ಸದ್ಯ ಕೋವಿಡ್ 19 ಲಾಕ್‌ಡೌನ್ ನಿಂದಾಗಿ ಚಿತ್ರರಂಗದ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಮುಂದೆ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಪ್ಲಾನಿಂಗ್ ಮಾಡಿಕೊಳ್ಳುತ್ತ, ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.
ಅದರಂತೆ ನಟಿ ಅಮೃತಾ ಅಯ್ಯಂಗಾರ್ ಕೂಡ ಸದ್ಯಕ್ಕೆ ರೀಡಿಂಗ್, ಮೀಟಿಂಗ್, ಶೂಟಿಂಗ್ ಹೀಗೆ ಸಿನಿಮಾ ಚಟುವಟಿಕೆಗಳಿಂದ ಒಂದಷ್ಟು ಬ್ರೇಕ್ ತೆಗೆದುಕೊಂಡು ಮನೆಯಲ್ಲಿಯೇ ಆರಾಮಾಗಿದ್ದಾರೆ. ಇದೇ ವೇಳೆ ಮಾತಿಗೆ ಸಿಕ್ಕ ಅಮೃತಾ ತಮ್ಮ ಬ್ರೇಕ್ ಟೈಮ್ ಚಟುವಟಿಕೆಗಳ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.
ಈ ವರ್ಷದ ಆರಂಭದಿಂದಲೂ ಬಿಡುವಿಲ್ಲದೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆ. ಇತ್ತೀಚೆಗಷ್ಟೆ ನಾನು ಅಭಿನಯಿಸಿದ್ದ ಶಿವಾರ್ಜುನ ಸಿನಿಮಾ ರಿಲೀಸ್ ಆಗಿತ್ತು. ಒಳ್ಳೆಯ ಓಪನಿಂಗ್‌ಪಡೆದುಕೊಂಡು ಸಿನಿಮಾ ಓಡುತ್ತಿರುವಾಗಲೇ ಎಲ್ಲಾ ಕಡೆ ಲಾಕ್‌ಡೌನ್ ಅನೌನ್ಸ್ ಆಯ್ತು. ಇನ್ನು ನಾನು ಮಾಡುತ್ತಿರುವ ಒಂದೆರಡು ಸಿನಿಮಾಗಳ ಶೂಟಿಂಗ್ ಕೂಡ ಸದ್ಯಕ್ಕೆ ಪೋಸ್ಟ್ ಪೋನ್ ಆಗಿದೆ. ಹೀಗಾಗಿ ತೀರಾ ಅನಿರೀಕ್ಷಿತವಾಗಿ ಈಗ ನನಗೊಂದು ಬ್ರೇಕ್ ಸಿಕ್ಕಿದೆ ಎನ್ನುತ್ತಾರೆ ಅಮೃತಾ ಅಯ್ಯಂಗಾರ್.
ಕಳೆದ ಒಂದೂವರೆ ವರ್ಷದಿಂದ, ಒಂದರ ಹಿಂದೊಂದು ಒಳ್ಳೆಯ ಸಿನಿಮಾಗಳ ಆಫರ್ ಸಿಗುತ್ತಿರುವುದ ರಿಂದ, ಹೆಚ್ಚಿನ ಸಮಯ ಕೆಲಸಗಳಿಂದಾಗಿ ಮನೆಯಿಂದ ಹೊರಗೆ ಇರುತ್ತಿದೆ. ಇದರಿಂದ, ಮನೆಯವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ಈಗ ಇಂಥದ್ದೊಂದು ಹಠಾತ್ ಬ್ರೇಕ್ ಸಿಕ್ಕಿರುವುದರಿಂದ, ಇಡೀ ದಿನ ಸಂಪೂರ್ಣ ಸಮಯವನ್ನು ಮನೆಯವರೊಂದಿಗೆ ಕಳೆಯುತ್ತಿದ್ದೇನೆ ಎನ್ನುತ್ತಾರೆ ಅಮೃತಾ.
ಸದ್ಯ ಮನೆಯಲ್ಲಿ ಒಂದಷ್ಟು ವರ್ಕೌಟ್ ಮಾಡುತ್ತೇನೆ. ಡ್ಯಾನ್ಸ್ ಪ್ರಾಕ್ಟೀಸ್, ಒಳ್ಳೆಯ ಸಿನಿಮಾಗಳನ್ನ ನೋಡುವುದು, ಮನೆಯಲ್ಲಿ ಏನಾದ್ರೂ ಸಣ್ಣಪುಟ್ಟ ಕೆಲಸಗಳನ್ನ ಮಾಡುವುದು, ಮುಂದೆ ಮಾಡಬೇಕಾದ ಸಿನಿಮಾಗಳ ಬಗ್ಗೆ ಒಂದಷ್ಟು ಚರ್ಚೆ, ಹೀಗೆ ಲಾಕ್ ಡೌನ್ ದಿನಚರಿ ಮುಂದುವರೆದಿದೆ ಎನ್ನುತ್ತಾರೆ ಅಮೃತಾ.