Advertisement

ಇನ್ನಿಲ್ಲದ ರಣತಂತ್ರ ಇನ್ಮುಂದೆ ಶುರು!

07:50 AM Sep 10, 2017 | Harsha Rao |

ಮಹಾಭಾರತ ಕಥೆಯಲ್ಲಿ ಬರುವ ಪ್ರಸಂಗವಿದು. ಸಂಧಾನ ಮುರಿದು ಸಂಗ್ರಾಮವೇ ಸಿದ್ಧವೆಂದು ನಿರ್ಧಾರವಾದ ಸಂದರ್ಭ. ಪಾಂಡವ ಪಕ್ಷಪಾತಿ ಕೃಷ್ಣನಿಗೆ ಪಾಂಡವರ ಗೆಲುವು ಮುಖ್ಯ. ಹಾಗಾಗಿ ಶತ್ರುಬಲ ಕುಗ್ಗಿಸುವ ಸಲುವಾಗಿ ಕರ್ಣನನ್ನು ಭೇಟಿಯಾಗುತ್ತಾನೆ. ಅವನ ಜನ್ಮವೃತ್ತಾಂತವನ್ನರುಹುತ್ತಾನೆ. “ನಿನ್ನಯ ವೀರರೈವರ ನೋಯಿಸೆನು ರಾಜೀವಸಖನಾಣೆ’ ಎಂಬುದಾಗಿ ಕರ್ಣನಿಂದ ವಾಗ್ಧಾನ ಪಡೆಯುತ್ತಾನೆ. ಪ್ರಸ್ತುತ ಭಾರತ ಕಥೆಗೆ ಬರೋಣ. ಇಲ್ಲಿ ಯುದ್ಧ ಸನ್ನಿಹಿತವಾಗಿಲ್ಲ. ಆದರೆ ಚುನಾವಣೆ ಸನ್ನಿಹಿತವಾಗಿದೆ. 2018ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ.

Advertisement

2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮತ್ತೆ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ ಇನ್ನಿಲ್ಲದ ರಣತಂತ್ರ ರೂಪಿಸಬೇಕಾಗುತ್ತದೆ. ಸ್ವಂತ ಬಲವನ್ನು ಹೆಚ್ಚಿಸಿಕೊಳ್ಳುವ ಜತೆಜತೆಗೆ ಶತ್ರುಬಲವನ್ನು ಕುಗ್ಗಿಸುವ ಕೆಲಸವನ್ನೂ ಮಾಡಬೇಕಾಗುತ್ತದೆ. ಅದಕ್ಕೆ ನಾನಾ ಕಸರತ್ತುಗಳೂ ಅಗತ್ಯವೆನಿಸುತ್ತವೆ.

-ಪರೀಕ್ಷಾ ಕಾಲ-
ಒಮ್ಮೆ ಗೆದ್ದು ಅಧಿಕಾರದ ಗದ್ದುಗೆಗೇರಿದರೆ ಸಾಕು. ಮತ್ತೆ ಐದು ವರ್ಷ ತೊಂದರೆಯಿಲ್ಲ. ಆದರೆ ಆ ಐದು ವರ್ಷಕಾಲ ಎಷ್ಟು ಬೇಗ ಕಳೆದುಹೋಗುತ್ತದೆ ಎಂಬುದರ ಅರಿವಿದ್ದಂತಿಲ್ಲ. ಮೊದಲ ವರ್ಷವಂತೂ ಗೆದ್ದು ಬಂದ ಸಂಭ್ರಮ. ವಿಜಯೋತ್ಸವ ಆಚರಿಸಿ ಹಾರ-ತುರಾಯಿ ಹಾಕಿಸಿಕೊಳ್ಳುವುದರಲ್ಲೇ ಮುಗಿದುಹೋಗುತ್ತದೆ. ಮುಂದಿನ ಎರಡು-ಮೂರು ವರ್ಷಗಳು ನಾಲ್ಕಾರು ಅಧಿವೇಶನಗಳು. ಆರೋಪ-ಪ್ರತ್ಯಾರೋಪ- ಬಹಿಷ್ಕಾರಗಳಲ್ಲೇ ಕಳೆದುಹೋಗುವ ಕಲಾಪಗಳು.

