ದೇವನಹಳ್ಳಿ: ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು ಅಭಿವೃದ್ಧಿಗಾಗಿ ಸ್ಥಳೀಯರು ಒತ್ತಾಯಿಸುತ್ತಿರುವ ಬೆನ್ನಲ್ಲೇ ಸೆ.27ರ ರಾಷ್ಟ್ರೀಯ ಪ್ರವಾಸೋದ್ಯಮ ದಿನ ಬಂದಿದೆ. ಈ ನಡುವೆಯೇ ಜಿಲ್ಲೆಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾದರಿಯಲ್ಲಿ ಪ್ರವಾಸಿ ತಾಣ ರೂಪಿಸಲು ಜಿಲ್ಲಾಡಳಿತ ಚಿಂತನೆಗೆ ಮುಂದಾಗಿರುವುದು ಪ್ರವಾಸಿಗರಿಗೆ ಮತ್ತಷ್ಟು ಖುಷಿ ತಂದುಕೊಟ್ಟಿದೆ.
ಈ ಹಿಂದಿನಿಂದಲೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕಡೆಗಣಿಸಲ್ಪಟ್ಟಿದೆ.ಜಿಲ್ಲಾಡಳಿತಇನ್ನಾದರೂಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸುವ ಅವಶ್ಯಕತೆಯಿದೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನು ಸೆಳೆಯಲು ಕಸರತ್ತು ನಡೆಯುತ್ತಿದೆ. ಈಗಾಗಲೇ ಜಿಲ್ಲೆಯ ಆಯ್ದ ಪ್ರೇಕ್ಷಣೀಯ ಸ್ಥಳಗಳಲ್ಲಿ ಯೋಜನೆ ರೂಪಿಸಿದೆ. ಟೂರಿಸ್ಟ್ ಮಿತ್ರ ರೂಪಿಸಿದ್ದು, ತಲಾ 5 ಸಿಬ್ಬಂದಿಯನ್ನು ನಿಯೋಜಿಸಿದೆ. ಪ್ರವಾಸದ ವೇಳೆ ಪ್ರವಾಸಿಗರಿಗೆ ಮಾರ್ಗದರ್ಶನ, ಪರಿಚಯ ಮಾಡಿಸುವುದರ ಜತೆಗೆ ಅಪಾಯದಂತಹ ಪರಿಸ್ಥಿತಿಯಲ್ಲಿ ರಕ್ಷಣೆ ನೀಡುವುದು ಈ ಟೂರಿಸ್ಟ್ ಮಿತ್ರ ಸಿಬ್ಬಂದಿ ಕರ್ತವ್ಯವಾಗಿದೆ ಎಂದು ಪ್ರವಾಸೋದ್ಯಮ ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಮ್ಯೂಸ್‌ಮೆಂಟ್ ಪಾರ್ಕ್ ದೊಡ್ಡ ಯೋಜನೆ ಅವಶ್ಯಕತೆ ಇದ್ದು, ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ಪಾರ್ಕ್ ನಿರ್ಮಾಣಕ್ಕೆ ಸುಮಾರು10 ಎಕರೆಭೂಮಿ ಅವಶ್ಯಕತೆ ಇದೆ. ಆದರೆ, ಇಷ್ಟೊಂದು ಭೂಮಿ ಒಂದೇ ಪ್ರದೇಶದಲ್ಲಿ ಸಿಗುವುದೇ ಎಂಬ ಪ್ರಶ್ನೆ ಕಾಡತೊಡಗಿದೆ.ಒಂದುವೇಳೆಭೂಮಿ ಲಭ್ಯವಾದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪಾರ್ಕ್ ನಿರ್ಮಾಣ ಮಾಡಬಹುದೆಂಬ ಚಿಂತನೆ ನಡೆಯುತ್ತಿದೆ.
ಕಾರ್ಯಗತವಾಗಿಲ್ಲ: ದೇವನಹಳ್ಳಿ ಕೋಟೆ ಮತ್ತು ಟಿಪ್ಪು ಜನ್ಮಸ್ಥಳ, ಕೆರೆ ಅಭಿವೃದ್ಧಿಗೆ ಈ ಹಿಂದಿನ ಕೇಂದ್ರ ಸರ್ಕಾರದ ವೀರಪ್ಪಮೊಯ್ಲಿ ಕೇಂದ್ರ ಸಚಿವರಾಗಿದ್ದಾಗ ಕಾರ್ಪೋರೇಟ್ ಸಂಸ್ಥೆಗಳಿಂದ ಅಭಿವೃದ್ಧಿಪಡಿಸಲು ಹಣ ಮೀಸಲಿಡಲಾಗಿತ್ತು. ಆದರೆ, ಅಭಿವೃದ್ಧಿ ಕಾರ್ಯಗತವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಪ್ರವಾಸಿ ತಾಣಗಳ ಪಟ್ಟಿ ಮಾಡಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಜಿಲ್ಲೆಯಲ್ಲಿ ಪ್ರವಾಸಿ ತಾಣವಾಗಿ ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂಬುದು ಸಾರ್ವಜನಿಕರ ವಾದವಾಗಿದೆ.
