Advertisement

ಕ್ಷೇತ್ರಕ್ಕೆ ಸುಧಾಕರ್‌ ಬಂದ್ರು ಕೈ ನಾಯಕರು ಬರಲಿಲ್ಲ

09:23 PM Aug 03, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಲಿರುವ ಗಚಿಕ್ಕಬಳ್ಳಾಪುರ ವಿಧಾನಸಭೆಯ ಉಪ ಚುನಾವಣೆಗೆ ರಾಜಕೀಯ ಪಕ್ಷಗಳು ಸದ್ದಿಲ್ಲದೇ ತಯಾರಿ ನಡೆಸುತ್ತಿದ್ದು, ಕ್ಷೇತ್ರಕ್ಕೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಎಂಟ್ರಿ ಕೊಟ್ಟ ಹೋದ ಬೆನ್ನಲ್ಲೇ ಶನಿವಾರ ಅನರ್ಹಗೊಂಡಿರುವ ಕೈ ಶಾಸಕ ಡಾ.ಕೆ.ಸುಧಾಕರ್‌ ಭೇಟಿ ನೀಡಿ ತೀವ್ರ ಕುತೂಹಲ ಕೆರಳಿಸಿದರು.

Advertisement

ರಾಜ್ಯ ರಾಜಕೀಯ ವಲಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರದ ಪತನಕ್ಕೆ ಮೈತ್ರಿ ಪಕ್ಷಗಳ ಶಾಸಕರ ರಾಜೀನಾಮೆಗೆ ಹಲವು ನಾಟಕೀಯ ಬೆಳವಣಿಗೆಗಳು ಶುರುವಾದ ನಂತರ ಡಾ.ಕೆ.ಸುಧಾಕರ್‌ ಕ್ಷೇತ್ರದ ಕಡೆಗೆ ತಲೆ ಹಾಕದೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದರು.

ಜುಲೈ 10 ರಂದು ವಸತಿ ಸಚಿವರಾಗಿದ್ದ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್‌ ಜೊತೆ ಕಾಣಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ 14 ತಿಂಗಳ ಮೈತ್ರಿ ಸರ್ಕಾರದ ಪತನಕ್ಕೆ ಅತೃಪ್ತ ಶಾಸಕರಿಗೆ ಸಾಥ್‌ ಕೊಟ್ಟು ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿ ಚರ್ಚೆಗೆ ಗ್ರಾಸವಾಗಿದ್ದರು.

ಪಕ್ಷದಿಂದ ವಜಾ: ಇದಾದ ಬಳಿಕ ಡಾ.ಕೆ.ಸುಧಾಕರ್‌ರನ್ನು ಸೇರಿದಂತೆ 17 ಮಂದಿ ಕಾಂಗ್ರೆಸ್‌, ಜೆಡಿಎಸ್‌ ಅತೃಪ್ತ ಶಾಸಕರನ್ನು ಆಗ ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿ ತೀರ್ಪು ಕೊಟ್ಟಿದ್ದರು. ಇದಾದ ಬಳಿಕ ಕಾಂಗ್ರೆಸ್‌ ಪಕ್ಷ ಕೂಡ ಅನರ್ಹಗೊಂಡ ಶಾಸಕ ಡಾ.ಕೆ.ಸುಧಾಕರ್‌ರನ್ನು ಪಕ್ಷದಿಂದ ವಜಾಗೊಳಿಸಿತ್ತು.

ಆದರೆ ಕಳೆದ ಶುಕ್ರವಾರ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಗೌರಿಬಿದನೂರು ಶಾಸಕ ಎನ್‌.ಹೆಚ್‌.ಶಿವಶಂಕರರೆಡ್ಡಿ ಭೇಟಿ ನೀಡಿ ಉಪ ಚುನಾವಣೆಗೆ ಸದ್ದಿಲ್ಲದೇ ಕಾಂಗ್ರೆಸ್‌ ಅಭ್ಯರ್ಥಿಗೆ ಮೊದಲ ಹಂತದ ಶೋಧ ಕಾರ್ಯ ನಡೆಸಿ ಹೋದ ಬೆನ್ನಲ್ಲೇ, ಸುಧಾಕರ್‌ ಕ್ಷೇತ್ರಕ್ಕೆ ಒಂದೂವರೆ ತಿಂಗಳ ನಂತರ ಕ್ಷೇತ್ರಕ್ಕೆ ಆಗಮಿಸಿ ಆಶ್ಚರ್ಯ ಮೂಡಿಸಿದರು.

Advertisement

ಕಾಣದ ಕೈ ನಾಯಕರ ದಂಡು: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಭೇಟಿ ವೇಳೆ ಅವರ ಹಿಂದೆ ಕಾಣಿಸಿಕೊಂಡಿದ್ದ ಕ್ಷೇತ್ರದ ಘಟಾನುಘಟಿ ಕಾಂಗ್ರೆಸ್‌ನ ಮಾಜಿ ಶಾಸಕರು, ಮುಖಂಡರು, ನಾಯಕರು ಡಾ.ಕೆ.ಸುಧಾಕರ್‌ ಆಗಮನದ ವೇಳೆ ಕಾಣಿಸಿಕೊಳ್ಳದೇ ತಮ್ಮದು ಏನಿದ್ದರೂ ಪಕ್ಷ ನಿಷ್ಠೆ ಎಂಬುದನ್ನು ಸಾಬೀತುಪಡಿಸಿದರು.