ಕೊನೆಯ ವರ್ಷ ಬಂದರಂತೂ ಮುಗಿಯಿತು. ಮತ್ತೆ ಗೆದ್ದು ಗದ್ದುಗೆಗೇರುವ ಬಯಕೆ. ಸರಕಾರಕ್ಕೂ ಜನನಾಯಕರಿಗೂ ಅದು ಪರೀûಾ ಕಾಲ. ಅಧಿಕಾರಾವಧಿಯಲ್ಲಿ ಜನನಾಯಕರಾಗಿ ಉಳಿಯದೆ ಜನಸೇವಕರಾಗಿ ಜನಹಿತದ ಬಗ್ಗೆ ಚಿಂತಿಸಿ ಜನಪರ ಕಾರ್ಯ ಕೈಗೊಂಡಿದ್ದಲ್ಲಿ ಸಮಸ್ಯೆಯಿರಲಿಲ್ಲ. ಆದರೆ ಅದಕ್ಕೆ ಅವರಿಗೆ ಬಿಡುವೆಲ್ಲಿ? ಹಾಗಾಗಿ ವರ್ಷಪೂರ್ತಿ ಬೇಕಾಬಿಟ್ಟಿ ಕಳೆದು ವರ್ಷಾಂತ್ಯ ಪರೀಕ್ಷೆಯಲ್ಲಿ ಹೇಗಾದರೂ ಮೇಲೆ ಬೀಳಲು ಬಯಸುವ ಇಂದಿನ ಮಕ್ಕಳಂತೆ ಅವರ ಪಾಡು. ಮೇಲೆ ಬೀಳಬೇಕಾದರೆ ಏನಾದರೂ ಮಾಡಲೇಬೇಕಾಗುತ್ತದೆ. ವಿವಿಧ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾಗುತ್ತದೆ.

ರಥಯಾತ್ರೆ-ಪಾದಯಾತ್ರೆಗಳು
ಮುಂದಿನ ವರ್ಷ ಚುನಾವಣೆ ನಡೆಯಲಿದ್ದಲ್ಲಿ ಸರಕಾರ ಈ ವರ್ಷವೇ ಎಚ್ಚೆತ್ತುಕೊಳ್ಳುವುದು. ಮೈಕೊಡವಿ ನಿಲ್ಲುವುದು. ಯಾವ ಸರಕಾರವೂ ಯಾವ ರಾಜಕೀಯ ಪಕ್ಷವೂ ಇದಕ್ಕೆ ಹೊರತಲ್ಲ. ಸದ್ಯದಲ್ಲೇ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿರುವ ನಿಮಿತ್ತ ಕಮಲಪಡೆ ನವಕರ್ನಾಟಕ ಪರಿವರ್ತನಾ ಯಾತ್ರೆಗೆ ಸಿದ್ಧವಾಗಿದೆ. ಪ್ರತಿಯಾಗಿ ಕೈಪಡೆಯೂ ಕಾಂಗ್ರೆಸ್‌ ನಡಿಗೆ ಮರಳಿ ಜನರ ಬಳಿಗೆ ಎಂದು ಪಾದಯಾತ್ರೆಗೆ ಮುಂದಾಗಿದೆ. ದಳಪತಿಯೂ ಕೈಕಟ್ಟಿ ಕೂತಿಲ್ಲ.

Advertisement

ಇಷ್ಟರಲ್ಲೇ ಅದೃಷ್ಟದ ಮನೆಹೊಕ್ಕು ಹೋಮ-ಹವನಾದಿಗಳನ್ನು ಕೈಗೊಂಡು ಮುಂದಿನ ಸರಕಾರ ತಮ್ಮದೇ ಎಂಬಂತೆ ಶುಭದ ನಿರೀಕ್ಷೆಯಲ್ಲಿದ್ದಾರೆ. ಎಲ್ಲರಿಗೂ ಅಧಿಕಾರದ ಗದ್ದುಗೆಗೇರುವ ಹುಮ್ಮಸ್ಸು ಇದ್ದದ್ದೇ.

