ಕಟೀಲು: ಕಟೀಲು ದೇವಿಗೆ ಹೇಳುವ ಹರಕೆಯಲ್ಲಿ ಯಕ್ಷಗಾನ ಸೇವೆ, ಹೂವಿನ ಪೂಜೆ, ಚಂಡಿಕಾ ಹೋಮ, ರಂಗ ಪೂಜೆ ಇತ್ಯಾದಿ ಪ್ರಮುಖವಾದವು. ಜತೆಗೆ ದೇವಸ್ಥಾನದಲ್ಲಿ ಮದುವೆ ಆಗುತ್ತೇನೆ ಎಂಬುದೂ ಸೇರಿದೆ. ಈ ಹಿನ್ನೆಲೆಯಲ್ಲಿ 2017ರ ಜನವರಿಯಿಂದ ಜೂನ್ ವರೆಗೆ ಒಟ್ಟು 1,006 ಮದುವೆಗಳಾಗಿವೆ.
ಜನವರಿಯಲ್ಲಿ 103, ಫೆಬ್ರವರಿಯಲ್ಲಿ 96, ಮಾರ್ಚ್‌ನಲ್ಲಿ 65, ಎಪ್ರಿಲ್‌ನಲ್ಲಿ 148, ಮೇ ತಿಂಗಳಲ್ಲಿ 456 ಹಾಗೂ ಜೂನ್ ತಿಂಗಳಲ್ಲಿ 138 ವಿವಾಹಗಳಾಗಿವೆ.
ಜ. 29ರಂದು 30, ಫೆ.19 ರಂದು 26, ಮಾ. 5ರಂದು 21, ಎ. 2 ಮತ್ತು 21ರಂದು 36 ಮದುವೆಗಳಾಗಿವೆ. ಮೇ 4ರಂದು 61, 7ಕ್ಕೆ 83, 18ಕ್ಕೆ 62, 28ಕ್ಕೆ 77 ಹಾಗೂ ಜೂನ್ 16ರಂದು 26 ಮದುವೆಗಳಾಗಿವೆ. ಸರಾಸರಿ ಲೆಕ್ಕ ಹಾಕಿದರೆ ದಿನವೊಂದಕ್ಕೆ 6 ಮದುವೆಯಾಗಿದೆ.
ಮದುವೆಗೆ ಬೇಕಾದುದೇನು?
ವರ ಹಾಗೂ ವಧುವಿನ ಸೂಕ್ತ ದಾಖಲೆ, ವಿವಾಹ ಕಾಣಿಕೆ ರೂ. 301 ಹಾಗೂ ಪುರೋಹಿತರಿಗೆ 300 ರೂ. ದಕ್ಷಿಣೆ. ಆದ ಕಾರಣ ಇಲ್ಲಿ ನಡೆಯುವ ವಿವಾಹ ಅತ್ಯಂತ ಸರಳ ಮತ್ತು ಮಿತವ್ಯಯಕಾರಿ ಎಂದೇ ಜನಪ್ರಿಯವಾಗಿದೆ.
ಇಲ್ಲಿ ವಿವಾಹಾಪೇಕ್ಷಿತರಿಂದ ಸ್ವಯಂವರ ಪಾರ್ವತೀ ಪೂಜೆಯೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತದೆ. ದೇಗುಲಕ್ಕೆ ವರ್ಷಕ್ಕೆ ಹರಕೆ ರೂಪದಲ್ಲಿ ಬರುವ ಸುಮಾರು 25 ಸಾವಿರ ಸೀರೆಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸೀರೆಗಳು ವಿವಾಹ ಸಂಬಂಧಿ ಹರಕೆ ಮೂಲಕವೇ ಸಲ್ಲಿಕೆಯಾಗುತ್ತಿವೆ.
ಕಟೀಲು ದೇಗುಲವು ನಂದಿನೀ ನದಿ ಮಧ್ಯದಲ್ಲಿರುವುದರಿಂದ ಸ್ಥಳಾವಕಾಶದ ಕೊರತೆ ಇದೆ. ಆದರೂ ವಿವಾಹಗಳು ಕಡಿಮೆ ಇಲ್ಲ. ಮದುವೆ ಸಂದರ್ಭದಲ್ಲಿ ದಿಬ್ಬಣ ಎದುರುಗೊಳ್ಳುವುದು ಸಹಿತ ಕೆಲವು ಕ್ರಮಗಳಿಂದ ಸಾರಿಗೆ ವ್ಯವಸ್ಥೆ ಮತ್ತು ಇತರ ಭಕ್ತರಿಗೆ ಸ್ವಲ್ಪ ಅಡಚಣೆಯಾಗುತ್ತಿದ್ದು, ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕಿದೆ ಎಂಬ ಅಭಿಪ್ರಾಯ ಸಾರ್ವಜನಿಕರದ್ದು.
– ರಘುನಾಥ ಕಾಮತ್ ಕೆಂಚನಕೆರೆ