ಆದರೂ ಸುಧಾಕರ್‌ ಆಗಮಿಸಿದ ವೇಳೆ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು, ಅವರ ಆಪ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡು ತಮ್ಮ ನೆಚ್ಚಿನ ನಾಯಕನನ್ನು ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆಯಿತು.

ಆದರೆ ಕ್ಷೇತ್ರಕ್ಕೆ ಭೇಟಿ ಕೊಟ್ಟಾಗೆಲ್ಲಾ ಸುಧಾಕರ್‌ ಜೊತೆ ಸದಾ ಕಾಣಿಸಿಕೊಳ್ಳುತ್ತಿದ್ದ ಕೋಚಿಮುಲ್‌ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್‌, ಮಾಜಿ ಶಾಸಕರಾದ ಎಸ್‌.ಎಂ.ಮುನಿಯಪ್ಪ, ಅನುಸೂಯಮ್ಮ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್‌ ಮತ್ತಿತರ ಹಿರಿಯ ಕಾಂಗ್ರೆಸ್‌ ನಾಯಕರು ಕಾಣಿಸಿಕೊಳ್ಳದೇ ಇದ್ದದ್ದು ಮಾತ್ರ ಎದ್ದು ಕಾಣುತ್ತಿತ್ತು.

ಒಟ್ಟಿನಲ್ಲಿ ಉಪ ಚುನಾವಣೆಗೆ ಸಾಕ್ಷಿಯಾಲಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ದಿನಕ್ಕೊಂದು ರಾಜಕೀಯವಾಗಿ ನಾಟಕೀಯ ಬೆಳವಣಿಗೆಗಳು ನಡೆಯುವ ಮೂಲಕ ಉಪ ಚುನಾವಣೆ ಘೋಷಣೆಗೂ ಮೊದಲೇ ರಾಜಕೀಯ ಪಕ್ಷಗಳ ನಡುವೆ ಅಖಾಡಕ್ಕೆ ರಂಗ ಸಜ್ಜಾಗುತ್ತಿರುವುದು ಎದ್ದು ಕಾಣುತ್ತಿದೆ. ಇದರ ನಡುವೆ ಕಾಂಗ್ರೆಸ್‌ ಪಕ್ಷದಿಂದ ವಜಾಗೊಂಡು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಡಾ.ಕೆ.ಸುಧಾಕರ್‌, ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರ?

ಶಾಸಕರ ಅನರ್ಹತೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಏನೆಲ್ಲಾ ತೀರ್ಪು ಕೊಡುತ್ತೆ? ಒಂದು ವೇಳೆ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿರುವ ಡಾ.ಕೆ.ಸುಧಾಕರ್‌ಗೆ ಪ್ರಬಲ ಎದುರಾಳಿ ಯಾರು, ಯಾರೆಲ್ಲಾ ಯಾವ ಪಕ್ಷದಿಂದ ಅಭ್ಯರ್ಥಿಗಳಾಗುತ್ತಾರೆ? ಸುಧಾಕರ್‌ ಮುಂದಿನ ನಡೆ ಸ್ವತಂತ್ರವೋ ಅಥವಾ ಬಿಜೆಪಿ ಎಂಬುದರ ಬಗ್ಗೆ ಕ್ಷೇತ್ರದ ಜನ ಮಾತ್ರ ಚಿಂತನ, ಮಂಥನ ನಡೆಸುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಮೈತ್ರಿ ಸರ್ಕಾರದ ಆಡಳಿತದಲ್ಲಿ ಕ್ಷೇತ್ರಕ್ಕೆ ಹಾಗೂ ಜಿಲ್ಲೆಯ ಸಮರ್ಪಕ ಅಭಿವೃದ್ಧಿ ಆಗಲಿಲ್ಲ ಎಂದು ಮನನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಇದುವರೆಗೂ ಪಕ್ಷದ ವಿರುದ್ಧ ಮಾತನಾಡಿಲ್ಲ. ಆದರೆ ಕಾಂಗ್ರೆಸ್‌ ಪಕ್ಷದವರೇ ನನ್ನನ್ನು ವಜಾಗೊಳಿಸಿದ್ದಾರೆ. ನಾನು ಸೇರಿದಂತೆ ನಮ್ಮ ಬೆಂಬಲಿಗರು, ಕಾರ್ಯಕರ್ತರು ನಿಷ್ಠೆ, ಪ್ರಾಮಾಣಿಕತೆಯಿಂದ ಚಿಕ್ಕಬಳ್ಳಾಪುರವನ್ನು ಕಾಂಗ್ರೆಸ್‌ ಭದ್ರಕೋಟೆ ಮಾಡಿದ್ದೇವೆ. ಜನರ ಅಶೀರ್ವಾದದಿಂದ ನಾನು ಮತ್ತೆ ಸದನ ಪ್ರವೇಶಿಸುವೆ.
-ಡಾ.ಕೆ.ಸುಧಾಕರ್‌, ಅನರ್ಹ ಶಾಸಕ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next