ಬೆಂಗಳೂರು: ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್) ಅಡಿ ನಿರ್ವಹಣೆ ಮಾಡಿರುವ ಹೆದ್ದಾರಿ ಕಾಮಗಾರಿಗಳ ಬಾಕಿ ಮೊತ್ತ ಪಾವತಿಗಾಗಿ ಲಘು ಸಾಲ ಪಡೆಯಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ವರ್ಚ್ಯವಲ್ ಮೂಲಕ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತುಮಕೂರು- ಶಿವಮೊಗ್ಗ ರಾಷ್ಟೀಯ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತವರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಕಾಮಗಾರಿಗೆ ಭೂಸ್ವಾಧೀನ ಪರಿಹಾರ ಪ್ಯಾಕೇಜ್- 4ಅನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಮುಂದೆ ಆರಂಭವಾಗುವ ಹೆದ್ದಾರಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಸರ ಸಂಬಂಧಿ ಅನುಮತಿ ನೀಡಿಕೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ:ಜಗತ್ತಿನ ಅತೀ ದೊಡ್ಡ ಕೋವಿಡ್ ಲಸಿಕೆ ಅಭಿಯಾನಕ್ಕೆ ಭಾರತದಲ್ಲಿ ಚಾಲನೆ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಅಧಿಕಾರಾವಧಿಯಲ್ಲಿ ರಾಜ್ಯಕ್ಕೆ ಒಟ್ಟು 77,297 ಕೋಟಿ ರೂ. ವೆಚ್ಚದ 222 ಯೋಜನೆಗಳಿಗೆ ಮಂಜೂರಾತಿ ದೊರಕಿದ್ದು, 8,819 ಕಿ.ಮೀ. ರಸ್ತೆ ಯನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಿರುವುದು ಶ್ಲಾಘನೀಯ. ಕೋವಿಡ್-19 ಹಾವಳಿ ನಡುವೆಯೂ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಚಾರದಲ್ಲಿ ಕೇಂದ್ರ ಸಾಕಷ್ಟು ಮುತುವರ್ಜಿ ತೋರುವ ಜತೆಗೆ ಆರ್ಥಿಕ, ತಾಂತ್ರಿಕ ನೆರವು ನೀಡುತ್ತಿರುವುದಕ್ಕೆ ರಾಜ್ಯದ ಜನರ ಪರ ಅಭಿನಂದನೆ ಸಲ್ಲಿಸಲಾಗುವುದು ಎಂದು ಹೇಳಿದರು.
ದೆಹಲಿಯಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್, ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ರಜನೀಶ್ ಗೋಯೆಲ್ ಇತರರು ಪಾಲ್ಗೊಂಡಿದ್ದರು.