Advertisement

ತಿಂಗಳ ಮೊದಲ ದಿನದ ಬಾಲೆಗೆ ಸಾವಿರ ರೂ.!

01:35 AM Sep 20, 2019 | Team Udayavani |

ಮಂಗಳೂರು: ಹೆಣ್ಣು ಹೆತ್ತವರಿಗೆ ಇದು ಖುಷಿ ಕೊಡದೆ ಇನ್ಯಾವುದು ಕೊಟ್ಟಿತು ಹೇಳಿ! ಕೇಂದ್ರ ಸರಕಾರದ “ಬೇಟಿ ಬಚಾವೊ ಬೇಟಿ ಪಡಾವೊ’ ಯೋಜನೆಯಡಿ ಕಳೆದ ನವೆಂಬರ್‌ನಲ್ಲಿ ಜನಿಸಿದ ದಕ್ಷಿಣಕನ್ನಡ ಜಿಲ್ಲೆಯ 750 ಹೆಣ್ಣುಶಿಶುಗಳಿಗೆ ತಲಾ ಒಂದು ಸಾವಿರ ರೂ. ಗಳಂತೆ 7.50 ಲಕ್ಷ ರೂ. ಪ್ರೋತ್ಸಾಹಧನ ಲಭಿಸಿದೆ! ಹೆತ್ತವರಿಗೆ ಅಭಿನಂದನ ಪತ್ರದ ಜತೆಗೆ “ಹೆಣ್ಣು ಹುಟ್ಟಿದರೆ ಮನೆ ಬೆಳಗುತ್ತದೆ’ ಎಂಬ ಸಂದೇಶದೊಂದಿಗೆ ಉನ್ನತಿಯ ಸಂಕೇತವಾದ ಕಲ್ಪವೃಕ್ಷದ ಸಸಿಯನ್ನೂ ನೀಡಲಾಗಿದೆ.

Advertisement

2018-19ನೇ ವರ್ಷಾರ್ಧದಲ್ಲಿ ಜಾರಿಗೆ ಬಂದ ಕೇಂದ್ರ ಸರಕಾರದ ಈ ಯೋಜನೆಯಡಿ ಆಯ್ಕೆಯಾದ ರಾಜ್ಯದ ನಾಲ್ಕು ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡವೂ ಒಂದು. ಹೆಣ್ಣು-ಗಂಡು ಅನುಪಾತದಲ್ಲಿ ಅಸಮತೋಲನ ಪರಿಗಣಿಸಿ ಯಾದಗಿರಿ, ಹಾವೇರಿ, ಗದಗ ಜಿಲ್ಲೆಗಳನ್ನೂ ಆಯ್ಕೆ ಮಾಡಲಾಗಿದೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಮುಖಾಂತರ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ.

ಪ್ರತಿ ತಿಂಗಳ ಮೊದಲ ದಿನ ಜನಿಸಿದ ಹೆಣ್ಣು ಶಿಶು ಅದೃಷ್ಟಶಾಲಿ ಯೋಜನೆಯಲ್ಲಿ 2019-20ನೇ ಸಾಲಿನಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಪ್ರತಿ ತಿಂಗಳ 1ರಂದು ಜನಿಸುವ ಹೆಣ್ಣುಶಿಶುಗಳು ಅರ್ಹತೆ ಪಡೆಯುತ್ತವೆ. ಎಪ್ರಿಲ್‌ನಿಂದ ಈವರೆಗೆ 75 ಮಕ್ಕಳಿಗೆ ತಲಾ 1 ಸಾವಿರ ರೂ.ಗಳಂತೆ 75 ಸಾವಿರ ರೂ.ಗಳನ್ನು ಆಯಾ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಮಕ್ಕಳ ಮನೆಯ ವರಿಗೆ ಇನ್ನಷ್ಟೇ ತಲುಪಬೇಕಿದೆ.

