ಬೆಂಗಳೂರು: ಜೂನ್ ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿಗೆ ಚಿಂತನೆ ನಡೆಸುತ್ತಿದ್ದೇವೆ. ಜೂನ್ ಎರಡು ಅಥವಾ ಮೂರನೇ ವಾರದಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಯೋಜನೆ ನಡೆಯುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ತಮ್ಮ ಫೇಸ್‌ಬುಕ್ ಲೈವ್ ಮೂಲಕ ಈ ವಿಷಯ ಸ್ಪಷ್ಟಪಡಿಸಿದ್ದಾರೆ.ಒಂದು ಪರೀಕ್ಷಾ ಕೊಠಡಿಯಲ್ಲಿ 24 ಮಕ್ಕಳನ್ನು ಕುಳಿಸುತ್ತೇವೆ. ಸಾಮಾಜಿಕ ಅಂತರದ ಅಡಿಯಲ್ಲಿ ಕೆಲವು ಬದಲವಾಣೆ ಮಾಡುತ್ತೇವೆ. ಮಾಸ್ಕ್ ಮತ್ತು ಸ್ಯಾನಿಟೈಜರ್ ವ್ಯವಸ್ಥೆ ಮಾಡುತ್ತೇವೆ.
ಊರಗೆ ಹೋದವರಿಗೆ ಸಮೀಪದ ಶಾಲೆಯಲ್ಲೇ ಪರೀಕ್ಷೆ ಬರೆಯಲು ಅನುಮತಿ ನೀಡಲು ಎಸ್ಸೆಸ್ಸೆಲ್ಸಿ ಬೋರ್ಡ್ ಚಿಂತನೆ ಮಾಡುತ್ತೇವೆ. ಪಾಲಕರು ಅಥವಾ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ. ಮಕ್ಕಳ ಹಿತ ಕಾಪಾಡಿಕೊಂಡು ಪರೀಕ್ಷೆ ಮಾಡಲಿದ್ದೇವೆ ಎಂದರು.
ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿ ಕನಿಷ್ಠ 15 ದಿನ ಕಾಲಾವಕಾಶ ನೀಡಲಿದ್ದೇವೆ. ಪರಿಸ್ಥಿತಿ ತಿಳಿಯಾದ ನಂತರವೇ ಪರೀಕ್ಷೆ ಮಾಡಲಿದ್ದೇವೆ ಎಂದರು.
ಕೋವಿಡ್-19 ಜೀವನದ ಭಾಗವಾಗಲಿದ್ದು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಸಾಕಷ್ಟು ದಿನ ಬಳಸಬೇಕಿದೆ ಎಂದು ಸಚಿವರು ಹೇಳಿದರು.
ಮುಂದಿನ ವರ್ಷದ ಪಠ್ಯ ಪುಸ್ತಕ ಹಂಚಿಕೆಗೆ ಕ್ರಮ ತೆಗೆದುಕೊಂಡಿದ್ದೇವೆ. ಹಳೇ ಪುಸ್ತಕವನ್ನು ಹಿಂದಿನ ತರಗತಿ ಮಕ್ಕಳಿಗೆ ನೀಡಲು ಸಚಿವರು ಸೂಚನೆ ನೀಡಿದ್ದು, 9ನೇ ತರಗತಿ ಮಕ್ಕಳು ತಮ್ಮ ಪಠ್ಯಪುಸ್ತಕಗಳನ್ನು 8ನೇ ತರಗತಿ ಮಕ್ಕಳಿಗೆ ನೀಡಬೇಕು ಎಂದು ಸಲಹೆ ನೀಡಿದರು.