ಕಟಪಾಡಿ: ಕುದುರೆಮುಖ ಕಾಡಿನ ನಡುವೆ ಎಸ್.ಕೆ. ಬಾರ್ಡರ್ ಸಮೀಪದ ರಸ್ತೆಯಲ್ಲಿ ಹೊತ್ತಿ ಉರಿದ ಟೂರಿಸ್ಟ್ ವಾಹನದಲ್ಲಿದ್ದ ಕಟಪಾಡಿ ಮೂಲದ ಪ್ರವಾಸಿಗರು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ.
ಕುದುರೆಮುಖದತ್ತ ಹೊರಟಿದ್ದ ಈ ತಂಡದಲ್ಲಿ ಪುರುಷರು, ಇಬ್ಬರು ಮಕ್ಕಳು, ಮಹಿಳೆಯರೂ ಸೇರಿದಂತೆ ಉಚ್ಚಿಲ, ಎರ್ಮಾಳು, ಪಣಿಯೂರು, ಕಟಪಾಡಿ, ಉಡುಪಿಯ ಭಾಗದ ಪ್ರಯಾಣಿಕರು ಚಾಲಕ ಸಹಿತ 14 ಮಂದಿ ಟೆಂಪೋದಲ್ಲಿದ್ದರು.
ಶನಿವಾರ ಎಸ್.ಕೆ. ಬಾರ್ಡರ್ ಸಮೀಪ ಟೆಂಪೋ ಟ್ರಾವೆಲರ್ನ ತಳಭಾಗದಲ್ಲಿ ಸುಟ್ಟ ವಾಸನೆಯೊಂದಿಗೆ ಹೊಗೆ ಕಾಣಿಸಿಕೊಂಡಿದ್ದು, ಮುಂಜಾಗ್ರತೆಯ ಕ್ರಮದಿಂದಾಗಿ ಪ್ರವಾಸಿಗರನ್ನು ಕೂಡಲೇ ರಸ್ತೆ ನಡುವೆ ಕೆಳಗಿಸಿದ್ದು, ತತ್ಕ್ಷಣವೇ ಟೂರಿಸ್ಟ್ ವಾಹನಕ್ಕೆ ಬೆಂಕಿಯ ಕೆನ್ನಾಲಿಗೆ ಆವರಿಸಿ ಹೊತ್ತಿ ಉರಿದಿತ್ತು. ಕಟಪಾಡಿ ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಅಖೀಲೇಶ್ ಕೋಟ್ಯಾನ್ ದಂಪತಿ ಸಹಿತ 13 ಮಂದಿ ಪ್ರವಾಸಿಗರು ಪ್ರಯಾಣಿಸುತ್ತಿದ್ದು, ದೈವ ದೇವರ ಕಾರಣಿಕದಿಂದ ಬದುಕಿದೆವು ಎನ್ನುತ್ತಾರೆ ಈ ಪ್ರವಾಸಿಗರ ತಂಡ.
ಸುಟ್ಟ ವಾಸನೆಯಿಂದ ಅಪಾಯದ ಮುನ್ಸೂಚನೆ :
ಕಟಪಾಡಿಯಿಂದ ಪ್ರತೀ ವರ್ಷದಂತೆ ತಮ್ಮ 8, 9, 10ನೇ ತರಗತಿಯಲ್ಲಿನ ಸಹಪಾಠಿಗಳ 7-8 ಕುಟುಂಬವು ಈ ಬಾರಿಯೂ ಪಿಕ್ನಿಕ್ ತೆರಳಿದ್ದು, ಎಸ್.ಕೆ. ಬಾರ್ಡರ್ ಮೊದಲು ಸಿಗುವ ಚೆಕ್ಪೋಸ್ಟ್ ದಾಟಿ 6-7 ಕಿ.ಮೀ. ಕ್ರಮಿಸಿದ ಸಂದರ್ಭ ಏಕಾಏಕಿಯಾಗಿ ಸುಟ್ಟ ವಾಸನೆ ಬಂದಿತ್ತು. ಚಾಲಕನಲ್ಲಿ ವಿಚಾರಿಸಿದಾಗ ಸಮರ್ಪಕ ಉತ್ತರ ಸಿಗಲಿಲ್ಲ. ಚಾಲಕ ಸುಮಾರು 2 ಕಿ.ಮೀ.ನಷ್ಟು ಮುಂದಕ್ಕೆ ಪ್ರಯಾಣಿಸಿದಾಗ ಅಪಾಯವನ್ನು ಗ್ರಹಿಸಿದ ಏಣಗುಡ್ಡೆ ಬಬ್ಬುಸ್ವಾಮಿ ಭಕ್ತ, ಕಾಂಗ್ರೆಸ್ ಮುಖಂಡ ಅಖೀಲೇಶ್ ಕೋಟ್ಯಾನ್ ಅವರು ತತ್ಕ್ಷಣವೇ ಎಲ್ಲರನ್ನೂ ರಸ್ತೆ ಮಧ್ಯೆ ವಾಹನದಿಂದ ಕೆಳಕ್ಕೆ ಇಳಿಸಿದರು.
ಎಲ್ಲರೂ ಕೆಳಗಿಳಿದು ನೋಡ ನೋಡುತ್ತಿದ್ದಂತೆಯೇ ಕೆಲವೇ ಕ್ಷಣದಲ್ಲಿ ಟೆಂಪೋ ಹೊತ್ತಿ ಉರಿದು ಕಣ್ಣೆದುರೇ ಸುಟ್ಟು ಕರಕಲಾಯಿತು. ಈ ನಡುವೆಯೂ ವಾಹನದಲ್ಲಿದ್ದ ತಮ್ಮ ಬ್ಯಾಗ್ಗಳನ್ನು ಹೊರತರುವಲ್ಲಿಯೂ ತಂಡ ಯಶಸ್ವಿಯಾಗಿತ್ತು. ಬಳಿಕ ಬದಲಿಯಾಗಿ ಬಂದ ಬಜಗೋಳಿ ಬಳಿಯ ಟೆಂಪೋ ಟ್ರಾವೆಲ್ಲರ್ ಮೂಲಕ ಪ್ರವಾಸವನ್ನು ಮುಂದುವರೆಸಿದ್ದಾಗಿ ಅಖೀಲೇಶ್ ಕೋಟ್ಯಾನ್ ಉದಯವಾಣಿಗೆ ಮಾಹಿತಿಯನ್ನು ನೀಡಿದ್ದಾರೆ.