ಲಿಯೇ ಇದ್ದು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಹೋದಾಗ ಎರಡೂ ಶಾಲೆಗಳಲ್ಲಿ ತಂತ್ರಾಂಶದಲ್ಲಿ ಮಗುವಿನ ಶೈಕ್ಷಣಿಕ ಮಾಹಿತಿ ಭರ್ತಿ ಮಾಡದಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ.

ಏನಿದು ಗೊಂದಲ?: ಸಾಮಾನ್ಯವಾಗಿ ಮಗು ಶಾಲೆಗೆ ದಾಖಲಾದಾಗ ಇಲಾಖೆ ತಂತ್ರಾಂಶದಲ್ಲಿ ಮಗುವಿನ ಪ್ರವೇಶದ ಬಗ್ಗೆ ಮಾಹಿತಿ, ಆ ಮಗುವಿನ ಕೋಡ್‌ ಸಂಖ್ಯೆ ದಾಖಲಿಸಬೇಕಾಗಿದೆ. ಕೆಲವು ಮಕ್ಕಳು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ವರ್ಗಾವಣೆಯಾಗುತ್ತಿದ್ದಾಗ ಹಾಗೂ ಬೇರೆ ಶಾಲೆಯಲ್ಲಿ ಪ್ರವೇಶ ಪಡೆಯುವಾಗ ಶಾಲಾ ಮುಖ್ಯಾಧ್ಯಾಪಕರು ತಾಂತ್ರಿಕ ಸಮಸ್ಯೆಯಿಂದ ಕೈಯಿಂದ ಬರೆದ ಶಾಲಾ ವರ್ಗಾವಣೆ ಪತ್ರ ನೀಡಿ, ಇಲ್ಲವೇ ಸ್ವೀಕರಿಸಿ ಪ್ರವೇಶ ನೀಡಿದ ಬಗ್ಗೆ ತಂತ್ರಾಂಶದಲ್ಲಿ ಮಾಹಿತಿ ದಾಖಲಿಸದಿರುವುದರಿಂದ ತಂತ್ರಾಂಶದಲ್ಲಿ ಮಗು ಶಾಲೆಯಿಂದ ಹೊರಗೆ ಹಾಗೂ ಒಳಗೆ ಬಂದ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಈಗ ಮಾಹಿತಿ ಇಲ್ಲದ ಮಕ್ಕಳ ಬಗ್ಗೆ ಮಾಹಿತಿ ಪಡೆದು, ಅದನ್ನು ತಂತ್ರಾಂಶದಲ್ಲಿ ಮಾಹಿತಿ ದಾಖಲಿಸಲು ಇಲಾಖೆ ಮುಖ್ಯಾಧ್ಯಕ್ಷರಿಗೆ ಸೂಚಿಸಿದೆ.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮನೆ ಭೇಟಿ ಸಮೀಕ್ಷೆ ಈಗಷ್ಟೇ ಆರಂಭಿಸಿದ್ದು ಡಿ. 21ರ ವರೆಗೆ ಸಮೀಕ್ಷೆ ನಡೆಯಲಿದೆ. ತಂತ್ರಾಂಶದಲ್ಲಿ ಮಾಹಿತಿ ಇಲ್ಲದೆ ಉಳಿದ 798 ಮಕ್ಕಳ ಮಾಹಿತಿ ಸಹ ಹುಡುಕಲಾಗುತ್ತಿದ್ದು, ಈ ಸಮೀಕ್ಷೆ ಪೂರ್ಣಗೊಂಡ ಬಳಿಕ ಎಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬ ನಿಖರ ಮಾಹಿತಿ ಲಭಿಸಲಿದೆ.

ಸಾಮಾನ್ಯವಾಗಿ ಪ್ರಾಥಮಿಕ ಹಂತದಿಂದ ಪ್ರೌಢಶಾಲೆ ಶಿಕ್ಷಣಕ್ಕೆ ಹೋಗುವ ವೇಳೆ, ಪ್ರೌಢಶಾಲೆಯಲ್ಲಿ 9ನೇ ತರಗತಿ ವೇಳೆಗೆ ಹೆಚ್ಚಾಗಿ ಮಕ್ಕಳು ಶಾಲೆ ಬಿಡುತ್ತಾರೆ. ಈ ಹಿಂದಿನ ವರ್ಷಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ ನಿಖರ ಮಾಹಿತಿ ಸಿಗುತ್ತಿರಲಿಲ್ಲ. ಆದರೂ ಪ್ರತಿ ವರ್ಷ ಜಿಲ್ಲೆಯಲ್ಲಿ ಸರಾಸರಿ 50ರಿಂದ 60 ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಾರೆ. ಈ ಬಾರಿ ತಂತ್ರಾಂಶದ ಮಾಹಿತಿ ಇರುವುದರಿಂದ ನಿರ್ದಿಷ್ಟ ಅಂಕೆ ಸಂಖ್ಯೆ ಲಭ್ಯವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

