Advertisement
ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಟ್ಟಂ ಬಳಿಯ ಈ ಕುಮೆ ಕೆರೆ ಸುಮಾರು 2 ಎಕ್ರೆ ಅಧಿಕ ವಿಸ್ತೀರ್ಣ ಹೊಂದಿದ್ದು ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತ್ತು. ಆದರೆ ಇದೀಗ ಒತ್ತುವರಿಯಾಗಿ ಒಂದೂವರೆ ಎಕ್ರೆಯಷ್ಟು ಮಾತ್ರ ಉಳಿದಿದೆ.
ಕೆರೆಯಲ್ಲಿ ತುಂಬಿರುವ ಭಾರಿ ಪ್ರಮಾಣದ ಹೂಳಿನಿಂದಾಗಿ ನೀರಿನ ಒರತೆಯೇ ಇಲ್ಲವಾಗಿದೆ. ಹಿಂದೆ ಮೇ ಕೊನೆಯ ವರೆಗೂ ಈ ಕೆರೆಯಲ್ಲಿ ನೀರು ತುಂಬಿಕೊಂಡಿರುತ್ತಿತ್ತಲ್ಲದೆ ಸುತ್ತಮುತ್ತಲಿನ ರೈತರು ಇದೇ ಕೆರೆಯ ನೀರನ್ನು ಉಪಯೋಗಿಸಿ ಹಿಂಗಾರು ಬೆಳೆ ಬೆಳೆಯುತ್ತಿದ್ದರು. ಒಂದು ವೇಳೆ ಕೆರೆಯಲ್ಲಿ ಹೂಳು ತೆಗೆದರೆ ಶಾಶ್ವತ ನೀರು ಸಿಗುವುದರಲ್ಲಿ ಸಂಶಯವೇ ಇಲ್ಲ , ಈ ಹಿನ್ನೆಲೆಯಲ್ಲಿ ಪುರಾತನ ಕೆರೆಯನ್ನು ಉಳಿಸುವಂತೆ ಈ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ. ಮೀನು ಹಿಡಿಯುವ ಸಂಪ್ರದಾಯ
ಪ್ರತಿ ಸೌರಮಾನ ಯುಗಾದಿಯಂದು ಜಾತಿ ಮತ ಭೇದವಿಲ್ಲದೆ ಊರಿನವರೆಲ್ಲ ಸೇರಿ ಈ ಕೆರೆಯಲ್ಲಿ ಬಲೆ ಹಾಕಿ ಮೀನು ಹಿಡಿದು ಸಂಭ್ರಮಿಸುವ ಸಂಪ್ರದಾಯ ನಡೆಯುತ್ತಿತ್ತು. ಇತ್ತೀಚಿನ ಕೆಲವೊಂದು ವರ್ಷಗಳಲ್ಲಿ ಕೆರೆಯಲ್ಲಿ ಆ ವೇಳೆ ನೀರಿನ ಪ್ರಮಾಣ ಕಡಿಮೆಯಾಗಿ ಕೆಸರು ತುಂಬಿಕೊಂಡು ಮೀನಿನ ಸಂತತಿಯೇ ಇಲ್ಲದಂತಾಗಿದೆ. ಮೀನು ಹಿಡಿಯುವ ಸಂಪ್ರದಾಯವೂ ನಿಂತು ಹೋಗಿದೆ ಎನ್ನಲಾಗಿದೆ.
Related Articles
ಸುಮಾರು 15 ವರ್ಷಗಳ ಹಿಂದೆ ಈ ಕೆರೆಯ ಹೂಳನ್ನು ತೆಗೆಯಲಾಗಿತ್ತು. ಅಲ್ಲಿಂದ ಇಂದಿನವರೆಗೂ ಇಲ್ಲಿ ಯಾವ ಕಾಮಗಾರಿಯೂ ನಡೆಯದ ಕಾರಣ ಪಾಳು ಬಿದ್ದಿದೆ. ಈಗಾಗಲೇ ಕೆರೆಯ ಅಭಿವೃದ್ಧಿಗೆ ಹಲವಾರು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಕೂಡ ಸರಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ . ಗ್ರಾಮ ಪಂಚಾಯತ್ ಕೆರೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
Advertisement
ಮುಂದಿನ ವರ್ಷ ಆರಂಭಕ್ಕೆ ಮನವಿಕಾಮಗಾರಿ ಆರಂಭಿಸಲು ಇಲಾಖೆ ಮುಂದಾಗಿ ದ್ದರೂ, ಈ ಬಾರಿ ಮಳೆ ವಿಳಂಬವಾಗಿದ್ದರಿಂದ ಕೆರೆ ನೀರನ್ನು ಬೇರೆ ಕಡೆಗೆ ಡೈವರ್ಟ್ ಮಾಡಿದರೆ ಸಮಸ್ಯೆಯಾಗಬಹುದೆಂದು ತೆಂಕನಿಡಿಯೂರು ಗ್ರಾ. ಪಂ. ಆಡಳಿತ ಕಾಮಗಾರಿಯನ್ನು ಮುಂದಿನ ವರ್ಷ ಆರಂಭಿಸುವಂತೆ ಮನವಿ ಮಾಡಿದೆ. 4 ಕೋ. ರೂ. ವೆಚ್ಚದ ಈ ಯೋಜನೆಯಲ್ಲಿ ಹೂಳೆತ್ತುವಿಕೆ, ಕೆರೆಯ ಸುತ್ತಲೂ ದಂಡೆ ರಚನೆ, ವಾಕಿಂಗ್‌ಟ್ರ್ಯಾಕ್ ಮಾಡಲಾಗುತ್ತದೆ.
-ಅರುಣ್ ಭಂಡಾರಿ, ಎ.ಇ.ಇ.,
ಸಣ್ಣ ನೀರಾವರಿ ಇಲಾಖೆ, ಉಡುಪಿ ಕೆರೆ ಅಭಿವೃದ್ಧಿಗೆ ಸಹಕಾರ
ಕೆರೆಯ ಹೂಳು ತೆಗೆದು ಸುತ್ತ ತಡೆಗೋಡೆ ನಿರ್ಮಿಸಿ ಮೇಲೆ ದಂಡೆ ಹಾಕಿ ಸುತ್ತಲೂ ಇಂಟರ್‌ಲಾಕ್ ಅಳವಡಿಸಿ ವಾಕಿಂಗ್ ಟ್ರ್ಯಾಕ್ ಮಾಡಿದರೆ ವಾಯು ವಿಹಾರಕ್ಕೆ ಯೋಗ್ಯವಾಗಿದೆ. ಜತೆಗೆ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಬಹುದು, ಅಂತರ್ಜಲ ಸಂರಕ್ಷಣೆಗೂ ಸಹಕಾರಿಯಾದಂತಾಗುತ್ತದೆ. ಈ ಬಗ್ಗೆ ಈಗಾಗಲೇ ಗಣೇಶೋತ್ಸವ ಸಮಿತಿಯ ವತಿಯಿಂದ ಎಲ್ಲ ಇಲಾಖೆಗೆ ಮನವಿ ಮಾಡಿ ಆಗ್ರಹಿಸಲಾಗಿದೆ.
– ಪ್ರಶಾಂತ್ ಕೆ. ಸಾಲ್ಯಾನ್, ಅಧ್ಯಕ್ಷರು,
ಸಾರ್ವಜನಿಕ ಗಣೇಶೋತ್ಸವ ಸಮಿತಿ, ತೊಟ್ಟಂ -ನಟರಾಜ್ ಮಲ್ಪೆ