ಬೆಂಗಳೂರು: ನಗರದ ಆಸ್ತಿ ತೆರಿಗೆ ಸಂಗ್ರಹ ವಿಧಾನದಲ್ಲಿ ಪ್ರಮುಖ ಬದಲಾವಣೆ ತರಲು ಮುಂದಾಗಿರುವ ಸರ್ಕಾರ, ಈ ಸಂಬಂಧ ಅಭಿಪ್ರಾಯ ಕ್ರೋಢೀಕರಿಸಿ ಪೂರಕ ಪ್ರಸ್ತಾವನೆ ಸಲ್ಲಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಪತ್ರ ಬರೆದಿದೆ. ಈ ಕ್ರಮ ಸಂಕಷ್ಟದಲ್ಲಿರುವ ಪಾಲಿಕೆಗೆ ಆರ್ಥಿಕ ಚೇತರಿಕೆ ನೀಡುವ ಸಾಧ್ಯತೆ ಇದೆ.
ಕೇಂದ್ರದ ಜಿಎಸ್‌ಡಿಪಿ (ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನ)ಯಿಂದ ಹೆಚ್ಚುವರಿಯಾಗಿ ಸಾಲ ಪಡೆದುಕೊಳ್ಳುವ ಉದ್ದೇಶದಿಂದ ಕೆಲವು ಆಡಳಿತ ಸುಧಾರಣೆಗೆ ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಕೆಲವು ಆಡಳಿತ ಸುಧಾರಣೆಗೆ ಮುಂದಾಗಿದೆ. ಅದರಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಕೂಡ ಒಂದಾಗಿದೆ. ಅದರಂತೆ ಪ್ರಸ್ತುತ “ಆಸ್ತಿಯ ನಿರೀಕ್ಷಿತ ವರಮಾನ’ (ಯೂನಿಟ್ ಏರಿಯಾ ವ್ಯಾಲ್ಯು) ಆಧರಿಸಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದರ ಬದಲಿಗೆ “ಆಸ್ತಿಯ ಮೌಲ್ಯ’ (ಕ್ಯಾಪಿಟಲ್ ವ್ಯಾಲ್ಯು) ಆಧರಿಸಿ ತೆರಿಗೆ ಸಂಗ್ರಹ ಮಾಡಲು ತೀರ್ಮಾನಿಸಿದೆ.
ಇದರ ಅನುಷ್ಠಾನಕ್ಕೆ ನಿಗದಿತ ಕಾಲಾವಧಿಯಲ್ಲಿ ಪೂರಕ ಕ್ರಮ ಕೈಗೊಳ್ಳಬೇಕಿದ್ದು, ಈ ಹಿನ್ನೆಲೆಯಲ್ಲಿ ಶಾಸನಾತ್ಮಕ ತಿದ್ದುಪಡಿಗಳಿಗೆ ಪೂರಕ ಪ್ರಸ್ತಾವನೆಯನ್ನು ತಮ್ಮ (ಬಿಬಿಎಂಪಿ) ಹಂತದಲ್ಲಿ ರೂಪಿಸಿ ಅಂತಿಮಗೊಳಿಸಿ, ಕೂಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಪಾಲಿಕೆಗೆ ನಿರ್ದೇಶನ ನೀಡಿದೆ. ಒಂದು ವೇಳೆ ಈ ಮಾರ್ಪಾಡು ಅಂತಿಮಗೊಂಡರೆ, ಪಾಲಿಕೆಗೆ ಬರುವ ತೆರಿಗೆ ಆದಾಯದಲ್ಲಿ ತುಸು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಪ್ರಸ್ತುತ ಇರುವ ಪದ್ಧತಿ: ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ ಸೆಕ್ಷನ್ 108ಎ ಮತ್ತು 109ರ ವಿಧಾನವನ್ನು ತೆರಿಗೆ ಸಂಗ್ರಹದಲ್ಲಿ ಅನುಸರಿಸಲಾಗುತ್ತಿದೆ. ಅಂದರೆ ಒಂದು ವರ್ಷದಲ್ಲಿ ನಿಮ್ಮ ಆಸ್ತಿಯಿಂದ ಎಷ್ಟು ಆದಾಯ ಬರುತ್ತದೆಯೋ, ಅದರ ಶೇ. 