Advertisement

ಶಾಲೆಗಳ ವಿಲೀನಕ್ಕೆ ಚಿಂತನೆ: ಶಿಕ್ಷಣ ಸಚಿವ ನಾಗೇಶ್‌

03:52 PM Apr 13, 2022 | Team Udayavani |

ಆಲಮಟ್ಟಿ: ಒಂದೇ ಗ್ರಾಮ ಹೊಂದಿದ ಗ್ರಾಪಂಗಳಲ್ಲಿ ಅಕ್ಕಪಕ್ಕದ ಶಾಲೆಗಳನ್ನು ಮೂಲ ಸೌಲಭ್ಯಗಳನ್ನಾಧರಿಸಿ ನಾಲ್ಕೈದು ಶಾಲೆಗಳನ್ನು ವಿಲೀನ ಮಾಡುವ ಚಿಂತನೆಯಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

Advertisement

ಮಂಗಳವಾರ ಸ್ಥಳೀಯ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಬಾಭವನದಲ್ಲಿ ನಡೆದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸರಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಹೋಬಳಿಗೊಂದು ಮಾದರಿ ಶಾಲೆ ಆರಂಭಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ. ಎರಡೂ ಶೈಕ್ಷಣಿಕ ಜಿಲ್ಲೆಗಳ ಪುನರಾವಲೋಕನ ಮಾಡಲಾಯಿತು. ಹಿಂದಿನ ಅನುಭವದ ಆಧಾರದ ಮೇಲೆ ಏನೇನು ಕೊರತೆಗಳಿವೆ ಅವುಗಳನ್ನು ಸರಿ ಮಾಡುವುದು ಹೇಗೆ ಎಂದು ಇಂದಿನ ಸಭೆಯಲ್ಲಿ ವಿಶೇಷವಾಗಿ ಚರ್ಚೆ ಮಾಡಲಾಯಿತು ಎಂದರು.

ಈ ವರ್ಷ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಮಾದರಿ ಶಾಲೆಗಳನ್ನು ಆರಂಭಿಸಲು ಯಾವ ಶಾಲೆಗಳನ್ನು ಆಯ್ಕೆ ಮಾಡಬೇಕು ಎಂದು ಸುದೀರ್ಘ‌ವಾಗಿ ಪರಿಶೀಲಿಸಿ ಪಟ್ಟಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಸರಕಾರ ಹೋಬಳಿಗೊಂದು ಮಾದರಿ  ಶಾಲೆ ಆರಂಭಿಸಲಾಗುತ್ತಿದ್ದು ಅವಶ್ಯಕತೆ ಕಂಡು ಬಂದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿ ಶಾಲೆ ಆರಂಭಿಸಲಾಗುವುದು ಎಂದು ಹೇಳಿದರು.

ಸರ್ಕಾರಿ ಶಾಲೆಗಳನ್ನು ಮೂಲಸೌಕರ್ಯ ಒದಗಿಸಿ ಮಕ್ಕಳ ನಿರೀಕ್ಷೆಗೆ ತಕ್ಕಂತೆ ನಮ್ಮ ಶೈಕ್ಷಣಿಕ ವ್ಯವಸ್ಥೆ ಸರಿಹೋಗದೇ ಇದ್ದರೆ ಬಡಮಕ್ಕಳಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುತ್ತದೆ ಎಂದು ತಿಳಿವಳಿಕೆ ನೀಡಲಾಗುತ್ತಿದೆ. ನಮ್ಮ ಶಾಲೆಗಳನ್ನು ಚೆನ್ನಾಗಿ ಮಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ತಿಳಿವಳಿಕೆ ನೀಡಲಾಯಿತು ಎಂದು ನುಡಿದರು.

