ಮೈಸೂರು: ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದವರ ಪರಿಸ್ಥಿತಿ ಅಂತರ್ ಪಿಶಾಚಿಗಳಂತಾಗಿದೆ. ಚುನಾವಣೆಯಲ್ಲಿ ಗೆದ್ದು ತಿಂಗಳಾದರೂ ಸಚಿವ ಸ್ಥಾನ ಸಿಕ್ಕಿಲ್ಲ. ಅಮಿತ್ ಶಾ ಭೇಟಿಗೂ ಅವಕಾಶ ಕೊಟ್ಟಿಲ್ಲ. ಒಂದು ವೇಳೆ ಸಂಪುಟ ವಿಸ್ತರಣೆಯಾದರೆ ನನಗಿರುವ ಮಾಹಿತಿ ಪ್ರಕಾರ ಸರಕಾರದಲ್ಲಿ ಭಾರೀ ಸ್ಫೋಟ ಸಂಭವಿಸಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗೆದ್ದ ಮರುದಿನವೇ ಸಚಿವರಾಗುತ್ತೇವೆಂದು ದೊಡ್ಡ ಕನಸು, ಆಸೆ ಇಟ್ಟುಕೊಂಡಿದ್ದರು. ಆದರೆ ಸಚಿವ ಸಂಪುಟ ಪುನರ್‌ರಚನೆಯನ್ನೂ ಮಾಡಿಲ್ಲ. ವಿಸ್ತರಣೆಯೂ ಆಗಿಲ್ಲ. ಸಚಿವ ಸ್ಥಾನ ಕೊಡದಿದ್ದರೆ ಆಮೇಲೆ ನೋಡೋಣ ಎಂದು ಈಗಾಗಲೇ ಎಚ್.ವಿಶ್ವನಾಥ್ ಬಹಿರಂಗವಾಗಿ ಹೇಳಿದ್ದಾರೆ. ಮುಂದೆ ಏನೇನಾಗಲಿದೆ ಎಂಬುದನ್ನುನೀವೇ ಕಾದು ನೋಡಿ ಎಂದರು.
ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಚಾರ ಸಾರ್ವಜನಿಕ ಚರ್ಚೆಯ ವಿಷಯವಲ್ಲ. ಕೆಪಿಸಿಸಿ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಈ ಬಗ್ಗೆ ತನ್ನ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಿ ಬಂದಿದ್ದೇನೆ. ಇದನ್ನು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ.
-ಸಿದ್ದರಾಮಯ್ಯ, ಮಾಜಿ ಸಿಎಂ