-ಹೊಸಹೊಸ ಯೋಜನೆಗಳು-
ವಿಪಕ್ಷಗಳು ಪ್ರಬಲ ಪೈಪೋಟಿಯೊಡ್ಡುವುದರಿಂದ ಈ ದಿನಗಳಲ್ಲಿ ಅಧಿಕಾರಾರೂಢರಿಗೂ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸುಲಭದ ಮಾತಲ್ಲ. ಅವರೂ ಏನಾದರೂ ಮಾಡಬೇಕಾಗುತ್ತದೆ. ಓಟಿಗಾಗಿ ಓಲೈಕೆ ಮಾಡಬೇಕಾಗುತ್ತದೆ. ಸರಕಾರ ಒಂದೋ ಹೊಸ ಯೋಜನೆಗಳನ್ನು ಹುಟ್ಟುಹಾಕುತ್ತದೆ. ಇಲ್ಲವೇ ಇತರ ವೇದಿಕೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತದೆ. ವಿವಿಧ ಭಾಗ್ಯಗಳನ್ನು ಕೊಡಮಾಡಿದ ರಾಜ್ಯ ಸರಕಾರ ಕೆಲವು ರಜಾಭಾಗ್ಯಗಳನ್ನೂ ಕರುಣಿಸಿದೆ. ರಾಮನಿಗಿಲ್ಲದ ರಜಾಭಾಗ್ಯವನ್ನು ವಾಲ್ಮೀಕಿಗೂ ಕೃಷ್ಣನಿಗಿಲ್ಲದ ರಜಾಭಾಗ್ಯವನ್ನು ಕನಕನಿಗೂ ಕರುಣಿಸಿದೆ. ಮಾತ್ರವಲ್ಲದೆ ಸರಕಾರವೇ ಅವರ ಜಯಂತಿ ಆಚರಣೆಗೂ ಉದಾರ ಮನಸ್ಸು ಮಾಡಿದೆ.

ಕೇಂದ್ರ ಪಠ್ಯಶಾಲೆಗಳಲ್ಲಿ ಕನ್ನಡ ಕಡ್ಡಾಯ, ನಾಡಗೀತೆ ಗಾಯನ ಕಡ್ಡಾಯ, ಕನ್ನಡ ಮಾಧ್ಯಮಗಳಲ್ಲಿ ಕಲಿತವರಿಗೆ ಕೆಪಿಎಸ್‌ಸಿಯಲ್ಲಿ ಶೇ. 5 ಮೀಸಲಾತಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನೆಮಾ ಕಡ್ಡಾಯ, ಮದ್ದಿನ ಚೀಟಿಯಲ್ಲಿ ಕನ್ನಡ ಬಳಕೆ ಇವೇ ಮೊದಲಾದ ಕನ್ನಡಪರ ಯೋಜನೆಗಳು ಕರ್ನಾಟಕ ಸರಕಾರದ ಮುಂದಿವೆ. ಈ ಕನ್ನಡ ಪ್ರೀತಿಯನ್ನು ವರ್ಷಗಳ ಹಿಂದೆಯೇ ತೋರಿದ್ದರೆ ಅದಕ್ಕೆ ಚುನಾವಣಾ ಕಮಟು ತಟ್ಟುತ್ತಿರಲಿಲ್ಲ. ಅದು ಚುನಾವಣಾ ಗಿಮಿಕ್ಕು ಅನಿಸುತ್ತಿರಲಿಲ್ಲ.

-ಹಳೇ ಪ್ರಕರಣಗಳಿಗೆ ಮರುಜೀವ-
ಲೇಖನಾರಂಭದಲ್ಲಿ ಪ್ರಸ್ತಾವಿಸಿದಂತೆ ಶತ್ರುಬಲವನ್ನು ಕುಗ್ಗಿಸುವುದೂ ರಣತಂತ್ರಗಳಲ್ಲೊಂದು. ಈ ನಿಟ್ಟಿನಲ್ಲಿ ಆಡಳಿತ ಪಕ್ಷವಿರಲಿ ವಿಪಕ್ಷವಿರಲಿ, ಇತರರ ಹುಳುಕು ಹುಡುಕುವುದರಲ್ಲೇ ಕಾಲ ಕಳೆಯುತ್ತದೆ. ತಮ್ಮ ಜಾಣತನ ಬಳಸಿ ಹಳೇ ಪ್ರಕರಣಗಳನ್ನು ಹುಡುಕಿ ಹೊರಗೆಳೆದು ಮರುಜೀವ ತುಂಬುತ್ತದೆ. ಶತ್ರುಬಲ ಹಣಿಯಲು ಹವಣಿಸುತ್ತದೆ. ಹುಡುಕಿದರೆ ಹುಳುಕಿಗೇನೂ ಕೊರತೆಯಿಲ್ಲ. ಒಬ್ಬರಿಗೆ ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್‌ ಪ್ರಕರಣ, ಇನ್ನೊಬ್ಬರಿಗೆ ಡಾ| ಶಿವರಾಮ ಕಾರಂತ ಬಡಾವಣೆ ಡಿನೋಟಿಫೈ ಪ್ರಕರಣ ಸಾಕು. ಯಾವುದೇ ಇದಮಿತ್ಥಂ ಎಂದು ಇತ್ಯರ್ಥ ಕಾಣದೇ ಇದ್ದರೂ ದ್ವೇಷ ರಾಜಕಾರಣಕ್ಕೆ ಸಾಕು. ಆರೋಪ-ಪ್ರತ್ಯಾರೋಪದಲ್ಲಿ ಒಂದಿಷ್ಟು ಕಾಲಹರಣ ಮಾಡಬಹುದು.