1ತೆರಿಗೆ ವಿಧಿಸಲಾಗುತ್ತಿದೆ. ಇದು “ಆಸ್ತಿಯ ನಿರೀಕ್ಷಿತ ವರಮಾನ’ ಆಧಾರಿತ ತೆರಿಗೆಯಾಗಿದೆ. 2004 ರಲ್ಲಿ ಇದನ್ನು ನಿಗದಿಪಡಿಸಲಾಗಿತ್ತು. ಇಲ್ಲಿ ಪದ್ಧತಿಯಲ್ಲಿ ಖಾಲಿ ನಿವೇಶನಕ್ಕೆ ರಿಯಾಯ್ತಿ ಕೂಡ ಸಿಗುತ್ತಿತ್ತು. ಈಗ ಇದಕ್ಕೆ ತಿದ್ದುಪಡಿ ತಂದು, ಆಸ್ತಿಯನ್ನು ಮಾರ್ಗ ಸೂಚಿ ದರಕ್ಕೆ ಅನುಗುಣವಾಗಿ ಲೆಕ್ಕಾಚಾರ ಹಾಕಿ ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ. ಉದಾಹರಣೆಗೆ ಯಾವೊಂದು 30/40 ಚದರಡಿಯಲ್ಲಿ ಒಂದು ಕಟ್ಟಡ ಇದೆ ಎಂದುಕೊಳ್ಳೋಣ. ಅದರ ಮಾರ್ಗಸೂಚಿ ದರ ಚದರಡಿಗೆ ಸಾವಿರ ರೂ. ಎಂದಾದರೆ, 12 ಸಾವಿರ ಚದರಡಿಗೆ ಒಟ್ಟಾರೆ 12 ಲಕ್ಷ ರೂ.
ಆಗುತ್ತದೆ. ಅದಕ್ಕೆ ಇಂತಿಷ್ಟು ತೆರಿಗೆ ವಿಧಿಸಲಾ ಗು ತ್ತದೆ. ಆಗ, ಖಾಲಿ ನಿವೇಶನ ಹಾಗೂ ಕಟ್ಟಡಗಳಿಗೆ ಪ್ರತ್ಯೇಕವಾಗಿ ತೆರಿಗೆ ನಿಗದಿಯಾಗಲಿದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ಆಸ್ತಿಯ ಮಾರ್ಗಸೂಚಿ ದರ ಹೆಚ್ಚಿರುವುದರಿಂದ ತೆರಿಗೆ ಸಂಗ್ರಹ ಪ್ರಮಾಣ ಅಧಿಕವಾಗುವ ಸಾಧ್ಯತೆಯಿದೆ. ಇನ್ನು ಕೆಲವೆಡೆ ಕಡಿಮೆಯೂ ಆಗಬಹುದು.
ಕೇಂದ್ರದ ಆಫರ್? : ಅಂದಹಾಗೆ ಇದು ಏಕಾಏಕಿ ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ ಅಲ್ಲ. “ನೀವು ನಿಮ್ಮಲ್ಲಿರುವ ಆಸ್ತಿ ತೆರಿಗೆಯನ್ನು ಮಾರ್ಗಸೂಚಿ ಮೌಲ್ಯದೊಂದಿಗೆ ನೇರವಾಗಿ ಲೆಕ್ಕಹಾಕಿ ತೆರಿಗೆ ಸಂಗ್ರಹಿಸಿದರೆ, ಸಾಲದ ಮೊತ್ತವನ್ನು ಹೆಚ್ಚಿಸಲಾಗುವುದಾಗಿ’ ಕೇಂದ್ರವು 2019ರ ಕೊನೆಯಲ್ಲಿ “ಆಫರ್’ ನೀಡಿತ್ತು. ಈ ಸುಧಾರಣೆಯಿಂದ ಶೇ. 0.25 ಹೆಚ್ಚುವರಿಯಾಗಿ ಸಾಲ ಸಿಗಲಿದೆ ಎಂದೂ ನಗರಾಭಿವೃದ್ಧಿ ಇಲಾಖೆ ತಿಳಿಸಿದೆ. ಅಲ್ಲದೆ, ಬಳಕೆದಾರ ಶುಲ್ಕ ಕೂಡ ಪರಿಷ್ಕರಣೆಗೆ ಉದ್ದೇಶಿಸಲಾಗಿದೆ. ನೀರು, ಒಳಚರಂಡಿ ಮತ್ತು ನೈರ್ಮಲ್ಯ ಇತ್ಯಾದಿ ಬಳಕೆ ಮೇಲಿದ ಶುಲ್ಕ ಪರಿಷ್ಕರಣೆಗೂ ಪ್ರಸ್ತಾವನೆ ಸಲ್ಲಿಸಲು ಕೋರಲಾಗಿದೆ.
–ವಿಜಯಕುಮಾರ್ ಚಂದರಗಿ