Advertisement

“ನನ್ನನ್ನು ಒತ್ತಡಕ್ಕೆ ಸಿಲುಕಿಸುವವರು ಜಗತ್ತಿನಲ್ಲಿ ಹುಟ್ಟಿಲ್ಲ’

12:12 AM Jul 20, 2019 | Team Udayavani |

ವಿಧಾನಸಭೆ: “ಯಾರ್ಯಾರು ಏನೇನು ಹೇಳಬೇಕೋ ಹೇಳಿ ಬಿಡಿ. ಹೊಟ್ಟೆಯಲ್ಲಿರುವುದೆಲ್ಲಾ ಹೊರಗೆ ಬರಲಿ. ಒಂದೇ ಬಾರಿ ಕ್ಲೀನ್‌ ಆಗಿ ಬಿಡಲಿ. ರಾಜ್ಯದ ಜನತೆಗೂ ಎಲ್ಲರ ವಿಚಾರ ಗೊತ್ತಾಗಲಿ’ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಆಕ್ರೋಶ ಭರಿತರಾದ ಪ್ರಸಂಗ ಶುಕ್ರವಾರ ನಡೆಯಿತು.

Advertisement

“ನನ್ನನ್ನು ಒತ್ತಡಕ್ಕೆ ಸಿಲುಕಿಸುವವರು ಈ ಜಗತ್ತಿನಲ್ಲಿ ಹುಟ್ಟಿಲ್ಲ. ಪಕ್ಷಪಾತ ಮಾಡುವ ಸ್ಥಿತಿಯೂ ನನಗೆ ಬಂದಿಲ್ಲ. ಚಾರಿತ್ರ್ಯವಧೆ ಸುಲಭ. ಆದರೆ, ಆಪಾದನೆ ಮಾಡುವವರು ತಮ್ಮ ಹಿಂದೆ ಏನಿದೆ ಎಂಬುದನ್ನು ನೋಡಿಕೊಳ್ಳಲಿ’ ಎಂದು ಹೇಳಿದರು.

ಕಲಾಪ ಆರಂಭವಾಗುತ್ತಿದ್ದಂತೆ ಬೇಸರದಿಂದಲೇ ಮಾತನಾಡಿದ ಅವರು, “ನಾನು ಇಲ್ಲಿ ವಿಶ್ವಾಸಮತವನ್ನು ನಿರ್ಣಯ ಮತಕ್ಕೆ ಹಾಕಲು ವಿಳಂಬ ಮಾಡುತ್ತಿದ್ದೇನೆ ಎಂಬ ಆರೋಪ ಬೇಡ. ಇಂದಿನ ಅಜೆಂಡಾ ಏನು ಅದರ ಬಗ್ಗೆ ಮಾತ್ರ ಮಾತನಾಡಿ. ನನಗೆ ತೀವ್ರ ನೋವಾಗಿದೆ’ ಎಂದು ಹೇಳಿದರು.

ಶಾಂತವೇರಿ ಗೋಪಾಲಗೌಡರು ಈ ಸದನದಲ್ಲಿದ್ದರು. ಅವರು ಮಂತ್ರಿಯಾಗಲಿಲ್ಲ, ಮುಖ್ಯಮಂತ್ರಿಯಾಗಲಿಲ್ಲ. ಆದರೆ, ರಾಜ್ಯದ ರಾಜಕೀಯ ಇತಿಹಾಸ ಅವರನ್ನು ಬಿಟ್ಟು ಬರೆಯಲು ಸಾಧ್ಯವಿಲ್ಲ. ಆದರೆ, ಇಂದಿನ ಸ್ಥಿತಿ ಏನಾಗಿದೆ ಎಂಬುದು ನಿಜಕ್ಕೂ ನೋವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮಾಧ್ಯಮಗಳು ಸೇರಿದಂತೆ ಯಾರೇ ಆಗಲಿ ನನ್ನ ಚಾರಿತ್ರ್ಯವಧೆ ಮಾಡುವ ಮಾತುಗಳು ಬೇಡ. ಎಲ್ಲ ಪತ್ರಿಕೆಗಳಲ್ಲೂ ನೋಡಿದ್ದೇನೆ. ನನಗೆ ಇಲ್ಲಿ ಯಾರನ್ನೋ ರಕ್ಷಣೆ ಮಾಡುವ ಅಗತ್ಯ ಇಲ್ಲ. ಆದರೆ, ಒಬ್ಬರ ಬಗ್ಗೆ ಮಾತನಾಡುವಾಗ ನಮ್ಮ ಅರ್ಹತೆ ಏನು ಎಂಬುದನ್ನೂ ತಿಳಿದುಕೊಳ್ಳಬೇಕು’ ಎಂದು ತಿಳಿಸಿದರು.

