Advertisement

ಪಡಿತರದಲ್ಲಿ ಜೋಳ-ತೊಗರಿಗೆ ಚಿಂತನೆ

06:27 PM Jan 27, 2021 | Nagendra Trasi |

ಮುದ್ದೇಬಿಹಾಳ: ಉತ್ತರ ಕರ್ನಾಟಕದ ಪ್ರಮುಖ ಆಹಾರ ಪದ್ಧತಿಯ ಭಾಗವಾಗಿರುವ ಜೋಳ, ತೊಗರಿಯನ್ನು ಪಡಿತರ ವ್ಯವಸ್ಥೆಯಡಿ ವಿತರಿಸುವ ಕುರಿತು ಮುಖ್ಯಮಂತ್ರಿಗಳ ಮನವೊಲಿಸಿ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದೇನೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ತಾಲೂಕಿನ ಮಡಿಕೇಶ್ವರ, ಪಡೇಕನೂರ ಗ್ರಾಮಗಳಲ್ಲಿ ಪಿಡಬ್ಲೂಡಿಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಉಕದ ಬಡವರು, ಜನಸಾಮಾನ್ಯರು ತಮ್ಮ ದಿನನಿತ್ಯದ ಊಟದಲ್ಲಿ ಜೋಳದ ರೊಟ್ಟಿ, ತೊಗರಿ ಬೇಳೆ ಪಲ್ಯೆ, ತೊಗರಿ ಬೇಳೆ ಸಾಂಬಾರು ಬಳಸುತ್ತಾರೆ. ಇದನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸಿದರೆ ಜನಸಾಮಾನ್ಯರ ಜೊತೆಗೆ ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಬಜೆಟ್‌ ಪೂರ್ವಭಾವಿ ಸಭೆಯಲ್ಲಿಯೇ ಈ ಪ್ರಸ್ತಾವ  ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅನುಷ್ಠಾನಕ್ಕೆ ಕ್ರಮ ಕೈಕೊಳ್ಳುತ್ತೇನೆ ಎಂದರು.

12 ಲಕ್ಷ ಮೆಟ್ರಿಕ್‌ ಟನ್‌ ತೊಗರಿ: ಉಕದ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಬೀದರ, ರಾಯಚೂರು, ಕೊಪ್ಪಳ ಸೇರಿ ರಾಜ್ಯದ 15 ಜಿಲ್ಲೆಗಳಲ್ಲಿ ಪ್ರತಿ ವರ್ಷ 12 ಲಕ್ಷ ಮೆಟ್ರಿಕ್‌ ಟನ್‌ ತೊಗರಿ ಬೆಳೆಯಲಾಗುತ್ತಿದೆ. ಇದನ್ನು ಮನಗಂಡು ಆಹಾರ ಸಚಿವ ಉಮೇಶ ಕತ್ತಿಯವರು ಬಡವರಿಗೆ ತೊಗರಿ ಬೇಳೆಯನ್ನು ಕಡಿಮೆ ದರದಲ್ಲಿ ಪಿಡಿಎಸ್‌ ವ್ಯವಸ್ಥೆಯಡಿ ವಿತರಿಸುವ ಮಾತನ್ನು ಹೇಳಿದ್ದಾರೆ. ಇದನ್ನು ನಾನೂ ಬೆಂಬಲಿಸುತ್ತೇನೆ ಎಂದರು.