Advertisement

ಎನ್‌ಜಿಓ ಕಾರ್ಯ: ಸರ್ಕಾರೇತರ ಸಂಘ ಸಂಸ್ಥೆಗಳು ಶಾಲೆಯಿಂದ ಹೊರಗೆ ಉಳಿಯಬಹುದಾದ ಮಕ್ಕಳ ಸಮೀಕ್ಷೆ ಕೈಗೊಂಡು ಅವರನ್ನು ಶಿಕ್ಷಣದಲ್ಲಿ ಮುಂದುವರಿಯುವಂತೆ ಮಾಡುವ ಕೆಲಸ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ 15 ಸರ್ಕಾರೇತರ ಸಂಸ್ಥೆಗಳು ಈ ಕಾರ್ಯದಲ್ಲಿ ನಿರತವಾಗಿವೆ. ಈ ಸಂಸ್ಥೆಗಳು ಶಾಲೆಯಿಂದ ಹೊರಗೆ ಉಳಿಯಬಹುದಾದ 850ಮಕ್ಕಳನ್ನು ಗುರುತಿಸಿದ್ದು, 21 ಕೇಂದ್ರಗಳ ಮೂಲಕ ಆರು ತಿಂಗಳ ಅವಧಿ ಅವರಿಗೆ ಶಿಕ್ಷಣ ಮುಂದುವರಿಸುವ ಕಾರ್ಯ ಮಾಡುತ್ತಿವೆ. ಸರ್ಕಾರ ಆರು ತಿಂಗಳ ಅವಧಿಗೆ ಒಂದು ಮಗುವಿಗೆ 12 ಸಾವಿರ ರೂ. ಖರ್ಚು ಮಾಡುತ್ತಿದೆ. ಗ್ರಾಮದ ಹೊರವಲಯದಲ್ಲಿರುವ ತಾಂಡಾದ ಮಕ್ಕಳು, ಹಂಗಾಮು ವೇಳೆ ಉದ್ಯೋಗ ಅರಸಿ ಬೇರೆಡೆ ವಲಸೆ ಹೋಗುವ ಪಾಲಕರ ಮಕ್ಕಳು ಋತುಮಾನ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಶಾಲಾ ಹಂತದ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಸಮೀಕ್ಷೆ ನಡೆಸುವ ಜತೆಗೆ ಮಧ್ಯಂತರದಲ್ಲಿ ಶಾಲೆ ಬಿಡುವುದನ್ನು ತಪ್ಪಿಸಲು ಅಗತ್ಯ ಜಾಗೃತಿ ಮೂಡಿಸುವ ಕೆಲಸವೂ ಮುಂದುವರಿಸಿದೆ.

ಇಲಾಖೆ ತಂತ್ರಾಂಶದಲ್ಲಿ ಈ ವರ್ಷ ಜಿಲ್ಲೆಯ 1446 ಮಕ್ಕಳ ಮಾಹಿತಿ ಇರಲಿಲ್ಲ. ಹೀಗಾಗಿ ಇಲಾಖೆ ಅವರನ್ನು ಪತ್ತೆ ಹಚ್ಚಲು ಸೂಚಿಸಿದ್ದು, ಈ ವರೆಗೆ 648 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಇವರಲ್ಲಿ ಬಹುತೇಕರು ಬೇರೆ ಬೇರೆ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ, ಅವರ ಮಾಹಿತಿ ತಂತ್ರಾಂಶದಲ್ಲಿ ದಾಖಲಾಗದೆ ಗೊಂದಲ ಸೃಷ್ಟಿಯಾಗಿತ್ತು. ಇನ್ನುಳಿದವರ ಪತ್ತೆ ಕಾರ್ಯ ನಡೆದಿದೆ. ಎನ್‌ಜಿಒಗಳು ಶಾಲೆಯಿಂದ ಹೊರಗುಳಿಯಬಹುದಾದ 850 ಮಕ್ಕಳಿಗೆ ಋತುಮಾನ ಶಾಲೆ ಮೂಲಕ ಶಿಕ್ಷಣ ಮುಂದುವರಿಸುತ್ತಿವೆ. ಪೂರ್ಣ ಸಮೀಕ್ಷೆ ಮುಗಿದ ಬಳಿಕ ಎಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆಂಬ ಮಾಹಿತಿ ಲಭ್ಯವಾಗಲಿದೆ.
 ಎಸ್‌.ಎಸ್‌. ಅಡಿಗ, ಶಿಕ್ಷಣಾಧಿಕಾರಿ

ಜಿಲ್ಲೆಯಲ್ಲಿ ಮುಚ್ಚಲು ಯಾವುದೇ ಶಾಲೆಗಳನ್ನು ಗುರುತಿಸಿಲ್ಲ. ಬದಲಾಗಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷ 27.50ಲಕ್ಷ ರೂ.ಗಳಲ್ಲಿ ಪ್ರಾಥಮಿಕ ಶಾಲೆಗಳ 78 ಶಾಲಾ ಕೊಠಡಿಗಳನ್ನು ಹಾಗೂ 34.30ಲಕ್ಷ ರೂ.ಗಳಲ್ಲಿ ಪ್ರೌಢಶಾಲೆ ಕೊಠಡಿಗಳನ್ನು ದುರಸ್ತಿಗೊಳಿಸಲಾಗುತ್ತಿದೆ. 1.55ಕೋಟಿ ರೂ.ಗಳಲ್ಲಿ 47 ಪ್ರಾಥಮಿಕ ಶಾಲಾ ಕೊಠಡಿಗಳನ್ನು ಹಾಗೂ 1.52 ಕೋಟಿ ರೂ.ಗಳಲ್ಲಿ 19 ಪ್ರೌಢಶಾಲೆ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.
. ಅಂದಾನೆಪ್ಪ ವಡಗೇರಿ, ಡಿಡಿಪಿಐ, ಹಾವೇರಿ

„ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next