ನಾಲ್ಕು ತಾಲೂಕುಗಳಲ್ಲಿನ ವಿಶೇಷ ಸ್ಥಳಗಳು : ಜಿಲ್ಲೆಯ4 ತಾಲೂಕುಗಳಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ದೇವನ ಹಳ್ಳಿಯಕೋಟೆ, ಟಿಪ್ಪುಸುಲ್ತಾನ್ ಜನ್ಮಸ್ಥಳ,ಕೋಟೆ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ, ನಾಡಪ್ರಭುಕೆಂಪೆಗೌಡರ ಪೂರ್ವಿಕರಾದ ರಣಭೈರೇಗೌಡರ ಆವತಿ ಬೆಟ್ಟ, ಜೀವ ವೈವಿಧ್ಯಮಯ ತಾಣವಾದ ನಲ್ಲೂರು ಹುಣಸೆ ತೋಪು,ಕಾರಹಳ್ಳಿ ಸಮೀಪದ ದಿಬ್ಬಗಿರೇಶ್ವರ ಗಿರಿಧಾಮ, ಐತಿಹಾಸಿಕಕುಂದಾಣ ಬೆಟ್ಟ, ಆವತಿ ತಿಮ್ಮರಾಯಸ್ವಾಮಿ ಬೆಟ್ಟ, ಗಾಂಧಿ ಶತಮಾನ ತೋಟ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಾಲಯ, ಹುಲುಕುಡಿ ಬೆಟ್ಟ, ಮಧುರೆ ಶನಿಮಹಾತ್ಮ ದೇವಾಲಯ, ಮಾಕಳಿ ದುರ್ಗ ಬೆಟ್ಟ, ನೆಲಮಂಗಲದ ಸೂರ್ಯ ದೇವಾಲಯ, ಅರಿಶಿಣಕುಂಟೆ ವಿಶ್ವಶಾಂತಿ ಆಶ್ರಮ, ಸಿದ್ಧರಬೆಟ್ಟ ಪ್ರೇಕ್ಷಣೀಯ ಸ್ಥಳಗಳಿವೆ. ಜಿಲ್ಲಾಡಳಿತ ಇನ್ನಾದರೂ ಪ್ರೇಕ್ಷಣಿಕ ಸ್ಥಳಗಳನ್ನು ಗುರ್ತಿಸಿ, ಪ್ರವಾಸಿತಾಣಗಳಾಗಿ ಅಭಿವೃದ್ಧಿಗೊಳಿಸಿದರೆ, ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಜಿಲ್ಲೆಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾದರಿಯಲ್ಲಿ ಪ್ರವಾಸಿ ತಾಣ ರೂಪಿಸಲು ಚಿಂತನೆ ಮಾಡಲಾಗಿದೆ. ಜಿಲ್ಲೆಯಲ್ಲಿ ವಿವಿಧಕಡೆ ಪ್ರವಾಸೋದ್ಯಮವಿದ್ದು, ಅವುಗಳನ್ನು ಗುರ್ತಿಸುವ ಪ್ರಯತ್ನ ಮಾಡಲಾಗುವುದು.
–ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜನ ಮತ್ತು ಪ್ರವಾಸಿಗರನ್ನು ಸೆಳೆಯಲು ತಾಣಗಳನ್ನು ಪಟ್ಟಿ ಮಾಡಿ, ಪ್ರವಾಸೋದ್ಯಮಕ್ಕೆ ಯೋಜನೆ ರೂಪಿಸಲು ಮುಂದಾಗುತ್ತೇವೆ. ಅಲ್ಲದೇ, ಜಿಲ್ಲೆಯ ಪ್ರವಾಸೋದ್ಯಮ ತಾಣಗಳನ್ನು ಮತ್ತೂಮ್ಮೆ ಪರಿಶೀಲಿಸಿ, ರಸ್ತೆ ಸಂಪರ್ಕ ಮಾಹಿತಿ ಸಂಗ್ರಹಿಸಲಾಗುವುದು.
–ಮಂಗಳಗೌರಿ, ಜಿಲ್ಲಾ ಪ್ರವಾಸೋಧ್ಯಮ ಸಹಾಯಕ ನಿರ್ದೇಶಕಿ
–ಎಸ್.ಮಹೇಶ್