ಜೋಳಕ್ಕೆ ಹೆಚ್ಚಿನ ಬೆಂಬಲ ಬೆಲೆ: ಜೋಳಕ್ಕೆ ಈಗ ನೀಡುತ್ತಿರುವ ಕ್ವಿಂಟಲ್‌ಗೆ 2,600 ರೂ. ಬೆಂಬಲ ಬೆಲೆಯನ್ನು 3,500 ರೂ.ಗೆ ಹೆಚ್ಚಿಸಬೇಕೆನ್ನುವ ಪ್ರಸ್ತಾಪವನ್ನು ಸರ್ಕಾರದ ಮುಂದಿಡುತ್ತೇನೆ. ಇದರಿಂದ ಜೋಳ ಬೆಳೆಯುವ ಲಕ್ಷಾಂತರ ರೈತರು ಬದುಕು ಕಟ್ಟಿಕೊಳ್ಳಲು ನೆರವಾದಂತಾಗುತ್ತದೆ. ಪಡಿತರ ವ್ಯವಸ್ಥೆಯಡಿ ಜೋಳ ವಿತರಿಸುವುದರಿಂದಲೂ ಬಡವರಿಗೆ ಅನುಕೂಲದ ಜೊತೆಗೆ ಜೋಳದ ಮಹತ್ವವನ್ನೂ ಹೆಚ್ಚು ಮಾಡಿದಂತಾಗುತ್ತದೆ. ಹೆಚ್ಚಿನ ಪ್ರೋಟಿನ್‌
ಅಂಶವುಳ್ಳ ಜೋಳ ದೇಹಕ್ಕೆ ಉತ್ತಮ ಆಹಾರ. ದಕ್ಷಿಣ ಕರ್ನಾಟಕ ರಾಗಿಯಂತೆ ಉಕದ ಜೋಳ ಮಹತ್ವ ಪಡೆದುಕೊಳ್ಳಬೇಕು. ಕಾರ್ಡುದಾರರಿಗೆ 30 ಕೆಜಿ ಅಕ್ಕಿ ನೀಡುವ ಬದಲು ತಲಾ 10 ಕೆಜಿ ಜೋಳ, ಅಕ್ಕಿ, 1 ಕೆಜಿ ತೊಗರಿಬೇಳೆ ವಿತರಿಸುವ ಯೋಜನೆ ಇದೆ. ಇದನ್ನು ಯಾವ ರೀತಿ ವಿತರಿಸಬೇಕು ಎನ್ನುವುದು ಸರ್ಕಾರದ ಮಟ್ಟದಲ್ಲಿ ತೀರ್ಮಾನಗೊಳ್ಳಬೇಕು ಎಂದರು.

Advertisement

ಕೃಷಿ ಆಧಾರಿತ ಕೈಗಾರಿಕೆ: ಮುಂದಿನ ದಿನಗಳಲ್ಲಿ ಉಕ ಭಾಗದಲ್ಲಿ ಕೃಷಿ ಆಧಾರಿತ ಬೆಳೆಗಳಿಗೆ  ಪೂರಕವಾಗಿರುವ ಕೈಗಾರಿಕೆಗಳನ್ನು ಸ್ಥಾಪಿಸುವ ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಕೃಷಿಗೆ ಪೂರಕ ಕೈಗಾರಿಕೆಗಳು ನಮ್ಮ ಭಾಗದಲ್ಲಿ ತಲೆ ಎತ್ತತೊಡಗಿವೆ. ಮಂಗಳೂರು ಭಾಗದಲ್ಲಿ ಕುಚಲಕ್ಕಿ, ಬೆಂಗಳೂರು ಭಾಗದಲ್ಲಿ ರಾಗಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಪಡೇಕನೂರಲ್ಲಿ 2.80 ಕೋಟಿ ರೂ, ಮಡಿಕೇಶ್ವರದಲ್ಲಿ 60 ಲಕ್ಷ ರೂ.ಗಳ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.

ಪ್ರಮುಖರಾದ ಎಂ.ಆರ್‌.ಪಾಟೀಲ ವಕೀಲರು, ಜಿ.ಬಿ. ಬಿರಾದಾರ, ಜಿ.ಎನ್‌. ಪಾಟೀಲ, ಎಸ್‌.ಎಂ. ಕೇಶಪ್ಪಗೌಡ, ಬಿ.ಅರ್‌. ಪಾಟೀಲ, ರಾಮಣ್ಣ ಚಲವಾದಿ, ಬಿ.ಎಸ್‌. ಪಾಟೀಲ, ಬಸಪ್ಪ ವಗ್ಗರ, ಹನುಮಂತ್ರಾಯ ತುಂಬಗಿ, ಸೋಮಶೇಖರ ಮೇಟಿ, ಪಿಡಬ್ಲೂಡಿ ಎಇಇ ಆರ್‌.ಎಂ. ಹುಂಡೇಕಾರ, ಎಂಜಿನಿಯರ್‌ ಗಳಾದ ಅಶೋಕ ಬಿರಾದಾರ, ಸೋಮನಾಥ ಕುಳಗೇರಿ, ಧರ್ಮರಾಜ ಕಲುºರ್ಗಿ, ಸಂದೀಪ ಕುಡೂÉರ, ಹೊನ್ನಪ್ಪ ಢವಳಗಿ, ಗುತ್ತಿಗೆದಾರರಾದ  ಎ.ಎಸ್‌. ಪಾಟೀಲ, ಎ.ಜಿ. ಮಲ್ಲಿಕಾರ್ಜುನ, ಲಕ್ಷ್ಮಣ ವಡ್ಡರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next