Advertisement

ಶತಾಯ ಗತಾಯ ಪ್ರಯತ್ನ

11:19 AM Jan 12, 2018 | |

“ನಂಗೆ ಹೆಚ್ಚು ಮಾತಾಡೋಕೆ ಬರಲ್ಲ. ನರ್ವಸ್‌ ಆಗಿದ್ದೀನಿ …’
ಅಂತ ಸಂದೀಪ್‌, ಮುರಳಿಗೆ ಹೇಳಿದ್ದರಂತೆ. ಆದರೆ, ಸಂದೀಪ್‌ ಮೈಕು ಹಿಡಿದು ಮಾತಾಡಿದ್ದು ನೋಡಿ, ಮುರಳಿ ಆಶ್ಚರ್ಯಪಟ್ಟರು. ಇವರೇನಾ ತಮಗೆ ನರ್ವಸ್‌ ಆಗಿದೆ ಎಂದು ಹೇಳಿದ್ದು ಎಂದು ಇನ್ನೊಮ್ಮೆ ಮುಖ ನೋಡಿದರು. ಹಾಗೆ ನೋಡಿದರೆ, ಸಂದೀಪ್‌ ಗೌಡ ಹೇಳಬಾರದ್ದನ್ನೇನೂ ಹೇಳಲಿಲ್ಲ. ತಮ್ಮ ಹೊಸ ಚಿತ್ರದ ಬಗ್ಗೆ ಸ್ವಲ್ಪ ಎಕ್ಸೆ„ಟ್‌ ಆಗಿ ಮಾತನಾಡಿದರು.

Advertisement

“ಇದೊಂದು ಸಸ್ಪೆನ್ಸ್‌-ರಿವೆಂಜ್‌ ಚಿತ್ರ. ನನಗೆ ಚಿತ್ರದ ಬಗ್ಗೆ ಹೆಚ್ಚು ಗೊತ್ತಿಲ್ಲ. ಇಡೀ ತಂಡದ ಸಹಾಯದಿಂದ ಈ ಚಿತ್ರ ಮಾಡಿದೆ. ಟ್ರೇಲರ್‌ ನೋಡಿದರೆ, ಒಬ್ಬ ಹೊಸ ನಿರ್ದೇಶಕ ಮಾಡಿದ್ದಾನೆ ಅಂತನಿಸುವುದಿಲ್ಲ. ಈಗಾಗಲೇ ಚಿತ್ರ ಮುಗಿದಿದೆ. ಫೆಬ್ರವರಿ ಕೊನೆಯ ಹೊತ್ತಿಗೆ ಬಿಡುಗಡೆಯಾಗಲಿದೆ. ನಮ್ಮ ಸಂಗೀತ ನಿರ್ದೇಶಕರು ಬಾವಿ ಇದ್ದಂಗೆ. ಅವರಿಂದ ಚೆನ್ನಾಗಿ ತೋಡಿಕೊಂಡೆ. ಹಾಗಾಗಿ ಒಳ್ಳೆಯ ಹಾಡುಗಳು ಬಂದಿವೆ. ಇನ್ನು ನಮ್ಮ ಮತ್ತು ಪ್ರೇಕ್ಷಕರ ನಡುವೆ, ಮಾಧ್ಯಮದವರು ಸೇತುವೆ ಇದ್ದ ಹಾಗೆ. ಅವರ ಸಹಕಾರದಿಂದಲೇ ನಮಗೆ ಪ್ರೇಕ್ಷಕರನ್ನು ತಲುಪೋಕೆ ಸಾಧ್ಯ. ನಿಮ್ಮೆಲ್ಲರ ಸಹಕಾರ ಇರಲಿ’ ಎಂದು ಬಹಳ ಉತ್ಸಾಹದಿಂದ ಸಂದೀಪ್‌ ಗೌಡ ಹೇಳುತ್ತಾ ಹೋದರು.

ಹಾಗೆ ಅವರು ಮಾತನಾಡಿದ್ದು, “ಶತಾಯ ಗತಾಯ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ. ಈಗಾಗಲೇ ಸಂದೀಪ್‌ ಸದ್ದಿಲ್ಲದೆ ತಮ್ಮ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ರವಿನಂದನ್‌ ಜೈನ್‌ ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಅವರು ಬಿಡುಗಡೆ ಮಾಡಿಸಿದರು. ಅದಕ್ಕಾಗಿ ಮುರಳಿ ಅವರನ್ನೂ ಕರೆಸಿದ್ದರು.
ಮುಖ್ಯ ಅತಿಥಿಯಾಗಿ ಬಂದ ಮುರಳಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಮಾಧ್ಯಮದವರ ಸಹಕಾರ ಇದ್ದರೆ ಚಿತ್ರ ಓಡುತ್ತದೆ ಎಂಬ ನಿರ್ದೇಶಕರ ಹೇಳಿಕೆಯ ಕುರಿತು ಮಾತನಾಡಿದ ಅವರು, “ಮಾಧ್ಯಮದವರು ಚಿತ್ರರಂಗದ ಕೈ ಬಿಟ್ಟಿಲ್ಲ. ಚಿತ್ರ ಇಷ್ಟವಾದರೆ ಒಳ್ಳೆಯ ಮಾತುಗಳನ್ನು ಬರೆಯುತ್ತಾರೆ. ತಪ್ಪು ಮಾಡಿದಾಗ ತಿದ್ದಿದ್ದಾರೆ, ಬೆಳೆಸಿದ್ದಾರೆ, ಉಳಿಸಿದ್ದಾರೆ’ ಎಂದು ಹೇಳಿದರು.

ನಿರ್ದೇಶಕರೇ ಹೇಳಿದಂತೆ “ಶತಾಯ ಗತಾಯ’ ಒಂದು ಸೇಡಿನ ಚಿತ್ರ. ಹಾಸನದ ಹಿರಿಸಾವೆ ಗ್ರಾಮದಲ್ಲಿ ಚಿತ್ರೀಕರಣ ಮಾಡಲಾಗಿದೆ. “ಜಸ್ಟ್‌ ಪಾಸ್‌’ ಚಿತ್ರದಲ್ಲಿ ನಾಯಕನಾಗಿದ್ದ ರಘು ರಾಮಪ್ಪ, ಈ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದಾರೆ. ಇನ್ನು ಸೋನು ಗೌಡ ನಾಯಕಿ. ಅವರ ಜೊತೆಗೆ ಶಿವಪ್ರದೀಪ್‌, ಕುರಿ ಪ್ರತಾಪ್‌, ಗೋವಿಂದೇಗೌಡ ಮುಂತಾದವರು ನಟಿಸಿದ್ದಾರೆ. ಸಂದೀಪ್‌ ಈ ಚಿತ್ರವನ್ನು ನಿರ್ದೇಶಿಸಿರುವುದಷ್ಟೇ ಅಲ್ಲ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆಯುವುದರ ಜೊತೆಗೆ, ಚಿತ್ರ ನಿರ್ಮಿಸಿ, ಅದರಲ್ಲೊಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಇನ್ನು “ಕೌರವ’ ವೆಂಕಟೇಶ್‌, ಈ ಚಿತ್ರಕ್ಕೆ ಸಾಹಸ ಸಂಯೋಜಿಸಿದ್ದಾರೆ.

ನಾಯಕ ರಘು ರಾಮಪ್ಪ, ನಾಯಕಿ ಸೋನು ಗೌಡ, ಸಂಗೀತ ನಿರ್ದೇಶಕ ರವಿನಂದನ್‌ ಚಿತ್ರದ ಬಗ್ಗೆ ಮಾತನಾಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next