-ಪ್ರಚಾರಪ್ರಿಯತೆ-
ಜನಪರ ಯೋಜನೆಯೊಂದು ಜನರನ್ನು ತಲುಪಿ ನಿಜವಾದ ಫ‌ಲಾನುಭವಿಗಳು ಅದರ ಫ‌ಲವುಣ್ಣುವಂತಿದ್ದರೆ ಪ್ರಚಾರದ ಅಗತ್ಯವಿಲ್ಲ. ಆದರೆ ಇತ್ತೀಚೆಗೆ ಏನೇ ಕೈಗೊಂಡರೂ ಅದನ್ನು ಜನರಿಗೆ ತಲುಪಿಸಲು ದೊಡ್ಡ ಸಮಾರಂಭವನ್ನೇ ಹಮ್ಮಿಕೊಳ್ಳಲಾಗುತ್ತದೆ. ಅಧಿಕಾರಕ್ಕೆ ಬಂದು ವರ್ಷ ತುಂಬಿದರೆ ಸಾಕು. ಭರ್ಜರಿಯಾಗಿ ಸಾಧನಾ ಸಮಾವೇಶ ಕೈಗೊಳ್ಳಲಾಗುತ್ತದೆ. ಅಷ್ಟೇಕೆ? ರಸ್ತೆಗೆ ಡಾಮರು ಪೂಸಿದರೂ ಸಾಕು, ಫ್ಲೆಕ್ಸ್‌ ಹರಿದು ಹೋಗುವ ಮುನ್ನವೇ ಡಾಮರು ಎದ್ದು ಹೋದರೂ ಪರವಾಗಿಲ್ಲ, ಫ್ಲೆಕ್ಸ್‌ ಹಾಕಿ ಅಭಿನಂದನೆ ಹಾಕಿಸಿಕೊಳ್ಳುವ ಕಾಲವಿದು. ಅಂಥದ್ದರಲ್ಲಿ ಸಾಧನಾ ಸಮಾವೇಶ ಹಮ್ಮಿಕೊಳ್ಳುವುದು ವಿಶೇಷವಲ್ಲವೆನಿಸುತ್ತದೆ. ಆದರೆ ಇಲ್ಲೂ ಅಷ್ಟೇ. ಆಡಳಿತ ಪಕ್ಷದವರು ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕಿಂತ ವಿಪಕ್ಷವನ್ನು ದೂರುವುದೇ ಹೆಚ್ಚು. ಮೊನ್ನೆ ಮೊನ್ನೆ ಅಂಬೇಡ್ಕರ್‌ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು. ಅದರಲ್ಲೂ ಅಂಬೇಡ್ಕರ್‌ ಬಗ್ಗೆ ಮಾತನಾಡಿದ್ದಕ್ಕಿಂತಲೂ ಅತಿಥಿಗಳಾಗಿ ಬಂದವರೆಲ್ಲ ಕೇಂದ್ರ ಸರಕಾರವನ್ನು ಟೀಕಿಸಿದ್ದೇ ಹೆಚ್ಚು! ರಾಜಕೀಯವೆಂದರೆ ಹಾಗೆ ತಾನೆ? ವಿರೋಧಕ್ಕಾಗಿ ವಿರೋಧ. ಓಲೈಕೆಗಾಗಿ ಯಾರು ಯಾರಿಗೋ ಜೈಕಾರ ಹಾಕಲೂ ಸಿದ್ಧ. ಮೊನ್ನೆ ಮೊನ್ನೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ಮರಾಠರನ್ನು ಓಲೈಸಲು ಮಹಾರಾಷ್ಟ್ರಕ್ಕೆ ಜೈ ಅನ್ನಲಿಲ್ಲವೆ?

