ಸುವರ್ಣ ವಿಧಾನಸೌಧ: ನಾನು ಈಡಿಗರ ಸಮಾವೇಶ ಮಾಡಿದ ಮೇಲೆ ಮತ್ತೊಂದು ಸಮಾವೇಶ ಆಗಿದೆ. ನನ್ನ ಸಮಾವೇಶಕ್ಕೆ ಪರ್ಯಾಯ ಅಂತ ನಾನು ಹೇಳುವುದಿಲ್ಲ. ಸರಣಿ ರೂಪದಲ್ಲಿ ಸಮಾವೇಶಗಳು ನಡೆಯುತ್ತಿವೆ. ಇದು ಒಳ್ಳೆಯದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾರ್ಮಿಕವಾಗಿ ಹೇಳಿದರು.
ಸೋಮವಾರ ಸದನಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಿಂದೆಯೂ ಸರಿದಿಲ್ಲ, ಮುಂದೆಯೂ ಹೋಗಿಲ್ಲ. ಸೈಡ್‌ಲೈನ್ ಮಾಡುವುದು, ಟಾರ್ಗೆಟ್ ಮಾಡುವುದನ್ನು ಬಹಳ ವರ್ಷದಿಂದ ನೋಡಿದ್ದೇನೆ. ನನ್ನನ್ನು ಸೈಡ್‌ಲೈನ್ ಮಾಡುವವರು ಭ್ರಮನಿರಸನದಲ್ಲಿ ಇರಬೇಕು ಎಂದು ತೀಕ್ಷ್ಣವಾಗಿ ಹೇಳಿದರು.
ಸಮುದಾಯ ಒಡೆಯಲು ಈ ಸಮಾವೇಶ ನಡೆದಿದೆ ಎಂಬ ಧಾಟಿಯಲ್ಲಿ ನಾನು ಹೇಳುತ್ತಿಲ್ಲ, ಯಾವುದೇ ಸಮುದಾಯ ಒಡೆಯುವ ಕೆಲಸ ಆಗಬಾರದು. ತುಳಿತಕ್ಕೆ ಒಳಗಾದವರನ್ನು ಒಡೆಯುವ ಕೆಲಸ ಆಗಬಾರದು ಎಂಬುದು ನಮ್ಮ ಉದ್ದೇಶ ಅಷ್ಟೇ. ಸಮಾವೇಶದಲ್ಲಿ ಸಮಾಜದ ಎಲ್ಲ ಸ್ವಾಮೀಜಿಗಳು ಬಂದರೆ ಒಗ್ಗಟ್ಟು ಸಾಧ್ಯ. ಆದರೆ ಎಲ್ಲ ಸ್ವಾಮೀಜಿಗಳು ಇರಲಿಲ್ಲ, ಇದು ತಪ್ಪು ಎಂಬ ಅಭಿಪ್ರಾಯ ಸ್ವಾಮೀಜಿಗಳು ವ್ಯಕ್ತಪಡಿಸಿದ್ದರು. ಅವರ ಕೋರಿಕೆಯ ಮೇರೆಗೆ ನಾನು ಸಮಾವೇಶಕ್ಕೆ ಹೋಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಮ್ಮ ಸಮುದಾಯದಲ್ಲಿ ಇನ್ನೊಬ್ಬ ನಾಯಕನಾಗುತ್ತಾನೆ ಅಂದರೆ ಸಂತೋಷ. ಸಮಾವೇಶದಲ್ಲಿ ಏನು ಬೇಡಿಕೆ ಇಟ್ಟಿದ್ದಾರೆ ಎಂದು ಗೊತ್ತಿಲ್ಲ. ಗುರು ನಾರಾಯಣ ಅಧ್ಯಯನ ಪೀಠ ಈಗಾಗಲೇ ಪ್ರಾರಂಭ ಆಗಿದೆ. ಅದನ್ನು ಪ್ರಾರಂಭ ಮಾಡಬೇಕೆಂದು ಮುಖ್ಯಮಂತ್ರಿಗೆ ಯಾರೋ ತಪ್ಪುದಾರಿಗೆ ಎಳೆದಿದ್ದಾರೆ. ನನ್ನ ಅನುದಾನದಲ್ಲಿ 50 ಲಕ್ಷ ಕೊಟ್ಟು ಪ್ರಾರಂಭ ಮಾಡಿದ್ದೇನೆ. ಅರ್ಧದಲ್ಲಿ ನಿಂತಿದ್ದು ಪೂರ್ಣ ಮಾಡಲು ಎರಡು ಕೋಟಿ ರೂ. ಕೊಡಿ ಎಂದು ಕೇಳಿದ್ದೇನೆ. ಇದಕ್ಕಾಗಿ ಎರಡು ವರ್ಷದಿಂದ ಓಡಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೋಟಿ ಚನ್ನಯ್ಯ ಥೀಂ ಪಾರ್ಕ್‌ಗೆ ಐದು ಕೋಟಿ ಕೊಟ್ಟಿದ್ದೇವೆ ಎಂದಿದ್ದಾರೆ. ಅದು ಎಲ್ಲಿ ಇದೆ ಎಂದು ನನಗೆ ಗೊತ್ತಿಲ್ಲ. ಜನವರಿಯಲ್ಲಿ ಮತ್ತೂಂದು ಸಮಾವೇಶ ಮಾಡಬೇಕು ಎಂದು ಸಮಾಜದವರು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಅದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.