Advertisement

“ನನ್ನ ಮನೆ ನೋಡಿದರೆ ಗೊತ್ತಾಗುತ್ತದೆ. ಎಷ್ಟು ಸಾವಿರ ಕೋಟಿ ಇದೆ ಎಂದು. ನಾನು ಇಲ್ಲಿ ಹೇಗೆ ಕುಳಿತಿದ್ದೇನೆ ಗೊತ್ತಿದೆ. ನಾನು ಇಲ್ಲಿ ಒಂದು ತೀರ್ಪು ನೀಡಿಯೇ ಹೋಗುತ್ತೇನೆ. ಇತಿಹಾಸ ಮುಟ್ಟಿ ನೋಡಿಕೊಳ್ಳುವ ಹಾಗೆ ಕೊಡುತ್ತೇನೆ’ ಎಂದು ಹೇಳಿದರು.

ಚರ್ಚೆಯ ಮಧ್ಯೆ, ಬಿಜೆಪಿಯವರು ಕೋಟ್ಯಂತರ ರೂ.ಆಮಿಷವೊಡ್ಡಿ ಶಾಸಕರನ್ನು ಸೆಳೆಯುತ್ತಿದ್ದಾರೆ ಎಂದು ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಆರೋಪಿಸಿದಾಗ, “ಹೋಗುವವರು ಇದ್ದರೆ ಕೊಡ್ತಾರೆ. ನಾನು ಕೊಡುವವನೂ ಅಲ್ಲ, ತೆಗೆದುಕೊಳ್ಳುವವನೂ ಅಲ್ಲ.

ಇಲ್ಲಿ ನಿಮ್ಮ ಅವರ ನಡುವೆ ಏನು ವ್ಯಾಪಾರ, ಮಾತುಕತೆ, ಒಪ್ಪಂದ, ರಹಸ್ಯ ಆಗಿತ್ತೋ ಹಿಂದೆ ಆಗಿದೆಯೋ ಎಲ್ಲವನ್ನೂ ಹೇಳಿ ಬಿಡಿ. ನಾನು ಅದಕ್ಕೆ ಅವಕಾಶ ಮಾಡಿಕೊಡುತ್ತೇನೆ. ಒಮ್ಮೆ ಇದು ಹೊಟ್ಟೆಯಿಂದ ಹೊರಗೆ ಬರಲಿ’ ಎಂದು ತಿಳಿಸಿದರು. ಒಂದು ಹಂತದಲ್ಲಿ ಭಾವುಕರಾದ ಅವರು, ತಮ್ಮ ಮೇಲೆ ಮಾಡಲಾದ ಆರೋಪಗಳ ಬಗ್ಗೆ ಬೇಸರ ಹೊರ ಹಾಕಿದರು.

ರೂಲಿಂಗ್‌ ಕಾಯ್ದಿರಿಸಿದ್ದೇನೆ: ಸಿದ್ದರಾಮಯ್ಯ ಅವರ ಕ್ರಿಯಾಲೋಪ ಸಂಬಂಧ ಅಡ್ವೋಕೇಟ್‌ ಜನರಲ್‌ ಅವರ ಸಲಹೆ ಕೇಳಿದ್ದೆ. ಅವರು ಬಂದು ಮಾತನಾಡಿ ಒಂದು ವರದಿ ಕೊಟ್ಟಿದ್ದರು. ಇಂದು ಬೆಳಗ್ಗೆ ಸ್ವಲ್ಪ ವರದಿ ಓದಿದ್ದೇನೆ, ಇನ್ನೂ ಓದುವುದಿದೆ. ಹೀಗಾಗಿ, ಆ ಕುರಿತ ರೂಲಿಂಗ್‌ ಕಾಯ್ದಿರಿಸಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next