ಸಂಪುಟ ವಿಸ್ತರಣೆಯಲ್ಲೂ ಚುನಾವಣಾ ವಾಸನೆ
ರಾಜಕೀಯ ಲಾಭ-ನಷ್ಟ ಲೆಕ್ಕಾಚಾರದಲ್ಲಿ ಆ ಪಕ್ಷ ಈ ಪಕ್ಷವೆಂದಿಲ್ಲ. ಕೇಂದ್ರ ಸರಕಾರ ರಾಜ್ಯ ಸರಕಾರವೆಂದಿಲ್ಲ. ಸಂಪುಟ ವಿಸ್ತರಣೆಯ ಹಿಂದೆಯೂ ಚುನಾವಣಾ ವಾಸನೆಯಿರುತ್ತದೆ. ಸದ್ಯದಲ್ಲೇ ಚುನಾವಣೆ ನಡೆಯಲಿದೆಯಷ್ಟೆ. ಮೊನ್ನೆ ಮೊನ್ನೆ ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಯಿತು. ಇನ್ನಿರುವುದು ಕೇವಲ ಅರ್ಧ ವರ್ಷ! ಆದರೂ ಇಬ್ಬರು ಹೊಸಬರನ್ನು ಸಂಪುಟಕ್ಕೆ ಸೇರಿಸಲಾಗಿದೆ. ಒಬ್ಬರನ್ನು ಕುರುಬ ಸಮುದಾಯದವರೆಂಬ ಕಾರಣಕ್ಕೆ, ಇನ್ನೊಬ್ಬರನ್ನು ದಲಿತರೆಂಬ ಕಾರಣಕ್ಕೆ ಸಚಿವರನ್ನಾಗಿ ಸೇರಿಸಿಕೊಳ್ಳಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಸಮರ್ಥಿಸಿಕೊಂಡಿದ್ದಾರೆ. ಆ ಸಮುದಾಯದವರಿಗೆ ಪ್ರಾತಿನಿಧ್ಯ ಕೊಡಬೇಕು ತಾನೆ? ಇದೇ ವೇಳೆ ಕೇಂದ್ರ ಸಚಿವ ಸಂಪುಟ ಪುನಾರಚನೆಯೂ ನಡೆದಿದೆ. ಅದರಲ್ಲೂ ರಾಜ್ಯದ ಒಬ್ಬರನ್ನು ಹೊಸದಾಗಿ ಸೇರಿಸಿಕೊಳ್ಳಲಾಗಿದೆ.

ಇನ್ನೊಬ್ಬರನ್ನು ಸದ್ಯಕ್ಕೆ ಕೈಬಿಡದೆ ಸಹಿಸಿಕೊಳ್ಳಲಾಗಿದೆ. ಉದ್ದೇಶವೇನೆಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಮಲಪಡೆ ಅಧಿಕಾರಕ್ಕೆ ಬರಬೇಕು! ಆಡಳಿತದ ಕೊನೆಯ ವರ್ಷವೆಂದ ಮೇಲೆ ಹೀಗೆಯೇ. ಚುನಾವಣಾ ಗುಂಗಿನಲ್ಲೇ ಕಳೆದು ಹೋಗುವುದು. ಕವಿ ಅಡಿಗರು ಸಾಹಿತ್ಯದಲ್ಲಿ ಮಣ್ಣಿನ ವಾಸನೆಯಿರಬೇಕೆಂದು ಪ್ರತಿಪಾದಿಸಿದ್ದಾರೆ. ಆದರೆ ಅವರಂದಂತೆ ಸಾಹಿತ್ಯದಲ್ಲಿ ಮಣ್ಣಿನ ವಾಸನೆ ಇರುವುದೋ ಬಿಡುವುದೋ ಗೊತ್ತಿಲ್ಲ. ಆದರೆ ಚುನಾವಣೆ ಹತ್ತಿರವಾದಾಗ ಸರಕಾರ ಏನೇ ಕ್ರಮ ಕೈಗೊಂಡರೂ ಅದರ ಹಿಂದೆ ಚುನಾವಣಾ ವಾಸನೆಯಂತೂ ಇದ್ದೇ ಇರುತ್ತದೆ. ಮ್ಯಾಜಿಕ್‌-35 ಇರಲಿ, ವಿಷನ್‌-100 ಇರಲಿ; ಒಟ್ಟಿನಲ್ಲಿ ಫ‌ಲಿತಾಂಶ ಬರಬೇಕು, ಅಷ್ಟೇ!

– ರಾಂ ಎಲ್ಲಂಗಳ

Advertisement

Udayavani is now on Telegram. Click here to join our channel and stay updated with the latest news.

Next