Advertisement

ಪಿಯು ಪರೀಕ್ಷೆ ಸದ್ಯದಲ್ಲೇ ಆರಂಭಗೊಳ್ಳುತ್ತಿರುವುದರಿಂದ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಂದೆರಡು ಕಡೆಗಳಲ್ಲಿ ಲೋಪದೋಷಗಳಾಗಿವೆ. ಆ ರೀತಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕಲಿಕಾ ಚೇತರಿಕೆಗೆ ವಿಶೇಷ ಗಮನ ನೀಡುವಂತೆ ಸೂಚಿಸಲಾಗಿದೆ. ಬಿಇಒ ಅಥವಾ ಶಿಕ್ಷಕರ ಮೇಲಿನ ಬಾಕಿ ಪ್ರಕರಣಗಳಿದ್ದರೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಎಲ್ಲ ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ಇನ್ಮುಂದೆ ಕಡ್ಡಾಯವಾಗಿ ತಿಂಗಳಲ್ಲಿ 12ದಿನ ಪ್ರವಾಸ ಮಾಡಬೇಕು. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ತಿಳಿಸಲಾಗಿದೆ. ಶಿಕ್ಷಣ ಇಲಾಖೆ ದೀರ್ಘಾವಧಿಯ ಯೋಜನೆ ರೂಪಿಸುತ್ತದೆ.

ಶಾಲೆ ಎಂದರೆ ಮಕ್ಕಳು, ಶಿಕ್ಷಕರು ಹಾಗೂ ಮೂಲ ಸೌಲಭ್ಯಗಳನ್ನು ಕೂಡ ಹೊಂದಿರಬೇಕಾಗುತ್ತದೆ. ಹೀಗಾಗಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆ
ಕೊಠಡಿಗಳನ್ನು ಪ್ರತಿ ವರ್ಷ ದುರಸ್ತಿ ಮಾಡಲಾಗುತ್ತಿದೆ. ಆದರೆ ಹೊಸ ಕಟ್ಟಡಗಳನ್ನು ಆ ಶಾಲೆಯ ಅವಶ್ಯಕತೆ ಅನುಸಾರ ನಿರ್ಮಿಸಲಾಗುತ್ತಿದೆ ಎಂದರು.

ರಾಜ್ಯದ 6-7ಸಾವಿರ ಶಾಲೆಗಳಲ್ಲಿ ಮಾತ್ರ ಕೊಠಡಿ ಸೇರಿದಂತೆ ಕೆಲ ಸಮಸ್ಯೆಗಳಿವೆ. ಜಲ ಜೀವನ ಮೀಷನ್‌ನಡಿ ಎಲ್ಲ ಶಾಲೆಗಳಿಗೆ ಕುಡಿಯುವ ನೀರು ವ್ಯವಸ್ಥೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಮನರೇಗಾ ಸೇರಿದಂತೆ ವಿವಿಧ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಹನುಮಂತ ನಿರಾಣಿ, ಜಿಪಂ ಸಿಇಒ ರಾಹುಲ್‌ ಶಿಂಧೆ, ಬಾಗಲಕೋಟೆ ಸಿಇಒ ಮುಲ್ಲಾಬಾನ್‌, ಧಾರವಾಡ ವಲಯ ಅಪರ ಆಯುಕ್ತ ಎಸ್‌.ಎಸ್‌.ಬಿರಾದಾರ, ಅಪರ ಆಯುಕ್ತರ ಕಾರ್ಯಾಲಯದ ಸಹ ನಿರ್ದೇಶಕ ಗಜಾನನ ಮನ್ನಿಕೇರಿ, ಬಾಗಲಕೋಟೆ ಎಸ್‌.ಎಸ್‌.ಬಿರಾದಾರ, ಎನ್‌.ವಿ.ಹೊಸೂರ, ಎಸ್‌.ವಿ.ಬಾಡಗಂಡಿ, ಬಿ.ಕೆ.ನಂದನೂರ, ಬಿಇಒ ಸಂಗಮೇಶ ಪೂಜಾರಿ ಅವಳಿ ಜಿಲ್ಲೆಯ ಹಲವಾರು ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next