ಚಾಮರಾಜನಗರ: ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ 2146 ಮಂದಿಗೆ 16 ಕೋಟಿ ರೂ.ವಿವಿಧ ಸಾಲ ನೀಡಲಾಗಿದ್ದು, ಸರ್ಕಾರ ಯೋಜನೆಗಳನ್ನು ಅರ್ಹರಿಗೆ ತಲುಪಿಸಿ ಅವರ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸುತ್ತಿದೆ ಎಂದು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ ಅಧ್ಯಕ್ಷ ಆರ್.ರಘು ಕೌಟಿಲ್ಯ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017-18 ಸಾಲಿನಲ್ಲಿ ನಿಗಮದಿಂದ ಜಿಲ್ಲೆಯಲ್ಲಿ ಚೈತನ್ಯ ಯೋಜನೆಯ ಸಬ್ಸಿಡಿ ಸಾಲ, ಅರಿವು ಯೋಜನೆ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಸಲವತ್ತು ಕಲ್ಪಿಸಿದೆ. ಕಳೆದ 2 ವರ್ಷದಿಂದ ಕೊರೊನಾದಿಂದಾಗಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ. ಈಗ ಅನುದಾನವನ್ನು ಕ್ರೋಢೀಕರಿಸಿಕೊಂಡು ಸರ್ಕಾರದ ಅನುಮತಿ ಪಡೆದು ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸವಲತ್ತು ಕಲ್ಪಿಸುವ ಗುರಿ ನಮ್ಮದಾಗಿದೆ ಎಂದು ತಿಳಿಸಿದರು.
ಗ್ರಾಪಂ ಮಟ್ಟದಲ್ಲಿ ನಿರುದ್ಯೋಗಿ ಯುವಕ ಯುವತಿಯನ್ನು ಗುರುತಿಸಿ ಅವರಿಗೆ ನಿಗಮದಿಂದ ಕೌಶಲ್ಯ ತರಬೇತಿ ನೀಡಿ, ಆಯಾ ಗ್ರಾಮದಲ್ಲಿಯೇ ಅವರು ಸ್ವಾವಲಂಬನೆ ಜೀವನ ನಡೆಸಲು ಅನುಕೂಲ ಮಾಡಿಕೊಡಲು ನಿಗಮ ಚಿಂತನೆ ಮಾಡಿದೆ. ಯುವತಿಯರಿಗೆ ಹೊಲಿಗೆ ಯಂತ್ರ, ಯುವಕರಿಗೆ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬನೆ ಭಾರತಕ್ಕಾಗಿ ಹಳ್ಳಿಗಳ ಉದ್ಧಾರ ಮತ್ತು ಯುವಕರು ಪಟ್ಟಣಗಳಿಗೆ ವಲಸೆ ಬರುವುದನ್ನು ತಪ್ಪಿಸಲು ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.
ಇದನ್ನೂ ಓದಿ:ಕಾಂಗ್ರೆಸ್‌ನವರಿಗಷ್ಟೇ ನಿರುದ್ಯೋಗ ಕಾಡುತ್ತಿದೆ
ಅಲ್ಲದೇ ಅರಿವು ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ, ಗಂಗಾಕಲ್ಯಾಣ ಯೋಜನೆಯಡಿ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೊಳವಿ ಬಾವಿ ಕೊರೆಸಿ ಮೋಟರ್ ಪಂಪ್‌ಗ್ಳನ್ನು ನೀಡಿ, ಉತ್ತಮ ಕೃಷಿಕರನ್ನಾಗಿ ಮಾಡಲಾಗುತ್ತಿದೆ. ಪ್ರತಿ ವರ್ಷವು ಸಹ ಜಿಲ್ಲೆಗೆ ಒಂದು ಕಂಪನಿಯಿಂದ ಟೆಂಡರ್ ಆಹ್ವಾನಿಸಿ ಆ ಮೂಲಕ ಫಲಾನುಭವಿಗಳಿಗೆ ಸವಲತ್ತು ಕಲ್ಪಿಸಲಾಗಿತ್ತು. ಇದರಿಂದ ಯೋಜನೆ ವಿಳಂಬವಾಗುತ್ತಿತ್ತು. ರೈತರು ಟೆಂಡರ್ ಪಡೆದುಕೊಂಡವನ ಬಳಿ ಅಲೆಯಬೇಕಾಗಿತ್ತು. ಇದನ್ನು ತಪ್ಪಿಸಲು ಮೋಟರ್ , ಪಂಪ್‌ಸೆಟ್ ಮತ್ತು ಬೋರ್‌ವೆಲ್ ಕೊರೆಯುವ ಆಯ್ಕೆಯನ್ನು ರೈತರಿಗೆ ನೀಡಲಾಗಿದೆ. ಇನ್ನು ಸೋಲಾರ್ ಪ್ಯಾನಲ್ ಅಳವಡಿಸಿ ವಿದ್ಯುತ್ ಉಳಿತಾಯ ಮಾಡುವ ಕುರಿತು ಸಹ ಚಿಂತನೆ ಮಾಡಲಾಗಿದೆ ಎಂದು ರಘು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತೆಂಗು ಬೆಳೆಗಾರರ ಸಂಘದ ಉಪಾಧ್ಯಕ್ಷ ಪುಟ್ಟರಸು, ನಿಗಮದ ವ್ಯವಸ್ಥಾಪಕಿ ಶ್ವೇತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪರಿಷತ್‌ಗೆ ಅವಕಾಶ ನೀಡಿದರೆ ಗೆಲುವು: ರಘು ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಈ ಬಾರಿಯೂ ಸ್ಪರ್ಧೆ ಮಾಡುವವನಿದ್ದೇನೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧೆ ಮಾಡಿ ಗೆಲುವು ಸಾಧಿಸುವ ವಿಶ್ವಾಸ ನನ್ನದಾಗಿದೆ ಎಂದು ದೇವರಾಜ ಅರಸು ಅಭಿವೃದ್ಧಿ ನಿಗಮ ಅಧ್ಯಕ್ಷ ಆರ್.ರಘು ಕೌಟಿಲ್ಯ ತಿಳಿಸಿದರು.