ಬೆಂಗಳೂರು: ಜೆಇಇ, ನೀಟ್ ಮತ್ತು ಸಿಇಟಿಯಂತಹ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ಪಿಯುಸಿಯಿಂದಲೇ ಆರಂಭಿಸಲು ಸರಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ಮಾತುಕತೆ ನಡೆಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.
ವಿಕಾಸಸೌಧದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಾಲ ತಾಣ www.getcetgo.in ಅನಾವರಣಗೊಳಿಸಿ ಹಾಗೂ ಜೆಇಇ, ನೀಟ್ ಮತ್ತು ಸಿಇಟಿಯಂತಹ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ತರಬೇತಿ ನೀಡುವ “ಗೆಟ್ -ಸೆಟ್ -ಗೋ’ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವೃತ್ತಿಪರ ಕೋರ್ಸು ಪ್ರವೇಶಕ್ಕಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ರಾಜ್ಯ ಸರಕಾರವು ಕಳೆದ ಮೂರು ವರ್ಷದಿಂದ ತರಬೇತಿ ನೀಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ವಿಧಾನ ಮಂಡಲ ಅಧಿವೇಶನ ಅನಿರ್ಧಿಷ್ಠಾವಧಿಗೆ ಮುಂದೂಡಿಕೆ
“ಗೆಟ್ ಸೆಟ್ ಗೋ’ ಜಾಲತಾಣದಲ್ಲಿ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಒಮ್ಮೆ ನೋಂದಾಯಿಸಿಕೊಂಡರೆ ಓದಿಗೆ ಅನುಕೂಲವಾಗುವ ವೀಡಿಯೋಗಳು, ಸಾರರೂಪದ ಪಿ.ಪಿ.ಟಿ.ಗಳು, ಅಭ್ಯಾಸ ಪ್ರಶ್ನೆಗಳು, ಅಧ್ಯಾಯವಾರು ಪರೀಕ್ಷೆಗಳು, ಅಣಕು ಪರೀಕ್ಷೆಗಳು ಎಲ್ಲವೂ ಉಚಿತವಾಗಿ ಸಿಗುತ್ತವೆ. ಜತೆಗೆ ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆಯನ್ನು ಎದುರಿಸಿ, ತಮ್ಮ ಅಂಕ ಮತ್ತು ಸ್ಥಾನಗಳನ್ನು ತಿಳಿದುಕೊಳ್ಳಬಹುದು ಎಂದವರು ಹೇಳಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ರವಿಚಂದ್ರನ್ ಉಪಸ್ಥಿತರಿದ್ದರು.