ಬೆಂಗಳೂರು: ನಗರದ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಏಳೂವರೆ ಸಾವಿರ ಸಿಸಿ ಕ್ಯಾಮೆರಾ ಖರೀದಿಗೆ ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಿಳಿಸಿದ್ದಾರೆ. ನಗರದ ಗಾಂಧಿ ಭವನದಲ್ಲಿ ಮಂಗಳವಾರ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದಿಂದ ಆಯೋಜಿಸಿದ್ದ ವಿಡಿಯೋ ಸಂಕಲನಕಾರರ ಸಮಾವೇಶದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ನಗರದಲ್ಲಿ ಸುರಕ್ಷತೆ ಕಾಪಾಡಲು ಹಣಕಾಸಿನ ನೆರವನ್ನೂ ನೀಡಿದೆ. ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ, ವಿನೂತನ ಯೋಜನೆಗಳ ಮೂಲಕ ಸಂಚಾರ, ಅಪರಾಧ ಸೇರಿ ಎಲ್ಲಾ ರೀತಿಯಲ್ಲಿಯೂ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಸದ್ಯ ಸ್ಮಾರ್ಟ್‌ಸಿಟಿ ಯೋಜನೆ ಅನುದಾನದಲ್ಲಿ ನಗರದ ಕಣ್ಗಾವಲಿಗೆ ಹೊಸದಾಗಿ ಕ್ಯಾಮರ ಖರೀದಿಸುವ ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.
ತರಬೇತಿ ಕಾರ್ಯಾಗಾರ ನಡೆಸಿ: ಪೊಲೀಸರಿಗೆ ಪ್ರತಿಯೊಂದಕ್ಕೂ ದಾಖಲೆಗಳು ಮುಖ್ಯ. ಆ ಪೈಕಿ ಗುಣಮಟ್ಟದ ಛಾಯಾಚಿತ್ರ ಅತಿಮುಖ್ಯವಾಗಿದೆ. ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಒಬ್ಬ ಛಾಯಾಗ್ರಾಹಕನ ಅಗತ್ಯವಿದೆ. ಪೊಲೀಸ್ ಇಲಾಖೆಯಲ್ಲಿನ ಕ್ಯಾಮೆರಾ ಬಳಕೆ ಸಂಬಂಧ ಪೊಲೀಸರಿಗೆ ತರಬೇತಿ ನೀಡಲಾಗುವುದು. ಈ ನಿಟ್ಟಿನಲ್ಲಿ ಸಂಘದಿಂದ ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಫೋಟೋಗ್ರಫಿ ಸಂಬಂಧ 2 ದಿನ ತರಬೇತಿ ಕಾರ್ಯಾಗಾರ ನಡೆಸಬೇಕೆಂದರು.
ಕೌಶಲ್ಯ ಹೊಂದಿರುವವರು ಕಡಿಮೆ: ಛಾಯಾಚಿತ್ರಗಾರರು ಸೆರೆ ಹಿಡಿದ ಚಿತ್ರಗಳು ಎಂದಿಗೂ ಶಾಶ್ವತ. ಅವರು ಸೂರ್ಯನಂತೆಯೇ ನಿತ್ಯವೂ ಪ್ರಜ್ವಲಿಸುತ್ತಿರುತ್ತಾರೆ. ಛಾಯಾಗ್ರಹಣದಲ್ಲಿ ಸಾಕಷ್ಟು ಸಾಫ್ಟ್ವೇರ್, ತಂತ್ರಜ್ಞಾನ ಅಭಿವೃದ್ಧಿಯಾದರೂ ಕೌಶಲ್ಯ ಹೊಂದಿದ ಛಾಯಾಗ್ರಾಹಕ ಸೆರೆಹಿಡಿದ ನೈಜ ದೃಶ್ಯ, ಚಿತ್ರಕ್ಕೆ ಸಮನಲ್ಲ ಎಂದರು. ಸಂಘದ ಅಧ್ಯಕ್ಷ ಎಸ್.ಪರಮೇಶ್ವರ್, ಛಾಯಾಗ್ರಾಹಕರು ಹಲವಾರು ಸಂದರ್ಭದಲ್ಲಿ ಪೊಲೀಸರಿಂದ ವಿವಿಧ ರೀತಿಯ ಕಿರುಕುಳಕ್ಕೆ ಒಳಗಾಗುತ್ತಿರುವ ವರದಿಗಳು ಕಂಡು ಬಂದಿವೆ.
ಈ ಸಂಬಂಧ ಕ್ರಮ ಕೈಗೊಳ್ಳಬೇಕು. ಕಿರುಕುಳ ತಪ್ಪಿಸಬೇಕು ಹಾಗೂ ಅಧಿಕವಾಗುತ್ತಿರುವ ಕ್ಯಾಮೆರಾಗಳ ಕಳ್ಳತನ ತಡೆಯಬೇಕು ಎಂದು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ವಾರ್ತಾ ಮತ್ತು ಸಂಕರ್ಪ ಇಲಾಖೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಸಂಘದ ಉಪಾಧ್ಯಕ್ಷರಾದ ಮಹದೇವ, ರವಿಕುಮಾರ್, ಜಂಟಿ ಕಾರ್ಯದರ್ಶಿ ಎಚ್.ಕೆ.ವಸಂತ ಕುಮಾರ್ ಉಪಸ್ಥಿತರಿದ್ದರು.