ಎಲ್ಲ ಹೆಣ್ಣು ಮಕ್ಕಳೂ ಅರ್ಹರು
ಮಕ್ಕಳ ಆಯ್ಕೆಯಲ್ಲಿ ಬಡವ- ಶ್ರೀಮಂತನೆಂಬ ಭೇದ ವಿಲ್ಲ. ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಒಂದನೇ ತಾರೀಖೀಗೆ ಜನಿಸಿದ ಹೆಣ್ಣು ಶಿಶುಗಳ ಮಾಹಿತಿ ಸಂಗ್ರಹಿಸಿ ಇಲಾಖೆಗೆ ನೀಡುತ್ತಾರೆ. ಕಳೆದ ವರ್ಷ ದ.ಕ. ಜಿಲ್ಲೆಗೆ ಕೇಂದ್ರ ಸರಕಾರದಿಂದ 42,97,249 ರೂ. ಬಿಡುಗಡೆಯಾಗಿದ್ದು, ಈ ವರ್ಷ 50 ಲಕ್ಷ ರೂ. ಮೀಸಲಿರಿಸಲಾಗಿದೆ.

24 ಶಾಲೆಗಳಿಗೆ 2.40 ಲಕ್ಷ ರೂ.!
ಎಸೆಸೆಲ್ಸಿಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ ಶಾಲೆಗಳು ಮತ್ತು ಅಲ್ಲಿ ಕಲಿತ ಎಲ್ಲ ಬಾಲಕಿಯರು ಪಿಯುಸಿಗೆ ದಾಖಲಾಗುವ ಸಲುವಾಗಿ ಜಿಲ್ಲೆಯ 24 ಶಾಲೆಗಳಿಗೆ ತಲಾ 10 ಸಾವಿರದಂತೆ 2.40 ಲಕ್ಷ ರೂ.ಗಳನ್ನು 2018-19ನೇ ಸಾಲಿನಲ್ಲಿ ನೀಡಲಾಗಿದೆ. ಅತ್ಯಧಿಕ ಅಂಕ ಗಳಿಸಿದ ಸರಕಾರಿ ಶಾಲೆಗಳ 51 ವಿದ್ಯಾರ್ಥಿನಿಯರಿಗೆ 5 ಸಾವಿರದಂತೆ 2.55 ಲಕ್ಷ ರೂ. ನೀಡಲಾಗಿದೆ.

Advertisement

8 ಮಂದಿಗೆ 1.40 ಲ.ರೂ.
2019-20ನೇ ಸಾಲಿನಲ್ಲಿ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸರಕಾರಿ ಮತ್ತು ಖಾಸಗಿ ಕಾಲೇಜುಗಳ 8 ವಿದ್ಯಾರ್ಥಿನಿಯರಿಗೆ ತಲಾ 17,500 ರೂ.ಗಳಂತೆ 1.40 ಲಕ್ಷ ರೂ.ಗಳನ್ನು ಪ್ರೋತ್ಸಾಹಧನವಾಗಿ ನೀಡಲಾಗುತ್ತಿದೆ.

ಪ್ರತಿ ಜಿಲ್ಲೆಗೆ 50 ಲಕ್ಷ ರೂ. ಮೀಸಲಿಟ್ಟಿದ್ದು, ಮೊದಲ ಹಂತದಲ್ಲಿ 25 ಲಕ್ಷ ರೂ. ಬಂದಿದೆ. ಇದರಲ್ಲಿ ಹೆಣ್ಣುಮಕ್ಕಳ ಶಿಕ್ಷಣ, ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು.
– ಸುಂದರ ಪೂಜಾರಿ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಯೋಜನೆಯ ಉದ್ದೇಶ ಒಳ್ಳೆಯದೇ. ಆದರೆ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ಧನ ಸಿಗುತ್ತದೆ ಎಂಬುದೇ ಮಹತ್ವ ದ್ದಾಗಬಾರದು. ಹೆಣ್ಣು ಮನೆ ಬೆಳಗುವ ಕಣ್ಣು ಎಂಬಂತೆ ಬೆಳೆಸಬೇಕು.
– ಯತೀಶ್‌ ಮೂಡಾಯಿಬೆಟ್ಟು, ಪ್ರೋತ್ಸಾಹಧನ ಪಡೆದ ಮಗುವಿನ ತಂದೆ

Advertisement

Udayavani is now on Telegram. Click here to join our channel and stay updated with the latest news.

Next