ಪಣಜಿ : ತೌಖ್ತೇ ಚಂಡಮಾರುತದ ನಂತರ ಸಾಮಾನ್ಯ ಸ್ಥಿತಿಗೆ ತರಲು ಗೋವಾಕ್ಕೆ “ಸಂಪೂರ್ಣ ಬೆಂಬಲ” ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ(ಮೇ. 17) ಗೋವಾ ರಾಜ್ಯ ಸರ್ಕಾರಕ್ಕೆ ಭರವಸೆ ನೀಡಿದೆ.
ಈ ಕುರಿತಾಗಿ ಮಾಹಿತಿ ನೀಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಗೃಹ ಸಚಿವ ಅಮಿತ್ ಶಾ ರವರೊಂದಿಗೆ ಗೋವಾದಲ್ಲಿ ಚಂಡಮಾರುತದಿಂದ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ಚರ್ಚಿಸಿದ್ದೇನೆ. ಗೋವಾದಲ್ಲಿ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಕೇಂದ್ರ ಗೃಹ ಮಂತ್ರಿಗಳು ವಿಚಾರಿಸಿದ್ದು ರಾಜ್ಯ ಸಾಮಾಯ ಸ್ಥಿತಿಗೆ ತಲುಪಲು ಕೇಂದ್ರವು ಅಗತ್ಯವಿರುವ ಎಲ್ಲ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಮರ : ಓರ್ವ ಸವಾರನಿಗೆ ಗಂಭೀರ ಗಾಯ
ಇನ್ನು, ಚಂಡಮಾರುತದ ಬಿಕ್ಕಟ್ಟಿನಲ್ಲಿರುವ ಗೋವಾ ರಾಜ್ಯಕ್ಕೆ ಅಗತ್ಯವಿರುವ ಎಲ್ಲ ಸಹಕಾರ ನೀಡುತ್ತೇವೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಭರವಸೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಕಳೆದ ಶನಿವಾರ ಮತ್ತು ಭಾನುವಾರ ಗೋವಾ ರಾಜ್ಯಕ್ಕೆ ಅಪ್ಪಳಿಸಿದ ತೌಖ್ತೇ ಚಂಡಮಾರುತದಿಂದಾಗಿ ಗೋವಾದಲ್ಲಿ ಅಪಾರ ಪ್ರಮಾಣದಲ್ಲಿ ಮರಗಳು ಬಿದ್ದು ನೂರಾರು ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಭಾರಿ ಪ್ರಮಾಣದಲ್ಲಿ ವಿದ್ಯುತ್ ಕಂಬಗಳು ಬಿದ್ದಿರುವುದರಿಂದ ಕಳೆದ ಎರಡು ದಿನಗಳಿಂದ ಗೋವಾ ರಾಜ್ಯಾದ್ಯಂತ ವಿದ್ಯುತ್ ಸಂಪರ್ಕವಿಲ್ಲದೆಯೇ ಕತ್ತಲೆಯಲ್ಲಿ ಮುಳುಗುವಂತಾಗಿದೆ.
ಇದನ್ನೂ ಓದಿ : ಪೆರಿಯಶಾಂತಿ: ಟಾಟಾ ಸುಮೋ ಮತ್ತು ಲಾರಿ ಮುಖಾಮುಖಿ ಢಿಕ್ಕಿ